Important
Trending

ಶಿರೂರು ಗುಡ್ಡಕುಸಿತ ಪ್ರಕರಣ: ಶೋಧ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತ ? ಅಧಿಕೃತ ಘೋಷಣೆ ಒಂದೇ ಬಾಕಿ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ನಂತರದ ಶೋಧ ಕಾರ್ಯಾಚರಣೆ ರವಿವಾರವೂ ನಡೆದು ಒಟ್ಟಾರೆಯಾಗಿ 13 ದಿನ ಮುಕ್ತಾಯವಾಗಿದ್ದು, ನಿರೀಕ್ಷಿತ ಯಶಸ್ಸು ದೊರೆಯದೇ ಇರುವುದರಿಂದ,ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನೇ ಕೈ ಬಿಟ್ಟು,ಮುಂದಿನ ಸಾಧ್ಯತೆಗಳ ಬಗ್ಗೆ ಜಿಲ್ಲಾಡಳಿತ ಯೋಚಿಸುವಂತಾಗಿದೆ.

ಈ ದುರ್ಘಟನೆಯಲ್ಲಿ ನಾಪತ್ತೆಯಾಗಿ ಈವರೆಗೂ ಪತ್ತೆಯಾಗದ ಕೇರಳ ಮೂಲದ ಅರ್ಜುನ್,ಗೋಕರ್ಣ ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಶಿರೂರಿನ ಜಗನ್ನಾಥ ನಾಯ್ಕ ಪತ್ತೆ ಕಾರ್ಯಚರಣೆಗೆ ಹೆಸರಾಂತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ತಂಡದವರನ್ನು ಕರೆಸಲಾಗಿತ್ತು. ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದ ತಂಡ,ಗಂಗಾವಳಿ ನದಿ ನೀರಿನಲ್ಲಿ ಮೆಟಲ್ ಅಂಶ ಪತ್ತೆ ಮಾಡಿ ಗುರುತಿಸಿರುವ 4 ಸ್ಥಳಗಳಲ್ಲಿ,ಸ್ಕೂಬಾ ಡೈವಿಂಗ್ ಮಾದರಿಯಲ್ಲಿ ಈಶ್ವರ ತಂಡ ತಾವು ಕಾರ್ಯಾಚರಣೆಗಿಳಿದ ಮೊದಲ ದಿನ ಅಂದರೆ ಶನಿವಾರ,3 ಸುತ್ತುಗಳ ಶೋಧ ಕಾರ್ಯಚರಣೆ ನಡೆಸಿದ್ದರು.

ಈ ವೇಳೆ ಈಶ್ವರ ಮಲ್ಪೆ ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ನದಿ ನೀರಿನಲ್ಲಿ ಮುಳುಗಿ, ಶೋಧ ಕಾರ್ಯ ನಡೆಸಿ ತಮ್ಮ ಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದರು. ಇದೇ ವೇಳೆ ತಂಡದ ಸಹ ಸದಸ್ಯ ದೀಪು ಎನ್ನುವವರಿಗೆ ಚಿಕ್ಕ ಪುಟ್ಟ ಗಾಯಗಳಾಗಿ, ವೈದ್ಯಕೀಯ ಉಪಚಾರ ನೀಡಲಾಗಿತ್ತು. ಶನಿವಾರ ಮಳೆ ಪ್ರಮಾಣ ಈ ಹಿಂದಿಗಿಂತ ಕಡಿಮೆ ಇದ್ದರೂ, ನದಿ ನೀರಿನ ಒಳ ಪ್ರವಾಹದ ವೇಗ ಹೆಚ್ಚಾಗಿರುವುದರಿಂದ ಶೋಧ ಕಾರ್ಯಾಚರಣೆ ಸುಲಭ ಸಾಧ್ಯವಲ್ಲ ಎನ್ನುವಂತಾಗಿತ್ತು.

