Follow Us On

WhatsApp Group
Important
Trending

Kumta Sirsi Road: ಅರೆಬರೆ ಕಾಮಗಾರಿ, ಭಾರಿ ಮಳೆ ತಂದ ಅವಾಂತರ: ನರಕದಂತಾದ ಕುಮಟಾ-ಶಿರಸಿ ರಸ್ತೆ ಸಂಚಾರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಸ್ತೆ ರಾಜ್ಯದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದು. ಇದನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅಗಲೀಕರಣ ಕಾರ್ಯವನ್ನ ಪ್ರಾರಂಭಿಸಲಾಗಿದ್ದು, ಇನ್ನೂ ಸಹ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಅರೆಬರೆ ಕಾಮಗಾರಿ, ಭಾರಿ ಮಳೆ ಮತ್ತು ನೆರೆಯಿಂದಾಗಿ ರಸ್ತೆ ಕೆಲವೆಡೆ ಸಂಪೂರ್ಣವಾಗಿ ಹಾಳಾಗಿದೆ.

ಕಾಮಗಾರಿಗಾಗಿ ಕೆಲವೆಡೆ ರಸ್ತೆಯನ್ನ ಕಿತ್ತು ಹಾಕಿದ್ದು ಮಳೆಯೂ ಸಹ ಹೆಚ್ಚಾಗಿದ್ದರಿಂದ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಸಣ್ಣ ವಾಹನಗಳು ಓಡಾಡುವುದೇ ಅಸಾಧ್ಯ ಎನ್ನುವಂತಾಗಿದೆ. ಎಲ್ಲಿ ನೋಡಿದ್ರು ಬೃಹತ್ ಹೊಂಡಗಳು ಬಾಯ್ತೆರೆದುಕೊಂಡಿದೆ. ಮಳೆಬಂದಾಗ ಈ ಹೊಂಡಗಳಲ್ಲಿ ನೀರು ತುಂಬಿಕೊಳ್ಳುವುದರಿoದ , ಹೊಂಡಗಳ ಆಳ-ಅಗಲ ಸವಾರರಿಗೆ ಗೋಚರಿಸುವುದಿಲ್ಲ. ಇದರಿಂದಾಗಿ ಹಲವು ಬೈಕ್ ಸವಾರರು ಬಿದ್ದು, ಗಾಯಮಾಡಿಕೊಂಡ ಘಟನೆಯೂ ನಡೆದಿದೆ.

ಪ್ರತಿದಿನ ಅಪಾರ ವಾಹನಗಳು ಇಲ್ಲಿ ಸಂಚರಿಸುತ್ತಿವೆ. ಅಲ್ಲದೆ, ನಿರ್ವಹಣೆ ಕೊರತೆಯಿಂದಾಗಿ ರಸ್ತೆ ಮತ್ತಷ್ಟು ಹಾಳಾಗಿದೆ. ಸಿಮೆಂಟ್ ರಸ್ತೆ ಆದ ಸ್ಥಳದಲ್ಲಂತೂ ಪ್ರಯಾಣಿಸುವುದು ಅಸಾಧ್ಯ ಎಂಬoತಾಗಿದೆ. ಸಣ್ಣಪುಟ್ಟ ಹೊಂಡಗಳಿಗೆ ಮಣ್ಣನ್ನು ತುಂಬಿ ಗುಂಡಿಯನ್ನು ಮುಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಆದ್ರೆ, ಭಾರೀ ಮಳೆಗೆ ಮಣ್ಣು ತೊಳೆದು ಹೋಗುವುದರಿಂದ ಒಂದೇ ದಿನದಲ್ಲಿ ಈ ಹೊಂಡಗಳು ಬಾಯ್ತೆರೆಯುತ್ತಿವೆ. ರಸ್ತೆಯ ಮೇಲೆ ಕಲ್ಲು, ಮಣ್ಣು ಹಾಕಲಾಗಿದ್ದು ಲಘು ವಾಹನಗಳು ಸಂಚರಿಸಲು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.

ಒಟ್ಟಾರೇ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಬೇರೆ ಮಾರ್ಗವಿಲ್ಲದೇ ವಾಹನಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದಂತೂ ಸತ್ಯ. ಭಾರಿ ಪ್ರಮಾಣದ ಹೊಂಡಗಳು ಬಿದ್ದಿರುವುದರಿಂದ ರಸ್ತೆ ಮಾಯವಾಗಿ ಸಾವಿರಾರು ವಾಹನ ಸವಾರರು ಕೈಯಲ್ಲಿಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button