ಅಂಕೋಲಾ: ಆಕರ್ಷಕ ಕೊಡುಗೆ ಬಹುಮಾನಗಳ ಆಶೆ ತೋರಿಸಿ ಜನರನ್ನು ಮರಳು ಮಾಡಿ ತಮ್ಮ ವ್ಯವಹಾರದ ವ್ಯವಸ್ಥೆಯಲ್ಲಿ ಸಿಲುಕಿಸುವ ಕೃತ್ಯ ಈ ಹಿಂದೆ ದೊಡ್ಡ ದೊಡ್ಡ ನಗರಗಳಲ್ಲಿ ಕೇಳಿ ಬರುತ್ತಿತ್ತಿದರೂ, ಇತ್ತೀಚಿನ ದಿನಗಳಲ್ಲಿ ಅದು ಉತ್ತರ ಕನ್ನಡ ಜಿಲ್ಲೆ ಮತ್ತು ಕೆಲ ತಾಲೂಕುಗಳಲ್ಲಿಯೂ ತನ್ನ ಮೋಸದ ಜಾಲ ಬೀಸಲಾರಂಭಿಸಿ ದಂತಿದೆ ಎಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.
ಅಂತರಾಷ್ಟ್ರೀಯ ಮಟ್ಟದ ಖಾಸಗಿ ನಿಯಮಿತ ಕಂಪನಿ ಎಂದುಕೊಳ್ಳುವ ಇವರು, ನ್ಯಾಶನಲ್,ಇಂಟರ್ ನ್ಯಾಶನಲ್ ಹೊಟೇಲ್ ಗಳಲ್ಲಿ ಸೆಮಿನಾರ್ ನಡೆಸುತ್ತಿದ್ದು, ನೀವು ಅದಕ್ಕೆ ಆಯ್ಕೆಯಾಗಿದ್ದೀರಿ. ನಿಮ್ಮೂರಿನ ಹತ್ತಿರದ ಹೋಟೇಲ್ ಗೆ ನೀವು ಬಂದು ಕನಿಷ್ಟ 45 ನಿಮಿಷ ಕುಳಿತರಾಯಿತು. ಅದಕ್ಕೆ ಯಾವುದೇ ಫೀ ಅಥವಾ ಹಣ ನೀಡಬೇಕಿಲ್ಲ . ಬದಲಿಗೆ ಸಂಘಟಕರೇ ನಿಮಗೆ ಉಚಿತ ಉಡುಗರೆ ನೀಡುತ್ತಾರೆ ಎಂದು ಆಸೆ ತೋರಿಸಿ,ಸಭೆಯಲ್ಲಿ ಪಾಲ್ಗೊಳ್ಳುವಂತೆ ಕರೆ ಮಾಡಿ ವಿನಂತಿಸುತ್ತಾರೆ ಎನ್ನಲಾಗಿದೆ.
ಗೃಹೋಪಯೋಗಿ ವಸ್ತುಗಳು, ರಿಯಾಯತಿ ದರದಲ್ಲಿ ನೀಡುವ, ದೂರದೂರದ ಪ್ರವಾಸಿ ತಾಣಗಳಿಗೆ ಕಡಿಮೆ ದರದ ಹಾಲಿಡೇ ಪ್ಯಾಕ್, ರಿಯಾಯತಿ ಕೂಪನ್ ನೀಡುವುದಾಗಿ ತಿಳಿಸುವ ಇವರು ದಂಪತಿಗೆ ಉಚಿತ ಉಡುಗೊರೆ ಆಶೆ ತೋರಿಸಿ ತಮ್ಮ ಬುಟ್ಟಿಗೆ ಬೀಳಿಸಿಕೊಂಡು, ಅವರು ಸಭೆಗೆ ಬಂದರೆಂದರೆ, ಅವರಿಗೆ ಊಟ-ಉಪಹಾರ – ವ್ಯವಸ್ಥೆ ಮಾಡಿ , ನಿಧಾನವಾಗಿ ತಲೆಯ ಮೇಲೆ ಎಣ್ಣೆ ಹಾಕಲು ಶುರು ಹಚ್ಚಿಕೊಳ್ಳುತ್ತಾರೆ ಎನ್ನಲಾಗಿದೆ. ಈ ವೇಳೆ ಒಂದು ಫಾರ್ಮ್ ನೀಡಿ ಅದರಲ್ಲಿ ಅವರ ಮತ್ತು ಕುಟುಂಬದ ಮತ್ತಿತರ ಮಾಹಿತಿ ನೀಡುವಂತೆ ತಿಳಿಸಲಾಗುತ್ತದೆ,
ಪೋನ್ ನಂಬರ್, ಈ ಮೇಲ್ ಐಡಿ, ತಿಂಗಳ ಆದಾಯ,ಅವರು ಬಳಸುವ ವಾಹನ ಮೊದಲಾದ ಮಾಹಿತಿ ಪಡೆಯುವುದೇ ಈ ಫಾರ್ಮ್ ಭರ್ತಿ ಮಾಡಿಕೊಳ್ಳುವ ಮುಖ್ಯ ಉದ್ದೇಶ ಎನ್ನುವುದು ಗೊತ್ತಿಲ್ಲದ ಜನರು, ತಮ್ಮನ್ನು ಕರೆದು,ಊಟ ಚಹ ತಿಂಡಿ ನೀಡಿದ ವರ ಬಣ್ಣದ ಮಾತಿಗೆ ಮರುಳಾಗಿ, ತಮ್ಮ ಅಂತಸ್ತು ತೋರಿಸುವ ಭರದಲ್ಲಿ ಎಲ್ಲಾ ವಿವರಗಳನ್ನು ಬರೆದು ಕೊಟ್ಟರೆಂದರೆ ಅವರ ಕಾಲ ಮೇಲೆ ಅವರೇ ಚಪ್ಪಡಿ ಕಲ್ಲು ಎಳೆದುಕೊಂಡಂತೆ ಎನ್ನಲಾಗಿದೆ.
