ಅಂಕೋಲಾ : ಚಾಲಕನ ನಿಯಂತ್ರಣ ತಪ್ಪಿದ ಹೊಚ್ಚ ಹೊಸ ಕಾರೊಂದು, ಹೆದ್ದಾರಿ ಡಿವೈಡರ್ ಬಳಿ ಅಳವಡಿಸಿದ ದಾರಿದೀಪದ ಕಂಬಕ್ಕೆ ಡಿಕ್ಕಿ ಪಡಿಸಿಕೊಂಡು, ಪಲ್ಟಿಯಾದ ಘಟನೆ ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಬೋಳೆ ಕಿರು ಸೇತುವೆ ಹತ್ತಿರ ಸಂಭವಿಸಿದೆ. ಹೈದರಾಬಾದ್ ಮೂಲದವರು ಎನ್ನಲಾದ ಕುಟುಂಬದವರು,ಅಲ್ಲಿಯೇ ಹೊಚ್ಚ ಹೊಸ ಕಾರೊಂದನ್ನು ಖರೀದಿಸಿ, ತಮ್ಮ ಕುಟುಂಬಸ್ಥರೊಂದಿಗೆ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿರುವ ಮುರುಡೇಶ್ವರಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯೆ ಈ ಅಪಘಾತ ಸಂಭವಿಸಿ, ಆಸ್ಪತ್ರೆ ಸೇರುವಂತಾಗಿರುವುದು ದುರ್ವಿಧಿಯೇ ಸರಿ.
ಚಾಲಕನ ಜೊತೆಗಿದ್ದವ ಹೇಳುವ ಪ್ರಕಾರ,ಕಾರಿನ ತಾಂತ್ರಿಕ ಸಮಸ್ಯೆಯಿಂದ ಹೊಗೆ ಬಂದಂತಾಗಿ,ಬ್ರೇಕ್ ಫೇಲ್ ಆಗಿದೆ ಎನ್ನಲಾಗುತ್ತಿದೆ. ಆದರೆ ಚಾಲಕನ ನಿದ್ದೆ ಮಂಪರು, ಅತಿವೇಗ ಹಾಗೂ ಅಜಾಗರೂಕತೆ ಇಲ್ಲವೇ ಅದಾವುದೋ ಕಾರಣದಿಂಲೂ ಅಪಘಾತ ಸಂಭವಿಸಿರುವ ಸಾಧ್ಯತೆ ಸ್ಥಳೀಯರು ಮತ್ತು ದಾರಿಹೋಕರಿಂದ ಕೇಳಿ ಬಂದಂತಿದೆ .
ಚಾಲಕನ ನಿಯಂತ್ರಣ ತಪ್ಪಿದ ಕಾರು,ಹೆದ್ದಾರಿ ಡಿವೈಡರ್ ಬಳಿ ಅಳವಡಿಸಿದ ದಾರಿದೀಪದ ಕಂಬಕ್ಕೆ ಜೋರಾಗಿ ಡಿಕ್ಕಿ ಪಡಿಸಿಕೊಂಡ ಪರಿಣಾಮ,ದಾರಿದೀಪದ ಕಂಬವು ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತದ ರಭಸಕ್ಕೆ ಡಿವೈಡರ್ ದಾಟಿದ ಕಾರು ತಲೆಕೆಳಗಾಗಿ ಪಲ್ಟಿ ಹೊಡೆದು, ಮುಂಭಾಗ ಹಾಗೂ ಇತರೆಡೆ ನುಜ್ಜುಗುಜ್ಜಾಗಿದೆ. ಮಕ್ಕಳು, ಮಹಿಳೆಯರು ಸೇರಿದಂತೆ 8-10 ಜನರಿದ್ದರು ಎನ್ನಲಾದ ಈ ಕಾರು ಅಪಘಾತ ಗೊಂಡ ಪರಿಣಾಮ ಕಾರಿನಲ್ಲಿದ್ದ ಒಂದಿಬ್ಬರಿಗೆ ತೀವ್ರ ಸ್ವರೂಪದ ಗಾಯ ನೋವುಗಳಾಗಿದ್ದು, ಇತರರೂ ಗಾಯಾಳುಗಳಾಗಿದ್ದಾರೆ.
ಘಟನಾ ಸ್ಥಳದಿಂದ ಗಾಯಾಳುಗಳನ್ನು 108 ಅಂಬುಲೆನ್ಸ ಮೂಲಕ ತಾಲೂಕಾ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅದೃಷ್ಟವಶಾತ್ ಸೀಟ್ ಏರ್ ಬ್ಯಾಗ್ ಓಪನ್ ಆದದ್ದರಿಂದ ಕಾರ ಚಾಲಕ ಯಾವುದೇ ಗಾಯ ನೋವುಗಳಿಲ್ಲದೇ ಸಂಭವನೀಯ ಅಪಾಯದಿಂದ ಪಾರಾಗಿದ್ದಾನೆ.ಪಿಎಸ್ಐ ಉದ್ದಪ್ಪ ಧರೆಪ್ಪನವರ, ಎ ಎಸ್ ಐ ನಿತ್ಯಾನಂದ ಕಿಂದಳಕರ, ಮತ್ತು 112 ತುರ್ತು ಸಿಬ್ಬಂದಿಗಳು,ಸ್ಥಳ ಪರಿಶೀಲಿಸಿ,ಕಾನೂನು ಕ್ರಮ ಮುಂದುವರಿಸಿದ್ದಾರೆ. ಎ
ನ್ ಎಚ್ ಎ ಐ ಸಿಬ್ಬಂದಿಗಳು ಕ್ರೇನ್ ಬಳಸಿ,ಅಪಘಾತ ಗೊಂಡ ವಾಹನವನ್ನು ಹೆದ್ದಾರಿ ಪಕ್ಕಕ್ಕೆ ಸರಿಸಿಟ್ಟು,ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಅಪಘಾತದ ಘಟನೆಯ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