Follow Us On

WhatsApp Group
Important
Trending

ಹೆದ್ದಾರಿ ಟನೆಲ್ ಬಳಿ ಸ್ವಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿತ :ಸಂಚಾರ ತಾತ್ಕಾಲಿಕವಾಗಿ ಬಂದ್ ?

IRBಗೆ ಟೋಲ್ ಸಂಗ್ರಹದ ಆಟ : ಜನ ಸಾಮಾನ್ಯರಿಗೆ ಪ್ರಾಣ ಸಂಕಟ

ಅಂಕೋಲಾ : ತಾಲೂಕಿನಿಂದ ಬಿಣಗಾ ಮೂಲಕ ಕಾರವಾರ ತಲುಪುವ ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿ ಸುರಂಗ ಮಾರ್ಗದ (ಟನೆಲ್ ) ಬಳಿ ಸ್ವಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ತಾತ್ಕಾಲಿಕವಾಗಿ ಒಂದು ಬದಿಯಲ್ಲಿ ಸುರಂಗ ಮಾರ್ಗದ ಸಂಚಾರ ಬಂದ್ ಮಾಡಲಾಗಿದೆ.

ಅಗಸ್ಟ್ 3 ರ ಶನಿವಾರ ಬೆಳಿಗ್ಗೆ ಒಂದು ಬದಿಯ ಸುರಂಗ ಮಾರ್ಗದ ಪ್ರವೇಶ ದ್ವಾರದ ಬಳಿ, ಹತ್ತಿರದ ಗುಡ್ಡದ ಕಲ್ಲು ಮತ್ತು ಮಣ್ಣುಗಳು ಕುಸಿದು, ಹೆದ್ದಾರಿ ಸಂಚಾರಕ್ಕೆ ಅಪಾಯ ಮತ್ತು ಅಡ್ಡಿಯಾಗುವಂತೆ ಬಿದ್ದಿದ್ದು, ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಐ ಆರ್ ಬಿ ಕಂಪನಿಯವರಿಗೆ ಕೊಂಚ ತಲೆನೋವು ತಂದಂತಿದ್ದು, ಮಣ್ಣು ಮತ್ತು ಕಲ್ಲು ತೆರವಿಗೆ ಐಆರ್ ಬಿ ಮುಂದಾಗಿದೆ. ತಾತ್ಕಾಲಿಕವಾಗಿ ಒನ್ ವೇ ರೂಟ್ ಬಂದ್ ಮಾಡಲಾಗಿದ್ದು, ಅಂಕೋಲಾ ಕಡೆಯಿಂದ ಕಾರವಾರ ಕಡೆ ಸಂಚರಿಸುವ ವಾಹನಗಳನ್ನು ಬೈತಖೋಲ್ ಮಾರ್ಗದಿಂದ (ಹಳೆಯ ರೂಟ್ ) ಸಂಚರಿಸುವಂತೆ ಅವಕಾಶ ಮಾಡಿಕೊಡಲಾಗಿದೆ. ಅಧಿಕಾರ ಮತ್ತು ಪ್ರಭಾವದ ಮುಂದೆ ಎಲ್ಲವೂ ನಗಣ್ಯ ಎನ್ನುವಂತೆ, ಶನಿವಾರ ಸಂಜೆ ಇಲ್ಲವೇ ರಾತ್ರಿ ಬೆಳಗಾಗುವುದರೊಳಗೇ ಮತ್ತೆ ಟನಲ್ ಸಂಚಾರಕ್ಕೆ ಅನುಮತಿ ದೊರೆತರೂ ಆಶ್ಚರ್ಯ ಪಡಬೇಕಿಲ್ಲ.

ಬಿಣಗಾ ಬಳಿ ನಿರ್ಮಾಣ ಮಾಡಲಾಗಿರುವ ಈ ಸುರಂಗ ಮಾರ್ಗದ ಅಕ್ಕ ಪಕ್ಕದಲ್ಲಿ ಮತ್ತು ಒಳ ಭಾಗದಲ್ಲಿ ಆಗಾಗ ನೀರು ಅಸಿಯುವುದು, ಮಳೆಗಾಲದಲ್ಲಂತೂ ಜೋರಾದ ಸೋರುವಿಕೆ ಮತ್ತಿತರ ಕಾರಣಗಳಿಂದ ಟನಲ್ ಸಂಚಾರಿಗಳು ಆತಂಕದಿಂದಲೇ ಓಡಾಡುವಂತಾಗಿತ್ತು. ಕಳೆದ ವರ್ಷ ಈ ಟನಲ್ ವಿಚಾರ ರಾಜಕೀಯ ತಿರುವಿನೊಂದಿಗೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತಲ್ಲದೇ, ಕೆಲ ದಿನಗಳ ಮಟ್ಟಿಗೆ ಸುರಂಗ ಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ನಂತರ ಎಮ್ ಎಲ್ ಸಿ ಗಣಪತಿ ಉಳ್ವೇಕರ ಪ್ರತಿಭಟಿಸಿದ್ದರು.

ನಂತರ ಸುರಂಗ ಮಾರ್ಗದ ಸುರಕ್ಷತೆ ಕುರಿತು ಎನ್ ಎಚ್ ಎ ಐ ಇಲಾಖೆ ವತಿಯಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಈಗ ಮತ್ತೆ ಅದೇ ಸುರಂಗ ಮಾರ್ಗದ ಪ್ರವೇಶ ದ್ವಾರದ ಬಳಿ ಗುಡ್ಡ ಕುಸಿತ ಸಂಭವಿಸಿ ಕಲ್ಲು ಬಂಡೆಗಳು ಕೆಳಗೆ ಉರುಳಿದ್ದು ಸುರಂಗ ಮಾರ್ಗದ ಪ್ರಯಾಣ ಎಷ್ಟು ಸುರಕ್ಷಿತ ಎನ್ನುವ ಆತಂಕದ ನಡುವೆಯೇ, ಶಿರೂರು ಗುಡ್ಡ ಕುಸಿತ ದುರಂತ ಮತ್ತಿತರ ದುರ್ಘಟನೆಗಳ ಬಳಿಕವಾದರೂ ಸಂಬಂಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳು ಐಆರ್‌ಬಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವರೇ? ಐಆರ್ ಬಿ ಲೂಟಿಕೋರ ಕಂಪನಿ ಎಂದು ನೇರವಾಗಿ ಆರೋಪಿಸುವ ಪ್ರಣವಾನಂದ ಶ್ರೀಗಳ ಹೋರಾಟಕ್ಕೆ ನೈಜ ಬೆಂಬಲ ಮತ್ತು ಬಲ ಸಿಗಲಿದೆಯೇ ?ಸುರಕ್ಷತೆಗೆ ಒತ್ತು ನೀಡದೆ ಜನ ಜೀವನದ ಜೊತೆ ಚೆಲ್ಲಾಟ ಆಡುತ್ತ, ಟೋಲ್ ಸಂಗ್ರಹ ಮಾತ್ರ ನಮ್ಮ ಗುರಿ ಎಂಬಂತಿರುವ ಕಳ್ಳ ಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನುವ ಪ್ರಶ್ನೆ ಪ್ರಜ್ಞಾವಂತ ವಲಯದಿಂದ ಕೇಳಿಬಂದಿದ್ದು,ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳೇನು ಎನ್ನುವುದನ್ನು ಕಾದು ನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button