ವಿವರಗಳನ್ನು ಕೊಟ್ಟ ಕೆಲವು ದಿನಗಳ ನಂತರ ಈ ಕಂಪನಿಯಿಂದ ಕರೆಗಳ ಮೇಲೆ ಕರೆ ಬಂದು ತಮ್ಮ ಶಾಖೆಗೆ ಭೇಟಿ ನೀಡುವಂತೆ ನೀವು ಅದೃಷ್ಟವಂತ ಕೂಪನ್ ವಿಜೇತರು ಎಂದು ತಿಳಿಸಲಾಗುತ್ತದೆ. ಬಹುಮಾನದ ಆಶೆಗೆ ಭೇಟಿ ನೀಡಿದರೆ ನಾಲ್ಕಾರು ಕೂಪನ್ ನೀಡಿ ಸ್ಕ್ರಾಚ್ ಮಾಡಲು ತಿಳಿಸಿ ಇಷ್ಟು ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿದರೆ ಸಾವಿರಾರು ರೂ ರಿಯಾಯತಿ ಎಂದು ತಿಳಿಸಿ ಬೇರೆ ಬೇರೆ ಮೌಲ್ಯದ ಸದಸ್ಯತ್ವದ ಕುರಿತು ತಿಳಿಸಿ ಸದಸ್ಯತ್ವ ಪಡೆಯುವಂತೆ ಮನವೊಲಿಸುವ, ಆಶೆ ಹುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತದೆ ಎನ್ನವಾದದ್ದು, ಇವರ ಮಾತಿಗೆ ಮರುಳಾಗಿ,ಸಣ್ಣಪುಟ್ಟ ಗಿಫ್ಟ್ ಸ್ವೀಕರಿಸಿ ಖುಷಿ ಪಡುವ ಮೊದಲೇ ,ಲಕ್ಷಾಂತರ ರೂಪಾಯಿಗಳ ವರೆಗಿನ ಸದಸ್ಯತ್ವ ಪಡೆದು, ಕಡೆಗೆ ಏನೂ ಇಲ್ಲದೇ ಇಂಗು ತಿಂದ ಮಂಗನಂತಾಗಿರುವ ಹಲವರು, ಈ ದೋಖಾ ವ್ಯವಹಾರದ ಕುರಿತು,ಸಾಮಾಜಿಕ ಜಾಲತಾಣ ಮತ್ತಿತರೆಡೆ ತಮಗಾದ ಮೋಸ, ಅನ್ಯಾಯ ಜಗಜ್ಜಾಹೀರು ಪಡಿಸಿ ,ಇತರರಾದರೂ ಜಾಗೃತಿಗೊಳ್ಳಲಿ ಎಂದು ಬಯಸಿ, ಮೋಸದ ಕಥೆ ಹರಿಬಿಡುತ್ತಿದ್ದಾರೆ.
ಆದರೆ ಅವು ಎಲ್ಲರನ್ನೂ ತಲುಪುವ ಮೊದಲೇ, ಆ ಮೋಸದ ಕಂಪನಿಗಳು, ಎಲ್ಲೆಡೆ ತಮ್ಮ ಮೋಸದ ಜಾಲ ವಿಸ್ತರಿಸುತ್ತಾ, ಗಾಳ ಹಾಕಿ ಬಕರಾಗಳನ್ನು ಹಿಡಿಯುತ್ತಾ, ತಿಂದುಂಡು ಸುಖವಾಗಿದ್ದಾರೆ ಎನ್ನಲಾಗಿದ್ದು, ನಿಮ್ಮೂರಿಗೂ ಬಂದು ನಿಮಗೇ ಕರೆ ಮಾಡಿ , ಉಡುಗೊರೆ ಕೊಟ್ಟು ಪಂಗನಾಮ ಇಟ್ಟರೂ ಅಚ್ಚರಿ ಪಡಬೇಕಿಲ್ಲ. ಹಾಗಾಗಿ ಪರಿಚಿತರೇ ಇರಲಿ,ಅಪರಿಚಿತರೇ ಇರಲಿ ನಿಮಗೆ ಬಣ್ಣ ಬಣ್ಣದ ಆಸೆ ತೋರಿಸಿ,ದೊಡ್ಡ ದೊಡ್ಡ ಹೋಟೆಲಿಗೆ ಕರೆದು, ಖೆಡ್ಡಾದಲ್ಲಿ ಕೆಡುಗುವ ಮುನ್ನ ನೀವೇ ಸ್ವತಃ ಎಚ್ಚರ ವಹಿಸುವುದು ಒಳಿತು ಎನ್ನುವುದು ಹಲವು ಪ್ರಜ್ಞಾವಂತರ ಅನಿಸಿಕೆಯಾಗಿದೆ. ನಿಮ್ಮೂರಿಗೆ ಬಂದು ನಿಮಗೆ ಕರೆದರೂ ಕರದಾರು ಎಚ್ಚರ ! ಎಚ್ಚರ!!.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