ಶಿರೂರು ಗುಡ್ಡ ಕುಸಿತ ಮಹಾ ದುರಂತ: ನಾಪತ್ತೆಯಾದವರ ಪೈಕಿ 8 ನೇ ಮೃತದೇಹ ಪತ್ತೆ

8 ನೇ ದಿನಕ್ಕೆ ಮುಂದುವರಿದ ಶೋಧ ಕಾರ್ಯಾಚರಣೆ

ಅಂಕೋಲಾ : ತಾಲೂಕಿನ ಶಿರೂರು ಬಳಿ ಹೆದ್ದಾರಿ ಅಂಚಿನ ಗುಡ್ಡ ಕುಸಿತದಿಂದ ಭೀಕರ ದುರಂತ ಸಂಭವಿಸಿ, ಈ ದುರ್ಘಟನೆಯಲ್ಲಿ ಕೊಚ್ಚಿ ಹೋದವರ ಶೋಧ ಕಾರ್ಯ ಜುಲೈ 23 ರ ಮಂಗಳವಾರ 8 ನೇ ದಿನದಂದೂ ಮುಂದುವರೆದಿದ್ದು, ಇದೇ ವೇಳೆ ಗೋಕರ್ಣ ಸಮೀಪದ ಗಂಗೆಕೊಳ್ಳದ ಬಳಿ ಮತ್ತೊಂದು ಮೃತದೇಹ ಪತ್ತೆಯಾಗುವ ಮೂಲಕ ಒಟ್ಟೂ 8 ಮೃತದೇಹಗಳು ಪತ್ತೆಯಾದಂತಾಗಿದೆ.

ಗುಡ್ಡ ಕುಸಿತ ಸಂಭವಿಸಿದ ಗಂಗಾವಳಿ ನದಿ ಅಂಚಿನ ಇನ್ನೊಂದು ತೀರದಲ್ಲಿ ಅಂದರೆ ಉಳುವರೆಯಲ್ಲಿ ,ಮನೆ ಕಟ್ಟಿ ವಾಸವಾಗಿದ್ದ ಸಣ್ಣು ಹನುಮಂತ ಗೌಡ ,ನದಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತ ದೇಹವಾಗಿ ಪತ್ತೆಯಾಗಿದ್ದು, ಮೃತಳ ಮಗ ಮಂಜುನಾಥ ಗೌಡ ಮತ್ತು ಕುಟುಂಬಸ್ಥರಿಂದ ಗುರುತು ದೃಢಪಟ್ಟಿದೆ.ಈಗಾಗಲೇ ಟೀ ಸ್ಟಾಲ್ ಮಾಲಕ ಲಕ್ಷ್ಮಣ್ ನಾಯ್ಕ, ಶಾಂತಿ ನಾಯ್ಕ (ಪತ್ನಿ ),ರೋಶನ್ (ಮಗ), ಅವಂತಿಕ(ಮಗಳು) ಸೇರಿ ಒಟ್ಟೂ 4 ಜನ ಒಂದೇ ಕುಟುಂಬದವರು, ಮತ್ತೆರೆಡು ಮೃತದೇಹಗಳನ್ನು ತಮಿಳುನಾಡು ಮೂಲದ ಚಾಲಕರು ಎಂದು ಗುರುತಿಸಲಾಗಿತ್ತು.