ಆದರೂ ಪ್ರಯತ್ನ ಬಿಡದ ಈಶ್ವರ ಮಲ್ಪೆ ತಂಡ ಅಂಕೋಲಾದ ಸ್ಥಳೀಯ ಮೀನುಗಾರರ ಮತ್ತು ವಿಪ್ಪತ್ತು ನಿರ್ವಹಣಾ ತಂಡಗಳ ಸಹಕಾರ ಪಡೆದು ಕಾರ್ಯಚರಣೆ ನಡೆಸಿದ್ದರು. ಆದರೂ ಕಾರ್ಯಾಚರಣೆಗೆ ಯಶಸ್ಸು ಸಿಗದೇ, ನದಿ ನೀರಿನಲ್ಲಿ ರವಿವಾರ ಕೊನೆಯ ಪ್ರಯತ್ನ ಎಂಬಂತೆ, ನಿಗದಿತ ಸ್ಥಳದಲ್ಲಿ ಮತ್ತೆ ಕಾರ್ಯಚರಣೆ ನಡೆಸಿದ್ದರು.ನದಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗಳಿಂದಾಗಿ ಕಾರ್ಯಾಚರಣೆಗೆ ಅಡೆತಡೆಯಾಗುತ್ತದೆ ಎಂಬ ಕಾರಣಕ್ಕೆ,ಹೆಸ್ಕಾಂ ಇಲಾಖೆಯವರನ್ನು ಬಳಸಿಕೊಂಡು,ತಂತಿಗಳನ್ನು ತುಂಡರಿಸಿ ತಕ್ಕಮಟ್ಟಿನ ಅನುಕೂಲ ಕಲ್ಪಿಸಲಾಗಿತ್ತು.ನಂತರ ಈಶ್ವರ್ ಮಲ್ಪೆ ಹಾಗೂ ಅವರ ಜೊತೆ ಎನ್ ಡಿ ಆರ್ ಎಫ್ ಸಿಬ್ಬಂದಿಯೋರ್ವರೂ ಸಹ ಸ್ಕೂಬಾ ಡೈವಿಂಗ್ ಮಾದರಿಯಲ್ಲಿ ಜಂಟಿ ಕಾರ್ಯಚರಣೆ ಗಿಳಿದಿದ್ದರು.

ಎಸ್ಪಿ ನಾರಾಯಣ ಎಂ, ಖುದ್ದು ಕಾರ್ಯಚರಣೆ ಸ್ಥಳದಲ್ಲಿ ಹಾಜರಿದ್ದು ಕಾರ್ಯಾಚರಣೆಯ ಸಹಾಯಕ ನೇತೃತ್ವ ವಹಿಸಿರುವ ಹಿಂದೆ ಅಂಕೋಲಾದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಂಕಿ ಪೋಲಿಸ್ ಠಾಣೆಯ ಪಿಎಸ್ಐ ಆಗಿರುವ ಮುಷಾಯದ್ ಮತ್ತು ತಂಡಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದರು. ಶಾಸಕ ಸತೀಶ ಸೈಲ್, ಡಿ.ಸಿ ಲಕ್ಷ್ಮೀಪ್ರಿಯಾ , ಡಿವೈಎಸ್ಪಿ ಗಿರೀಶ್ ಸ್ಥಳದಲ್ಲಿದ್ದು ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದರು.ಮಳೆ ಹೆಚ್ಚಾಗಿ ಕಂಡು ಬರದೇ ,ತೆಳು ಬಿಸಿಲಿನ ಪೂರಕ ವಾತಾವರಣದಲ್ಲಿ,ಗಂಗಾವಳಿ ನದಿ ನೀರಿನ ಮಟ್ಟವೂ ಶನಿವಾರಕ್ಕಿಂತ ಸುಮಾರು ಐದು ಅಡಿ ಕಡಿಮೆಯಾಗಿರುವುದು ಈ ದಿನ ಕಾರ್ಯಾಚರಣೆ ಯಶಸ್ವಿಯಾಗಬಹುದೆಂಬ ನಿರೀಕ್ಷೆ ಇತ್ತು.

