ಜೋರಾದ ಮಳೆಯನ್ನು ಲೆಕ್ಕಿಸದೇ ಬಹುದೂರ ಕಾಲ್ನಡಿಗೆಯಲ್ಲಿ ನಡೆದು ಶಿರೂರು ಗುಡ್ಡ ಕುಸಿತ ಪ್ರದೇಶ ವೀಕ್ಷಿಸಿದ ಸಿಎಂ
ಶೋಧ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸುವಂತೆ ಸೂಚನೆ
ಅಂಕೋಲಾ: ಜುಲೈ 16 ರಂದು ಮಂಗಳವಾರ ತಾಲೂಕಿನ ಜನತೆಗೆ ಮತ್ತು ನಾಡಿಗೆ ಅಮಂಗಲ ಎಂಬಂತೆ, ರಾ.ಹೆ. 66 ರ ಶಿರೂರು ಬಳಿ ಹೆದ್ದಾರಿ ಅಂಚಿಗೆ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು, ಮಹಾ ದುರಂತ ಸಂಭವಿಸಿತ್ತು. ಅಂದಿನಿಂದ ಇಂದಿನವರೆ (ಜುಲೈ 21) ರ ವರೆಗೆ 6 ದಿನಗಳಾಗಿದ್ದು,ಪ್ರತಿಕೂಲ ಹವಾಮಾನದ ನಡುವೆಯೂ ನಿರಂತರ ಕಾರ್ಯಾಚರಣೆ ಮುಂದುವರೆದಿದೆ.
ಘಟನೆ ನಡೆದ ದಿನ,ಈ ವಿಷಯವನ್ನು ಸ್ಥಳೀಯ ಶಾಸಕ ಸತೀಶ ಸೈಲ್ ,ಸದನದಲ್ಲಿ ಪ್ರಸ್ತಾಪಿಸಿ,ಕ್ಷೇತ್ರದ ಸಮಸ್ಯೆಯನ್ನು ಪರಿಶೀಲಿಸಲು ಬರುವಂತೆ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು,ಸಂಬಂಧಿತ ಸಚಿವರಿಗೆ ವಿನಂತಿಸಿ,ತಕ್ಷಣ ತನ್ನ ಕಾರವಾರ – ಅಂಕೋಲಾ ಕ್ಷೇತ್ರಕ್ಕೆ ಬಂದು,ಜನರ ಸಮಸ್ಯೆಗೆ ಸ್ಪಂದಿಸಲಾರಂಭಿಸಿದ್ದರು .ಶಾಸಕರ ಕೋರಿಕೆ ಮತ್ತು ಸಿಎಂ ಜವಾಬ್ದಾರಿ ಎನ್ನುವಂತೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು ರವಿವಾರ ಅಂಕೋಲಾಕ್ಕೆ ಆಗಮಿಸಿ ಸುರಿವ ಮಳೆಯನ್ನು ಲೆಕ್ಕಿಸದೇ, ಬಹು ದೂರ ಕಾಲ್ನಡಿಗೆಯಲ್ಲಿಯೇ ನಡೆದು, ಘಟನಾ ಸ್ಥಳಕ್ಕೆ ಭೇಟಿ ನೀಡಿ,ಪರಿಸ್ಥಿತಿ ಅವಲೋಕಿಸಿದರು.
ಗುಡ್ಡ ಕುಸಿತ ದುರಂತದ ಬಗ್ಗೆ, ಮತ್ತು ಆ ಬಳಿಕ ಆದ ಜೀವ ಹಾನಿ ಮತ್ತಿತರ ಎಲ್ಲ ಅಂಶಗಳ ಬಗ್ಗೆ , ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಳು ಹಾಗೂ ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಕೇರಳ ಮೂಲದ ಅರ್ಜುನ್ ಎಂಬಾತ,ತನ್ನ ಬೆಂಜ್ ವಾಹನದಲ್ಲಿ ಸಿಲುಕಿರುವ ಸಾಧ್ಯತೆಗಳ ಕುರಿತು ಆತನ ರಕ್ಷಣೆ ಇಲ್ಲವೇ ಪತ್ತೆ ಕಾರ್ಯಕ್ಕೆ ನೆರವಾಗುವಂತೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲು ಸಿಎಂ ಸೂಚಿಸಿದರು.
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜುಲೈ 16ರಂದು ಶಿರೂರು ಬಳಿ ಗುಡ್ಡ ಕುಸಿದಿದ್ದು ದುರಂತದಲ್ಲಿ 10 ಜನ ಸಾವನ್ನಪ್ಪಿದ್ದು. ಈವರೆಗೆ 7 ಜನರ ಶವ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದರು.