ನಂತರ ಬೆಳಂಬರ ಮಧ್ಯ ಖಾರ್ವಿ ವಾಡ ವ್ಯಾಪ್ತಿಯ ಸಮುದ್ರ ತೀರದಲ್ಲಿ ದೇಹವೊಂದರ ಅರ್ಧ ಭಾಗದ ಅಂಗಾಗಗಳು ಅಂದರೆ ಸೊಂಟ ಹಾಗೂ ಕಾಲುಗಳುಳ್ಳ ಪುರುಷ ದೇಹದ ಕೆಳಭಾಗ ಮಾತ್ರ ಪತ್ತೆಯಾಗಿದ್ದು, ಆತನ ಹೊಟ್ಟೆ ಮತ್ತು ತಲೆಯ ವರೆಗಿನ ಮೇಲ್ಬಾಗ ಎಲ್ಲಿ ಕೊಚ್ಚಿ ಹೋಯಿತೋ ತಿಳಿಯದಾಗಿದೆ. ತದ ನಂತರ ಮಂಜಗುಣಿ – ಹೊನ್ನೆಬೈಲ್ ವ್ಯಾಪ್ತಿಯ ಕಡಲ ತೀರದ ಅಂಚಿಗೆ ಯಾವುದೋ ವ್ಯಕ್ತಿಯ ಒಂದೇ ಕೈ ಮತ್ತು ಭುಜದ ಭಾಗವೂ ಪತ್ತೆಯಾಗಿತ್ತು. ಈ ಹಿಂದೆ ಪುಟಾಣಿ ಬಾಲಕ ರೋಶನ್ನನ ಮೃತ ದೇಹದಲ್ಲಿ ಬಲಬದಿಯ ಕೈಮತ್ತು ಭುಜದ ಭಾಗ ಇರದೇ,ಹಾಗೆಯೇ ಅಂತ್ಯ ಸಂಸ್ಕಾರ ಮಾಡಲಾಗಿದ್ದು, ಈಗ ದೊರೆತ ಕೈ ಆತನದು ಆಗಿರಬಹುದೇ ?ಏನ್ನುವ ಶಂಕೆ ಕೆಲವರಿಂದ ವ್ಯಕ್ತವಾಗಿತ್ತು.

ಇನ್ನು ಕೆಲವರ ಪ್ರಕಾರ ಬೆಳಂಬಾರ ಮಧ್ಯ ಖಾರ್ವಿವಾಡದ ಕಡಲ ತೀರದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದ, ಪುರುಷ ದೇಹದ ಅರ್ಧಾಂಗ ಮತ್ತು, ಈಗ ದೊರೆತ ಒಂದು ಕೈ ಇವೆರಡೂ ಒಬ್ಬರದ್ದೇ ಇರಬೇಕು ಎನ್ನುವ ಶಂಕೆಯನ್ನು ವ್ಯಕ್ತಪಡಿಸಿದ್ದರು. ಹಾಗಾದರೆ ಗುಡ್ಡ ಕುಸಿತದ ರಭಸಕ್ಕೆ, ಕಲ್ಲು ಬಂಡೆ ಇಲ್ಲವೇ ಬೇರೆ ಯಾವುದಾದರೂ ರೀತಿಯಲ್ಲಿ ಆ ವ್ಯಕ್ತಿಯ ದೇಹ ಛಿದ್ರವಾಯಿತೇ ? ದೇಹದ ಕೆಳಭಾಗ ಮತ್ತು ಕೈ ಹೊರತುಪಡಿಸಿ, ಉಳಿದಿರಬಹುದಾದ ತಲೆ ಭಾಗ ಮತ್ತಿತ್ತರ ಅಂಗಗಳೂ ದೊರೆತಾವೆಯೇ ? ಅಥವಾ ಆ ಮೃತದೇಹ ಗುರುತಿಸಲು ಡಿ.ಎನ್ ಎ ಪರೀಕ್ಷೆ ಅನಿವಾರ್ಯವೇ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವಂತಾಗಿತ್ತು .

