ಜಾನು ನಾರಾಯಣ ನಾಯ್ಕ ವಿಧಿವಶ : ಜೂನ್ 3 ರಂದು ಬೆಳಿಗ್ಗೆ ಅಂತ್ಯ ಸಂಸ್ಕಾರ

ಅಂಕೋಲಾ : ತಾಲೂಕಿನ ಹೆಸರಾಂತ ವ್ಯಕ್ತಿಯಾಗಿದ್ದ ಬೇಳಾ ಬಂದರ ಗ್ರಾಮದ ನಿವಾಸಿ ನಾರಾಯಣ ಜಾನು ನಾಯ್ಕ (79) ಜೂನ್ 2 ರ ಭಾನುವಾರ ವಿಧಿವಶರಾದರು. ಕಳೆದ ಕೆಲ ಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಅವರು ಚಿಕಿತ್ಸೆಗೆ ಸ್ವಂದಿಸದೇ ಕೊನೆಯುಸಿರೆಳೆದಿದ್ದಾರೆ. ಅಂದಿನ ಕಾಲದಲ್ಲಿ ಓದಿದ್ದು 2 ನೇ ಇಯತ್ತೆ ಆಗಿದ್ದರೂ ಸಹ, ತನ್ನ ಸತತ ಪರಿಶ್ರಮ, ಕೆಲಸದಲ್ಲಿನ ಶೃದ್ಧೆ ಮತ್ತು ಸಮಾಜದ ಎಲ್ಲಾ ವರ್ಗದೊಂದಿಗಿನ ಹೊಂದಾಣಿಕೆಯ ಬಾಂಧವ್ಯದಿಂದಾಗಿ ಬೆಳೆದು ಬಂದಿದ್ದ ನಾರಾಯಣ ನಾಯ್ಕ, ಆರಂಭದಲ್ಲಿ ಮಸಿಕೆಂಡ ( ಚಾರ ಕೋಲ್) ಮಾವಿನ ಹಣ್ಣು ಮತ್ತಿತರ ಸಣ್ಣ ಪುಟ್ಟ ವ್ಯಾಪಾರದಿಂದ ಆರಂಭಿಸಿ ಬರಬರುತ್ತಾ ಕಟ್ಟಿಗೆ ಮತ್ತಿತರ ವ್ಯಾಪಾರ – ವಹಿವಾಟು ನಡೆಸಿದ್ದರು. ನಂತರ ಲಾರಿ ಟ್ರಾನ್ಸ್ ಪೋರ್ಟ ಸಹ ನಡೆಸಿ ಗಮನ ಸೆಳೆದಿದ್ದರು.

ಬಳಿಕ ಇವರು ಆರಂಭಿಸಿದ ಭೂಮಿ ವ್ಯಾಪಾರ (ರಿಯಲ್ ಎಸ್ಟೇಟ್) ದಂಧೆ ಇವರನ್ನು ಕೈ ಹಿಡಿದು ಪಟ್ಟಣದಲ್ಲಿ ತಮ್ಮದೇ ಆದ ಕಛೇರಿ ತೆರೆದು ಬಹುತೇಕ ಯಾರೇ ಇದ್ದರೂ, ಜಾಗ ಮಾರಾಟ ಹಾಗೂ ಖರೀದಿಗೆ ಇವರನ್ನು ಹುಡುಕಿಕೊಂಡು ಬರುವಷ್ಟರ ಮಟ್ಟಿಗೆ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದರು.

ಸ್ವಂತ ಮನೆ ನಿರ್ಮಿಸಿಕೊಳ್ಳುವ,ವಾಣಿಜ್ಯ ಕಟ್ಟಡ ಕಟ್ಟುವ, ಸಣ್ಣ ಪುಟ್ಟ ಉದ್ಯಮ ನಡೆಸುವ ಹಲವರ ಕನಸು ನನಸಾಗಲು ಸಹಕಾರಿಯದವರು. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ ಅಂಚಿಗಿನ ಒಂದು ಪೆಟ್ರೋಲ್ ಪಂಪ್,ಕಾರಿನ ಮತ್ತಿತರ ಶೋರೂಮ್ ನೆಲೆಗೊಳ್ಳಲು,ಸಂಬಂಧಿಸಿದವರನ್ನು ಕರೆತಂದು, ಒಳ್ಳೆಯ ಸ್ಥಳ ತೋರಿಸಿ,ಇಲ್ಲಿಯೇ ವ್ಯಾಪಾರ ಉದ್ಯಮ ನಡೆಸುವಂತೆ ಪ್ರೇರೇಪಿಸಿದವರು.

