Follow Us On

WhatsApp Group
Important
Trending

ಹಸರೀಕರಣಕ್ಕೆ ಒತ್ತು: ಅಂಕೋಲಾ ಮೂಲದ ನವೀನ್ ಶೆಟ್ಟಿಗೆ ಮುಖ್ಯಮಂತ್ರಿ ಬಂಗಾರದ ಪದಕ

ಹೊರ ರಾಜ್ಯಕ್ಕೆ ಅಕ್ರಮವಾಗಿ ಕಪ್ಪೆ ಸಾಗಾಟ ಮಾಡುವವವರ ವಿರುದ್ಧವೂ ಕೇಸ್ ದಾಖಲಿಸಿದ್ದ ಯುವ ಅಧಿಕಾರಿ

ಅಂಕೋಲಾ: ಇಲಾಖೆಯ ಆಶಯದಂತೆ ಹಸರೀಕರಣಕ್ಕೆ ಒತ್ತು ನೀಡುವ ಮೂಲಕ ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅಂಕೋಲಾ ತಾಲೂಕಿನ ಅಗ್ರಗೋಣ – ಜೂಗ ಮೂಲದ ಯುವ ಅಧಿಕಾರಿ ಒರ್ವರಿಗೂ ಮುಖ್ಯಮಂತ್ರಿಗಳ ಬಂಗಾರದ ಪದಕ ಒಲಿದು ಬಂದಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತೋರಿದ ಅಪಾರ ಕಾಳಜಿ, ಅಪ್ರತಿಮ ಶೌರ್ಯ,ಸಾಧನೆಗಾಗಿ, 2022-2023 ನೇ ಸಾಲಿನ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಕಾರವಾರ ಶಹರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪವಲಯ ಅರಣ್ಯಾಧಿಕಾರಿ ನವೀನ ಮೋಹನ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಕುಮಟಾ ತಾಲೂಕಿನ ವಾಲಗಳ್ಳಿಯ ಅಜ್ಜಿಮನೆಯಲ್ಲಿ ನೇತ್ರಾವತಿ ಮತ್ತು ಮೋಹನ ದಂಪತಿಗಳ ಕಿರಿಯ ಪುತ್ರನಾಗಿ 1976 ರಲ್ಲಿ ಜನಿಸಿದ ಇವರು,.ಚಿಕ್ಕಂದಿನಿಂದಲೇ ಉತ್ತಮ ಕ್ರೀಡಾಪಟುವಾಗಿ, ಶಾಲಾ-ಕಾಲೇಜ ದಿನಗಳಲ್ಲಿ ಹಲವಾರು ಕ್ರೀಡಾಕೂಟದಲ್ಲಿ ಭಾಗವಹಿಸಿ ಹತ್ತಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವರು.

2005 ರಲ್ಲಿ ಅರಣ್ಯರಕ್ಷಕ ರಾಗಿ ಸೇವೆಯನ್ನು ಆರಂಭಿಸಿದ ಅವರು ಈಗಾಗಲೇ ಹತ್ತೊಂಬತ್ತು ವರ್ಷ ದೀರ್ಘ ಸೇವಾವಧಿ ಪೂರೈಸಿದ್ದು, ಸೇವಾ ದಕ್ಷತೆ ಎಂಬಂತೆ ಈ ವರೆಗೆ ಒಟ್ಟೂ 19 ಗುನ್ನೆ ಪ್ರಕರಣವನ್ನು ಹಾಗೂ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಉತ್ಸುಕತೆಯಿಂದ ಕಾರ್ಯನಿರ್ವಹಿಸಿದ್ದಾರೆ.
ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿರುವ ಇವರು ನೆಡುತೋಪು ಬೆಳೆಸುವುದರಲ್ಲಿ, ಕಾಂಡ್ಲಾ ಹಸಿರು ಹೊದಿಕೆಯನ್ನು ಹೆಚ್ಚಿಸುವುದರಲ್ಲಿ,ಕೆಂಪು ಚಿರೇಕಲ್ಲು ಜಾಗದಲ್ಲಿ ಪೈಕಾಸ್ ಜಾತಿಗೆ ಸೇರಿದ ಸಸ್ಯವನ್ನು ಬೆಳೆಸುವುದರಲ್ಲಿ, 5 ಲಕ್ಷಕ್ಕೂ ಹೆಚ್ಚು ಜಂಗ್ಲಿ ಜಾತಿಗೆ ಸೇರಿದ ಸಸ್ಯ ಸಂಪತ್ತನ್ನು ಬೆಳೆಸುವುದರಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ.