ಹಾಗಾದರೆ ಛಿದ್ರ ಛಿದ್ರಗೊಂಡ ದೇಹದ ಅಂಗಾಂಗಗಳು, ಗುಡ್ಡ ಕುಸಿತದ ದಿನದಿಂದ ಈ ವರೆಗೂ ಪತ್ತೆಯಾಗದ,ಲಕ್ಷ್ಮಣ ನಾಯ್ಕ ರವರ ಟೀ ಸ್ಟಾಲ್ ನಲ್ಲಿ ಸಹಾಯಕನಾಗಿ ಕೆಲಸಕ್ಕಿದ್ದ ಕುಟುಂಬ ಸಂಬಂಧಿ ಜಗನ್ನಾಥ ನಾಯ್ಕ ಈತನ್ನದ್ದಾಗಿರಬಹುದೇ ಅಥವಾ ಬೇರೆ ಯವರದ್ದೂ ಆಗಿರ ಬಹುದು ಎಂಬ ಶಂಕೆಯೂ ಕೆಲವರಿಂದ ವ್ಯಕ್ತವಾಗಿದೆಯಾದರೂ ಈ ಕುರಿತು ಪೊಲೀಸರಿಂದ ಖಚಿತ ಮಾಹಿತಿ ತಿಳಿದು ಬರಬೇಕಿದೆ.

ಒಟ್ಟಾರೆಯಾಗಿ ಈ ಮಹಾ ದುರಂತದಲ್ಲಿ, ಈಗಾಗಲೇ ಒಟ್ಯೂ 8 ಮೃತದೇಹಗಳು ಪತ್ತೆಯಾದಂತಾಗಿದೆ.,ಮೋಟಿನ್ ಕುರ್ವೆ ಭಾಗದ ಸ್ಥಳೀಯರು ಮೃತದೇಹ ಒಂದು ಗಂಗಾವಳಿ ನದಿಯಲ್ಲಿ ಮುಂದೆ ಕೊಚ್ಚಿ ಹೋಗಿರುವ ಕುರಿತು ನೀಡಿದ್ದ ಖಚಿತ ಹೇಳಿಕೆಯನ್ನು ಆಧರಿಸಿ, ವಿಸ್ಮಯ ವಾಹಿನಿ ಪಕ್ಕಾ ಸುದ್ದಿ ಭಿತ್ತರಿಸಿತ್ತು. ಈಗ ಆ ಸುದ್ದಿಯ ನೈಜತೆ ಧ್ರಡ ಪಟ್ಟಂತಾಗಿದೆ. ಇನ್ನುಳಿದಂತೆ ಈ ದುರ್ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ್ ನಾಯ್ಕ , ಕೇರಳ ಮೂಲದ ಅರ್ಜುನ, ಮತ್ತು ಗಂಗೆಕೊಳ್ಳ ಮೂಲದ ಲೋಕೇಶ ಹಾಗೂ ಇತರರಾದರೂ ನಾಪತ್ತೆಯಾಗಿದ್ದರೆ ಅವರ ಶೋಧ ಕಾರ್ಯವನ್ನೂ ನಡೆಸಬೇಕಿದೆ.

ಪಟನ ಸ್ಥಳದಿಂದ ಮೃತದೇಹವನ್ನು ಅಂಕೋಲಾ ತಾಲೂಕು, ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು,ಗೋಕರ್ಣ ಪೊಲೀಸ್ ಠಾಣೆಯ ಗೋರಕನಾಥ ರಾಣೆ, ಮಣಿಕಂಠ ಗೌಡ ಬೆಳಸೆ, ಅಂಕೋಲಾ ಠಾಣೆಯ ಶೇಖರ ಸಿದ್ದಿ ಇವರಿಗೆ ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆ ಬೊಮ್ಮಯ್ಯ ನಾಯ್ಕ ಸಹಕರಿಸಿದರು. ಮೃತ ದೇಹವನ್ನು ಘಟನಾ ಸ್ಥಳದಿಂದ ಸಮುದ್ರ ಮತ್ತು ಗಂಗಾವಳಿ ನದಿ ಸಂಗಮ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದ ಕಟ್ಟಿಗೆ ಕಸ ತ್ಯಾಜ್ಯಗಳ ನಡುವೆ, ಬಂದರು. ಧಕ್ಕೆ ವರೆಗೆ ಬಹುದೂರ ಹೊತ್ತು ಸಾಗಿಸಲು ಪೊಲೀಸ್ ಸಿಬ್ಬಂದಿಗಳು ಅತೀವ ಪ್ರಯಾಸ ಪಡುವಂತಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version