ಈಶ್ವರ ಮಲ್ಪೆ ಮತ್ತು ತಂಡ ಸತತ ಪ್ರಯತ್ನ ಮಾಡಿದರೂ,ನದಿ ನೀರಿನ ಒಳ ಹರಿವು,ನದಿ ಒಳಗಡೆ ಬಿದ್ದಿರುವ ಆಲದ ಮರ,ಇತರೆ ಅಪಾಯಕಾರಿ ಸಾಮಗ್ರಿಗಳು ಕಾರ್ಯಾಚರಣೆಗೆ ಹಿನ್ನಡೆ ಉಂಟು ಮಾಡುತ್ತಿದ್ದವಲ್ಲದೇ,ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯಾಚರಿಸುವುದು ತುಂಬಾ ಅಪಾಯಕಾರಿ ಸಹ ಎನಿಸಿತ್ತು..ಈ ಎಲ್ಲಾ ಕಾರಣಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವ ಮತ್ತು ಮುಂದಿನ ದಿನಗಳಲ್ಲಿ ಪೂರಕ ವಾತಾವರಣ ಮತ್ತು ವ್ಯವಸ್ಥೆಯನ್ನು ಗಮನಿಸಿ,ಮತ್ತೆ ಕಾರ್ಯಾಚರಣೆ ಆರಂಭಿಸುವುದೇ ಎಂಬ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಡಳಿತ ಮುಂದಾಗುವ ಸಾಧ್ಯತೆಗಳು ಕೇಳಿ ಬಂದಿವೆ.

ಈ ಕುರಿತು ಸಾಯಂಕಾಲ 4.30 ರ ನಂತರ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.ಒಟ್ಟಿನಲ್ಲಿ ಈ ಮಹಾ ದುರಂತ,ಕೊನೆಗೂ ಒಂದರ್ಥದಲ್ಲಿ ಶೋಧ ಕಾರ್ಯಾಚರಣೆಯ ನಿರೀಕ್ಷಿತ ಯಶಸ್ಸು ದೊರೆಯದೇ,ಕೆಲ ಕಾರಣಗಳಿಂದ ಆಡಳಿತ ವರ್ಗ, ಜನ ಪ್ರತಿನಿಧಿಗಳು,ನೊಂದ ಕುಟುಂಬಗಳು ಮತ್ತಿತರರಲ್ಲಿ ತೀವ್ರ ನಿರಾಸೆ ಮೂಡಿಸುವಂತಾಗಿದೆ.12ನೇ ದಿನದ ಕಾರ್ಯಾಚರಣೆ ಬಳಿಕ,ನಾಳೆ ಯಶಸ್ಸು ದೊರೆಯದಿದ್ದರೆ ಮುಂದೇನು ಎಂಬ ಪ್ರಶ್ನೆಯೊಂದಿಗೆ,ವಿಸ್ಮಯ ವಾಹಿನಿಯೂ, ಮುಂದಿನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದೆಂಬ ಊಹೆ ವ್ಯಕ್ತಪಡಿಸಿತ್ತು. ಈಗ ಆ ಊಹೆ ಸರಿಯಾದಂತಿದ್ದು,ಸರ್ಕಾರದ ಹಾಗೂ ಹಿರಿಯ ಮಂತ್ರಿಗಳ ಮಟ್ಟದಲ್ಲಿ ಚರ್ಚೆ ನಡೆದು,ಯಾವೆಲ್ಲ ರೀತಿ ಕ್ರಮ ಕೈಗೊಳ್ಳಬಹುದು ಎಂಬುದಷ್ಟೇ ಅಧಿಕೃತವಾಗಿ ಘೋಷಣೆ ಆಗಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button