Important
Trending

ಶಿಷ್ಯನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಶಿಕ್ಷಕಿ : ವಿದೇಶದಿಂದ ತಂದ ವಾಚಿನ ಕಥೆ ಹೇಳಿ ಮೆಚ್ಚುಗೆ: ಭಾವುಕರಾದ ನಿವೃತ್ತ ಶಿಕ್ಷಕಿ

ಅಂಕೋಲಾ: ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಬಾರದು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು, ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ ಹೇಳಿದರು. ಅವರು ದಿನಕರ ವೇದಿಕೆ ಅಂಕೋಲಾ ಇದರ ಆಶ್ರಯದಲ್ಲಿ ದಿವಂಗತ ಅಬ್ದುಲ್ಲಾ ಶೇಖ ಇವರ ಸ್ಮರಣಾರ್ಥ ಅವರ ಪುತ್ರ ರಫೀಖ ಶೇಖ ಅವರ ಪ್ರಾಯೋಜಕತ್ವದಲ್ಲಿ ಪಟ್ಟಣದ ಕೆಲ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ನೋಟಬುಕ್ ಗಳನ್ನು ವಿತರಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕಿ ಶಿವಮ್ಮ ನಾಯಕ ಮತ್ತು ಅವರದೇ ವಿದ್ಯಾರ್ಥಿಯಾಗಿದ್ದ ಸದ್ಯ ವಿದೇಶದಲ್ಲಿ ಉದ್ಯಮಿಯಾಗಿರುವ ರಫೀಖ ಶೇಖ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರಾದ ಶಿವಮ್ಮ ನಾಯಕ ಮಾತನಾಡಿ ನಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ತಲುಪಿದಾಗ ಮತ್ತು ನಮ್ಮನ್ನು ಗುರುತಿಸಿ ಗೌರವಿಸಿದಾಗ ನಾವು ಮಾಡಿದ ವೃತ್ತಿಯ ಸಾರ್ಥಕತೆ ಮೂಡುತ್ತದೆ. ರಫೀಖ ಶೇಖ ಉತ್ತಮ ವಿದ್ಯಾರ್ಥಿಯಾಗಿದ್ದ ಈಗಲೂ ಅದೇ ಗುಣಗಳಿಂದ ಎಲ್ಲರಿಗೂ ಮಾದರಿ ಎಂದರು.

ರಫೀಕ ಶೇಖ ಮಾತನಾಡಿ ನನ್ನಲ್ಲಿ ಉತ್ತಮ ವ್ಯಕ್ತಿತ್ವವನ್ನು ತುಂಬಿದ ಶಿಕ್ಷಕಿಯನ್ನು ಅವರ ಹುಟ್ಟುಹಬ್ಬದ ದಿನವೇ ಸನ್ಮಾನಿಸಿ ಗೌರವಿಸಲು ಅವಕಾಶ ಸಿಕ್ಕಿರುವದು ಇದೊಂದು ಸೌಭಾಗ್ಯವೇ ಸರಿ. ಕಳೆದೆರಡು ವರ್ಷಗಳಿಂದ ಉತ್ತಮ ಕಾರ್ಯಗಳಿಂದ ಮನೆಮಾತಾಗಿರುವ ದಿನಕರ ವೇದಿಕೆ ಇಂತಹ ಅಪೂರ್ವ ಅವಕಾಶವನ್ನು ಒದಗಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಕಲಿಸಿದ ಗುರುಗಳನ್ನು ಗೌರವಿಸುವದು ನಮ್ನ ಆದ್ಯ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ ಮಾತನಾಡಿ ಮನುಷ್ಯ ತಾನು ಮಾಡು ಸೇವೆ, ಕೊಡುಗೆಗಳ ಮುಖಾಂತರ ಗುರುತಿಸಿಕೊಳ್ಳಬೇಕೆ ಹೊರತು ಪ್ರಚಾರದಿಂದಲ್ಲ. ರಫೀಕ ಶೇಖ ಸಾಮಾಜಿಕ ಮತ್ತು ಶೈಕ್ಷಣಿಕ ಕಾಳಜಿ ಹೊಂದಿದವರು ಅವರ ಕಾರ್ಯಕ್ಕೆ ದಿನಕರ ವೇದಿಕೆ ಅಭಿನಂದಿಸುತ್ತದೆ ಎಂದರು.

ಸುಮಾರು 45 ವರ್ಷಗಳ ಹಿಂದೆ 7ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಗ್ರೂಫ್ ಫೋಟೊ ಕಾರ್ಯಕ್ರಮವಿತ್ತು. ವಿದ್ಯಾರ್ಥಿಯೋರ್ವ ತನ್ನ ಕೈಗೆ ವಾಚು ಇಲ್ಲ ಎಂದು ಫೋಟೊ ಸೆಶನಗೆ ಬಾರದೆ ಬೇಸರದಿಂದ ದೂರದಲ್ಲಿ ನಿಂತಿದ್ದ ಎನ್ನಲಾಗಿದ್ದು ಇದನ್ನು ಗಮನಿಸಿದ ಶಿಕ್ಷಕಿ ಶಿವಮ್ಮ ನಾಯಕ ಅವರು ತಮ್ಮ ಕೈಯಲ್ಲಿರುವ ವಾಚನ್ನೇ ಆಹುಡುಗನ ಕೈಗೆ ಕಟ್ಟಿ ಗ್ರೂಫ್ ಫೋಟೊಗೆ ನಿಲ್ಲಿಸಿದ್ದರು. ಆ ವಿದ್ಯಾರ್ಥಿ ಮುಂದೆ ಎಂಜಿನಿಯರಿoಗ್ ಶಿಕ್ಷಣ ಕಲಿತು ವಿದೇಶದಲ್ಲಿ ದೊಡ್ಡ ವಾಣಿಜ್ಯೋದ್ಯಮಿಯಾದ.

ಆ ವಿದ್ಯಾರ್ಥಿ ಸ್ವದೇಶಕ್ಕೆ ಬಂದಾಗ ಶಿಕ್ಷಕಿ ಶಿವಮ್ಮ ನಾಯಕ ಅವರ ವಿಳಾಸ ಪತ್ತೆ ಹಚ್ಚಿ ಅವರ ಮನೆಗೆ ಹೋಗಿ ಅವರಿಗೆ ಒಂದು ವಾಚನ್ನು ಕೊಡುಗೆಯಾಗಿ ನೀಡಿ ಅವರ ಆಶೀರ್ವಾದ ಪಡೆದ. ವಾಚಿನ ಈ ನೈಜ ಕಥೆಯನ್ನು ಶಿವಮ್ಮ ನಾಯಕ ವೇದಿಕೆಯಲ್ಲಿ ನೆನಪಿಸಿಕೊಂಡು ಭಾವುಕರಾದರೆ ನೆರೆದವರು ಗುರು ಶಿಷ್ಯ ಸಂಬAಧಕ್ಕೆ ತಲೆದೂಗಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button