ತಾವು ದೊಡ್ಡವರಾಗಿ ಬೆಳೆದು ಕೈ ತುಂಬ ಹಣ,ಹೆಸರು ಪ್ರತಿಷ್ಠೆ ಗಳಿಸಿದರೂ ಸಹ, ತಾನು ಈ ಹಿಂದೆ ಶಿಕ್ಷಣ ಕಲಿಯಲಾಗದ ಅಸಹಾಯಕತೆ, ಬಡತನ ಕಷ್ಟ ಮರೆಯದೇ,ಗ್ರಾಮದ ಶೈಕ್ಷಣಿಕ ಕ್ರಾಂತಿಗೆ ಉದಾರ ಮನಸ್ಸಿನಿಂದ ಶಾಲೆಯ ಒಂದೆರಡು ಕಟ್ಟಡ ಕಟ್ಟಲು ದೇಣಿಗೆ ನೀಡಿ ನೆರವಾದವರು.ಅಷ್ಟೇ ಅಲ್ಲದೆ ತಮ್ಮ ಖಾಸಗಿ ಜಾಗದಲ್ಲಿ ಕಟ್ಟಿದ ದೊಡ್ಡ ಕಟ್ಟಡವನ್ನೇ ಬಾಡಿಗೆ ರೂಪದಲ್ಲಿ ನೀಡಿ, ಇಂದು ಅದು ತಾಲೂಕಿನ ಐಟಿಐ ಕಾಲೇಜ್ ಆಗಿ,ತಾಲೂಕಿನ ಹಾಗೂ ಇತರೆಡೆಯ ಸಾವಿರಾರು ವಿದ್ಯಾರ್ಥಿಗಳ ಪಾಲಿನ ವೃತ್ತಿ ಬದುಕಿಗೆ ದಾರಿದೀಪವಾಗುವಂತೆ ಬೆಳೆಸಿದವರು.

ಆಪತ್ತ ಕಾಲದಲ್ಲಿ ಹಲವರ ಸಂಕಷ್ಟಕ್ಕೆ ಸುದ್ದಿ ಇಲ್ಲದೆ ನೆರವಾಗುತ್ತಿದ್ದ ನಾರಾಯಣ ನಾಯ್ಕ, ತನ್ನ ಸರಳ ವ್ಯಕ್ತಿತ್ವ, ಮೆದು ಮಾತು ಹಾಗೂ ನೇರ ನಡೆ ನುಡಿಗಳಿಂದ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು.ತಮ್ಮ ಆತ್ಮೀಯ ವಲಯದಲ್ಲಿ ಜಾನು ನಾರಾಯಣ ಎಂದೆ ಪರಿಚಿತರಾಗಿದ್ದ ಇವರು ಇನ್ನಿಲ್ಲವಾಗಿದ್ದು,ತಾಲೂಕಿನ ಹಾಗೂ ಜಿಲ್ಲೆಯ ಹಲವು ಗಣ್ಯರು,ನಾರಾಯಣ ನಾಯ್ಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಜೂನ್ 3ರ ಸೋಮವಾರ ಬೆಳಿಗ್ಗೆ ಮೃತದೇಹವನ್ನು ಅಂಕೋಲಾಕ್ಕೆ ತಂದು, ನಂತರ ಬೆಳಿಗ್ಗೆ 9.00 ಘಂಟೆಗೆ ತಮ್ಮ ಪೂಜ್ಯ ತಂದೆಯವರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದೆಂದು, ಮೃತರ ಮಗ ಸುಜಿತ ನಾರಾಯಣ ನಾಯ್ಕ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version