ಹೊನ್ನಾವರ: ಬಸ್‌ನಲ್ಲಿ ಶಕ್ತಿ ಯೋಜನೆಯ ಆಧಾರ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯೊಬ್ಬಳು ಕಂಡಕ್ಟರ್ ನೊಂದಿಗೆ ಜಗಳ ತೆಗೆದು ಕಂಡಕ್ಟರ್ ಗೆ ಮತ್ತು ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಮಹಿಳೆಯನ್ನು ಬಂಧಿಸಲಾಗಿದೆ. ಈ ಮೊದಲು ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕರ್ಕಿ ನಡುಚಿಟ್ಟೆಯ ಯಮುನಾ ಮುಕ್ರಿ (೩೫) ಎಂಬ ಮಹಿಳೆ ಬಸ್ ಕಂಡಕ್ಟರ್ ಮತ್ತು ಪಿಎಸ್ಐ ಗೆ ಹೊಡೆದು ಬಂಧಿತಳಾದ ಆರೋಪಿ.
ಕುಮಟಾದಿಂದ ಹೊನ್ನಾವರ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕುಮಟಾದಲ್ಲಿ ಯಮುನಾ ಮುಕ್ರಿ ಬಸ್ ಹತ್ತಿದ್ದಳು. ಸರ್ಕಾರದ `ಶಕ್ತಿ ಯೋಜನೆ’ಯ ಅನ್ವಯ ಆಕೆಯ ಬಳಿ ಆಧಾರ್ ಕಾರ್ಡ್ ಕೇಳಿದಾಗ ಮಹಿಳೆಯು ಆಧಾರ್ ಕಾರ್ಡ್ ನೀಡದೇ ಕಂಡಕ್ಟರಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಬಸ್ಸು ಹೊನ್ನಾವರ ಸಮೀಪಿಸುತ್ತಿದ್ದಂತೆ ಜಗಳ ನಡೆಯುತ್ತಿರುವುದರಿಂದ ಬಸ್ಸನ್ನು ನೇರವಾಗಿ ಹೊನ್ನಾವರ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿ ಎಲ್ಲರೂ ಬಸ್ಸಿನಿಂದ ಇಳಿದಿದ್ದಾರೆ.
ಮಹಿಳೆಯು ಪೊಲೀಸರ ಎದುರಿನಲ್ಲಿ ಕಂಡಕ್ಟರಗೆ ಮುಖದ ಮೇಲೆ ಹೊಡೆದಿದ್ದಾಳೆ. ಇದನ್ನು ನೋಡಿದ ಮಹಿಳಾ ಪಿಎಸ್‌ಐ ಮತ್ತು ಪೊಲೀಸ್ ಸಿಬ್ಬಂದಿ ಧಾವಿಸಿ ಬಂದು ವಿಚಾರಿಸುತ್ತಿದ್ದಾಗ ಈ ಮಹಿಳೆಯು ಲೇಡಿ ಪಿಎಸ್‌ಐ ಸಂಗಿತಾ ಅವರ ಕಪಾಳಕ್ಕೆ ಹೊಡೆದು ಅವರ ಶರ್ಟ್ನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಳೆ.
ಕರ್ತವ್ಯದಲ್ಲಿದ್ದ ಬಸ್ ಕಂಡಕ್ಟರ್ ಆದ ತನಗೆ ಮತ್ತು ಪಿಎಸ್‌ಐಗೆ ಹಲ್ಲೆ ಮಾಡಿರುವ ಆರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಸ್ ಕಂಡಕ್ಟರ್ ಭಟ್ಕಳದ ದಯಾನಂದ ರಾಮಚಂದ್ರ ಬಾಗಲ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ , ಹೊನ್ನಾವರ