ಈ ದುರಂತದಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ಕೊಚ್ಚಿ ಹೋಗಿತ್ತು. ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ತ್ವರಿತವಾಗಿ ನಡೆಸಲು ಸೂಚಿಸಿದ್ದೇನೆ. ಸದನ ನಡೆಯುತ್ತಿರುವುದರಿಂದ ತಕ್ಷಣ ಅಂಕೋಲಾಕ್ಕೆ ಮತ್ತು ಉತ್ತರಕನ್ನಡ ಜಿಲ್ಲೆಗೆ ಬರಲಾಗಲಿಲ್ಲ. ಇಲ್ಲಿನ ಜಿಲ್ಲಾಡಳಿತ, ಸಚಿವರು, ಶಾಸಕರು, ಸೂಕ್ತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನಂತೆ ಪರಿಹಾರ ನೀಡಲಾಗಿದೆ. ಉಳುವರೆ ಭಾಗದಲ್ಲಿ ಆದ ಹಾನಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಲೇ ಗುಡ್ಡ ಕುಸಿದಿರುವ ಆರೋಪ ಕೇಳಿಬಂದಿದ್ದು, ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರಕ್ಷಣಾ ಕಾರ್ಯಾಚರಣೆಗೆ ಸೇನಾ ಪಡೆ , ನೌಕಾದಳದ ಮುಳುಗುತಜ್ಞರ ತಂಡ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮತ್ತಿತರ ವಿಶೇಷ ತುಕಡಿಗಳ ನೆರವು ದೊರೆಯುತ್ತಿದೆ.
ಅಲ್ಲದೇ ರಾಜ್ಯದ ಪೊಲೀಸ್,ಅಗ್ನಿಶಾಮಕ,ಮತ್ತಿತರ ಇಲಾಖೆಗಳು ಕಾರ್ಯಾಚರಣೆಗೆ ಕೈಜೋಡಿಸಿವೆ. ಕಾರ್ಯಾಚರಣೆ ಮುಕ್ತಾಯವಾದ ಬಳಿಕ ದುರಂತ ಘುನೆ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದ ಅವರು,ರಾಜ್ಯ ಸರ್ಕಾರ ರಕ್ಷಣಾ ಕಾರ್ಯಾಚರಣೆಯನ್ನು ವಿಳಂಬ ಮಾಡಿಲ್ಲ. ಕೇರಳದ ಒಬ್ಬ ನಾಪತ್ತೆಯಾಗಿದ್ದಾನೆ, ಹೀಗಾಗಿ ಕೇರಳದವರು ಬಂದಿದ್ದಾರೆ. ಗುಡ್ಡ ಕುಸಿದಿರುವ, ಮಳೆ ಹಾನಿಯಾಗಿರುವ ಇತರೆ ಎಲ್ಲಾ ಕಡೆಯೂ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ನೈಸರ್ಗಿಕ ವಿಪತ್ತು ಸಂಭವಿಸಿದೆ, ಇಂಥ ಸಂದರ್ಭದಲ್ಲಿ ಅದನ್ನು ಎದುರಿಸಿ, ರಾಜ್ಯದ ಜನತೆಯ ಸುರಕ್ಷತೆ ನಮ್ಮ ಮೊದಲ ಆದ್ಯತೆ, ಇಲ್ಲಿ ಯಾರ ವಿರುದ್ಧವೂ ಆರೋಪ ಮಾಡಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದು ನಮ್ಮ ಜಾಯಮಾನವಲ್ಲ ಎಂಬಂತೆ ಮಾತನಾಡಿ ಅಪರೋಕ್ಷವಾಗಿ, ಮಾಜಿ ಮುಖ್ಯ ಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್‌ಡಿಕೆ,ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕೆಗೆಗಳಿಗೆ ಟಾಂಗ್ ನೀಡಿದಂತಿತ್ತು.
ನಂತರ ಮುಖ್ಯಮಂತ್ರಿಗಳು,ಅಂಕೋಲಾ ದಿಂದ ಕಾರವಾರದತ್ತ ತೆರಳಿ, ಅಲ್ಲಿ ಎನ್ ಪಿಸಿಎಲ್ (ಕೈಗಾ ),ಮತ್ತಿತರ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಮಂತ್ರಿ ಮಂಕಾಳ ವೈದ್ಯ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ಪ್ರಮುಖರಾದ ನಿರ್ವೇದಿತ ಆಳ್ವ ಮತ್ತಿತರರಿದ್ದರು.ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಎಲ್ ಕೆ ಅತೀಕ್, ಶಾಲಿನಿ ರಜನೀಶ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್ ಪಿ ನಾರಾಯಣ ಎಂ ಸೇರಿದಂತೆ ವಿಜಯ ಇಲಾಖೆಯ ಹಿರಿಕಿರಿ ಅಧಿಕಾರಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