ಶಿರೂರು ಗುಡ್ಡ ಕುಸಿತ : ಮಣ್ಣಿನಡಿ ಸಿಲುಕಿಕೊಂಡಿದೆಯೇ ಬೆಂಜ್ ವಾಹನ ? GPS ಕೊನೆ ಲೊಕೇಶನ್ ತೋರಿಸಿದ್ದೆಲ್ಲಿ ? ರಿಂಗಣಿಸಿತ್ತಂತೆ ವಾಹನದಲ್ಲಿದ್ದವನ ಮೊಬೈಲ್ ಫೋನ್
ವೇಗ ಪಡೆದುಕೊಳ್ಳುತ್ತಿರುವ ಮಣ್ಣು ತೆರವು ಕಾರ್ಯಾಚರಣೆ
ಅಂಕೋಲಾ ; ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ,ಭಾರತ ಬೆಂಜ್ ಕಂಪನಿಯ ಭಾರೀ ವಾಹನ ಒಂದು ಸಿಲುಕಿಕೊಂಡಿದೆ ಎಂಬ ಸುದ್ದಿ ಜೋರಾಗಿ ಎಲ್ಲಡೆ ವೈರಲ್ ಆಗುತ್ತಿರುವ ನಡುವೆಯೇ,ಹೆದ್ದಾರಿಯಲ್ಲಿ ರಾಶಿ ರಾಶಿಯಾಗಿ ಕುಸಿದು ಬಿದ್ದಿರುವ ಮಣ್ಣು ತೆರವಿಗೆ ಕಾರ್ಯಾಚರಣೆ ಮುಂದುವರೆದಿದೆ.
ಕೇರಳದಿಂದ ಕಟ್ಟಿಗೆ ನಾಟಾಗಳನ್ನು ತುಂಬಿ ಸಾಗಿಸುತ್ತಿತ್ತು ಎನ್ನಲಾದ ಬಿಳಿ ಬಣ್ಣದ ( KA 15, A 7427) ನೊಂದಣಿ ಸಂಖ್ಯೆಯ ಈ ವಾಹನದ,ಜಿಪಿಎಸ್ ಲೊಕೇಶನ್ ಗುಡ್ಡ ಕುಸಿತ ಪ್ರದೇಶದ ಬಳಿಯೇ ಕೊನೆಯದಾಗಿ ತೋರಿಸಿರುವುದು ,ವಾಹನ ಚಾಲನೆ ಮಾಡುತ್ತಿದ್ದ ಕ್ಯಾಲಿಕಟ್ ಮೂಲದ ಅರ್ಜುನ್ ಅವರ ಕುಟುಂಬದ ಆತಂಕಕ್ಕೆ ಕಾರಣವಾಗಿದೆ.
ಅರ್ಜುನ್ ಅವರ ಮೊಬೈಲ್ ಸಹ ರಿಂಗಣಿಸಿತ್ತು ಎನ್ನಲಾಗಿದ್ದು,ಮಣ್ಣು ತೆರವು ಕಾರ್ಯಾಚರಣೆ ಮತ್ತಷ್ಟು ವೇಗ ಪಡೆದು,ತಮ್ಮ ಕುಟುಂಬದ ಸದಸ್ಯ ಬದುಕಿ ಬಂದಾನೆಯೇ ಎಂದು ಆತನ ಕುಟುಂಬ ಸದಸ್ಯರು ಮತ್ತು ಗೆಳೆಯರು, ಆಶಾಭಾವನೆಯಿಂದ ಕಾದು ಕುಳಿತಿದ್ದಾರೆ..ಈ ಕುರಿತು ತ್ವರಿತ ಕಾರ್ಯಾಚರಣೆಗಾಗಿ ಕುಟುಂಬ ಸದಸ್ಯರು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳದಲ್ಲಿಯೇ ಇದ್ದ ಶಾಸಕ ಸತೀಶ್ ಸೈಲ್ ಅವರಲ್ಲಿ ವಿನಂತಿಸಿದ್ದು, ಆವರೂ ಸಹ ಆತಂಕಗೊಂಡಿರುವ ಕುಟುಂಬದ ಭಾವನೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.ಜೋರಾಗಿ ಸುರಿಯುತ್ತಿರುವ ಮಳೆ,ಅಲ್ಪ ಪ್ರಮಾಣದಲ್ಲಿ ಆಗಾಗ ಬಿರುಕು ಬಿಡುತ್ತಿರುವ ಮತ್ತು ಕುಸಿಯುತ್ತಿರುವ ಗುಡ್ಡದ ಮಣ್ಣು ಮತ್ತಿತರ ಕಾರಣಗಳಿಂದ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ಇಂದು ಸಂಜೆ ಇಲ್ಲವೇ ನಾಳೆ ಒಳಗೆ ಈ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ’ .
ವಿಸ್ಮಯ ನ್ಯೂಸ ವಿಲಾಸ ನಾಯಕ ಅಂಕೋಲಾ