ಅಷ್ಟೆ ಅಲ್ಲದೇ ಕಾಡು ಗಳ್ಳರಿಗೆ ದುಸ್ವಪ್ನವಾಗಿ ಕಾಡಿದ್ದ ಇವರು ಗಂಗಾವಳಿ ನದಿಯಲ್ಲಿ ದೋಣಿಯ ಮೂಲಕ ಅಕ್ರಮವಾಗಿ ಸಾಗಿರುತ್ತಿರುವ ಲಕ್ಷಾಂತರ ರು. ಮೌಲ್ಯದ ನಾಟಾ ಕಟ್ಟಿಗೆಯನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿದ್ದರು. ಪಕ್ಕದ ರಾಜ್ಯದ ದೊಡ್ಡ ದೊಡ್ಡ ಹೋಟೆಲ್ ಗಳಿಗೆ ಆಹಾರ ಪದಾರ್ಥವನ್ನು ತಯಾರಿಸಲು ಅಕ್ರಮವಾಗಿ ಕಪ್ಪೆಗಳನ್ನು ಸಾಗಿಸುತ್ತಿರುವ ವಾಹನವನ್ನು ಹಿಡಿದು ಪ್ರಕರಣವನ್ನು ದಾಖಲಿಸಿದ್ದಾರೆ. ಅರಣ್ಯದಲ್ಲಿ ರಾತ್ರಿ ವೇಳೆ ನಡೆಯುವ ಅಕ್ರಮ ಚಟುವಟಿಕೆಯನ್ನು ತನ್ನ ಜೀವದ ಹಂಗನ್ನು ತೊರೆದು ನಿಯಂತ್ರಣಕ್ಕೆ ತರುವಲ್ಲಿ ಇವರ ಸೇವೆ ನಿಜಕ್ಕೂ ಶ್ಲಾಘನಿಯ. ನೇರ, ನಡೆನುಡಿ, ಸದಾ ಹಸಿರನ್ನು ಪ್ರೀತಿಸುವ ಇವರಿಗೆ 2013 ರಲ್ಲಿ ರಾಜ್ಯಮಟ್ಟದ ಬಿ, ಮಾರಪ್ಪ ಪ್ರಶಸ್ತಿ ಲಭಿಸಿದ್ದನ್ನು ಸ್ಮರಿಸಬಹುದಾಗಿದೆ.

ಅಂಕೋಲಾ, ಶಿರಸಿ, ಪ್ರಸ್ತುತ ಕಾರವಾರದಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನವೀನ ಮೋಹನ ಶೆಟ್ಟಿಯವರಿಗೆ 2022-2023 ನೇ ಸಾಲಿನ ಬಂಗಾರದ ಪದಕ ಘೋಷಣೆಯಾಗಿರುವುದು ಇವರ ಹಸಿರು ಪ್ರೇಮ, ಸೇವಾ ದಕ್ಷತೆಗೆ ಸಂದ ಗೌರವ ಎಂದೇ ಹೇಳಬಹುದಾಗಿದೆ. ಉತ್ತರ ಕನ್ನಡ ಜಿಲ್ಲೆಯ ( ಕೆನರಾ ವೃತ್ತ ದಿಂದ) ಬೇರೆ ಬೇರೆ ವಿಭಾಗಗಳಿರುವ ಒಟ್ಟೂ 8 ಜನರನ್ನು ಮುಖ್ಯಮಂತ್ರಿಗಳ ಬಂಗಾರದ ಪದಕ ಗೌರವಕೆ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button