Follow Us On

WhatsApp Group
Big News
Trending

ಪತಂಜಲಿ ಯೋಗ ಸಮಿತಿಯಿಂದ ಗಿಡಮೂಲಿಕೆ ದಿನಾಚರಣೆ

ಅಂಕೋಲಾ: ಮಾನವನ ಬಹುತೇಕ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಪರಿಹಾರವಿದೆ. ಮನುಷ್ಯ ಅನಾದಿಕಾಲದಿಂದಲೂ ತನ್ನೆಲ್ಲ ಆರೋಗ್ಯ ಸಮಸ್ಯೆಗಳಿಗೆ ಪ್ರಕೃತಿದತ್ತವಾದ ಗಿಡಮೂಲಿಕೆಗಳಿಂದಲೇ ಪರಿಹಾರ ಕಂಡುಕೊಳ್ಳುತ್ತಾ ಬಂದಿದ್ದಾನೆ ಎಂದು ಕಡಲ ವಿಜ್ಞಾನಿ ಹಾಗೂ ಪರಿಸರ ತಜ್ಞರು ಆದ ಡಾ. ವಿ.ಎನ್. ನಾಯಕ ಹೇಳಿದರು. ಅವರು ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಕಿಸಾನ್ ಸಮಿತಿ, ಯುವ ಭಾರತ ಮತ್ತು ಪತಂಜಲಿ ಮಹಿಳಾ ಯೋಗ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ ೪ ರಂದು ಆಚಾರ್ಯ ಬಾಲಕೃಷ್ಣ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ `ಜಡಿಬೂಟಿ (ಗಿಡಮೂಲಿಕೆ) ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.

ಬೇವು, ತುಳಸಿ, ಗರಿಕೆ, ಒಂದೆಲಗ, ಏಕನಾಯಕ ಮುಂತಾದ ಗಿಡಗಳ ವಿಶೇಷವಾಗಿ ಮಾವಿನ ಎಲೆಗಳ ಹಲವು ಔಷಧೀಯ ಉಪಯೋಗಗಳ ಕುರಿತು ಉಪಯುಕ್ತವಾದ ಮಾಹಿತಿಯನ್ನು ಹಂಚಿಕೊಂಡರು. ಇಂದು ಅಳಿವಿನಂಚಿಗೆ ಸರಿದಿರುವ ಅಶೋಕ ಮರಗಳ ಸಂರಕ್ಷಣೆಯ ಅಗತ್ಯತೆಯನ್ನು ಮನವರಿಕೆ ಮಾಡಿದರು. ಕೇವಲ ಆಯುರ್ವೇದದಲ್ಲಿ ಮಾತ್ರವಲ್ಲದೇ ಆಲೋಪತಿ ಔಷಧ ತಯಾರಿಕೆಯಲ್ಲಿಯೂ ಯಥೇಚ್ಛ ಪ್ರಮಾಣದಲ್ಲಿ ಗಿಡಮೂಲಿಕೆ ಬಳಕೆಯಾಗುತ್ತಿರುವುದರ ಕುರಿತು ತಿಳಿಸಿದರು. ಯಾವ ಖಾಯಿಲೆಗೆ ಯಾವ ಗಿಡಮೂಲಿಕೆಗಳನ್ನು ಹೇಗೆ ಬಳಸಬೇಕು ಎನ್ನುವುದನ್ನೂ ಸವಿಸ್ತಾರವಾಗಿ ವಿವರಿಸಿದರು. ಜೀವರಕ್ಷಕ ಔಷಧೀಯ ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪತಂಜಲಿ ಯೋಗ ಸಮಿತಿಯ ಪ್ರಭಾರಿಗಳಾದ ವಿನಾಯಕ ಗುಡಿಗಾರ ಅವರು ಆಚಾರ್ಯ ಬಾಲಕೃಷ್ಣ ಅವರ ಪರಿಚಯ ಹಾಗೂ ಆಯುರ್ವೇದ ಕ್ಷೇತ್ರದಲ್ಲಿ ಆಚಾರ್ಯರ ಹಾಗೂ ಪತಂಜಲಿ ಸಂಸ್ಥೆಯ ಸಾಧನೆಯ ಕುರಿತಾಗಿ ವಿವರಿಸಿದರು. ಈ ಸಂದರ್ಭದಲ್ಲಿ ನಾಟಿವೈದ್ಯೆ ಶ್ರೀಮತಿ ದೇವಿ ಗೌಡ ಹಡವ ಹಾಗೂ ಕಡಲ ವಿಜ್ಞಾನಿ ಡಾ. ವಿ.ಎನ್. ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾರತ ಸ್ವಾಭಿಮಾನ ಟ್ರಸ್ಟಿನ ಪ್ರಭಾರಿಗಳಾದ ಡಾ. ವಿಜಯದೀಪ ಅವರು ಹಲವು ಔಷಧಿ ಸಸ್ಯಗಳ ಪರಿಚಯ ನೀಡಿದರು.

ಈ ಸಂದರ್ಭದಲ್ಲಿ ಔಷಧಿ ಸಸ್ಯಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸ್ಮಿತಾ ರಾಯಚೂರು ಅವರು ಮಾತನಾಡಿ ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ ಸ್ಥಳೀಯರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಅಂಕೋಲೆಯ ಪತಂಜಲಿ ಯೋಗ ಸಮಿತಿಯು ಮಾಡುತ್ತಾ ಬಂದಿದೆ ಎಂದರು. ಕುಮಾರಿ ಶ್ರೇಯಾ ಶೆಟ್ಟಿಯವರ ಪರಿಸರ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶ್ರೀಮತಿ ಶೀಲಾ ನಾಯ್ಕ ಸರ್ವರನ್ನು ಸ್ವಾಗತಿಸಿದರು, ರಾಮ ನಾಯ್ಕ ವಂದಿಸಿದರು. ಶ್ರೀಮತಿ ನಿರುಪಮಾ ಅಂಕೋಲೆಕರ ಕಾರ್ಯಕ್ರಮವನ್ನು ನಿರ್ವಹಿಸಿದರು.

ಈ ಸಂದರ್ಭದಲ್ಲಿ ಕಿಸಾನ್ ಸಮಿತಿ ಪ್ರಭಾರಿಗಳಾದ ಅಭಯ ಮರಬಳ್ಳಿ, ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ, ಶ್ರೀನಿವಾಸ್ ಶೆಟ್ಟಿ, ವಿ.ಕೆ. ನಾಯರ್, ಎಚ್.ಕೆ. ನಾಯ್ಕ, ಸುರೇಶ ನಾಯ್ಕ, ವಾಣಿ ನಾಯಕ, ರಾಧಿಕಾ ಆಚಾರಿ, ಸಂಧ್ಯಾ ಕಾಕರಮಠ, ಸಹನಾ ತೇಲಂಗ, ಲತಾ ನಾಯ್ಕ, ಜಯಲಕ್ಷ್ಮಿ ಕಾಮತ, ದೀಪಕ ನಾಯ್ಕ, ರವಿ ನಾಯ್ಕ, ಮಂಜುನಾಥ ವರ್ಣೇಕರ, ವೆಂಕಟೇಶ ಗೌಡ, ಗೋಪಾಲ ಗೌಡ ಇನ್ನಿತರ ಪತಂಜಲಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button