ಅಂಕೋಲಾ: ಪಟ್ಟಣದ ಕಾರವಾರ ರಸ್ತೆಗೆ ಹೊಂದಿಕೊಂಡಿರುವ ಕಣಕಣೇಶ್ವರ ದೇವಸ್ಥಾನ ಪಕ್ಕದ ಎಟಿಎಂನಲ್ಲಿ ನಿವೃತ್ತ ನೌಕರರೋರ್ವರ ಎಟಿಎಂ ಕಾರ್ಡ್ ಬದಲಾಯಿಸಿ ರೂ 13ಸಾವಿರ ವಂಚಿಸಿರುವುದು ಇತ್ತೀಚೆಗೆ ನಡೆದಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹುಲಿದೇವರವಾಡ ನಿವಾಸಿ, ಕೆಇಬಿ ನಿವೃತ್ತ ನೌಕರ ದೇವಿದಾಸ ಕೃಷ್ಣ ಮುಲಿಮಾಳಿ ನಾಯರ್ (69), ಹಣ ಕಳೆದುಕೊಂಡವರು. ಅಗಸ್ಟ 1 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಪಟ್ಟಣದ ಕಾರವಾರ ರಸ್ತೆಯಲ್ಲಿರುವ ಕಣಕಣೇಶ್ವರ ದೇವಸ್ಥಾನದ ಎಸ್‌ಬಿಐ ಬ್ಯಾಂಕ್ ಎಟಿಎಂ ಸೆಂಟರ್ ಗೆ SBI ಸೆಂಟರ್ ಎಟಿಮ್ ನಲ್ಲಿ ಹೋಗಿ, ತಮ್ಮ ಪೆನ್ಶನ್ ಖಾತೆಗೆ ಸಂಬಂಧಿಸಿದ ಬೇರೊಂದು ಬ್ಯಾಂಕಿನ ಎಟಿಮ್ ಕಾರ್ಡ್ ಹಾಕಿ ಹಣವನ್ನು ತೆಗೆಯಲು ಹೋದಾಗ,ಆ ಎಟಿಎಂ ಮಷೀನ್ ನಲ್ಲಿ ಹಣವಿಲ್ಲ ಎಂದು ತೋರಿಸಿದೆ. ಹೀಗಾಗಿ ಅವರು ಅಲ್ಲೇ ಪಕ್ಕದಲ್ಲಿರುವ ಎಕ್ಸಿಸ್ ಬ್ಯಾಂಕ್ ಎಟಿಎಂ ಗೆ ಹೋಗಿ,ಅಲ್ಲಿದ್ದವರ ಬಳಿ ಹಣವಿದೆಯೇ ಎಂದು ವಿಚಾರಿಸಿದ್ದಾರೆ.
ಈ ವೇಳೆ ಯಾರೋ ಆರೋಪಿತರು ಮೊದಲೇ ಹೊಂಚು ಹಾಕಿಕೊಂಡಂತಿದ್ದು ,ದೇವಿದಾಸ ನಾಯರ್ ಅವರಿಗೆ ಅರಿವಿಗೆ ಬಾರದಂತೆ, ಅವರ ಕಾರ್ಡ್ ಬದಲಾಯಿಸಿ ( ಅಂತಹುದೇ ಇನ್ನೊಂದು ಕಾರ್ಡ್ ನೀಡಿ ), ನಂತರ ನಿವೃತ್ತ ನೌಕರನ ಕಾರ್ಡ್ ಬಳಸಿ ಅವರ ಖಾತೆಯಲ್ಲಿದ್ದ ಒಟ್ಟೂ ರೂ 13000 ಸಾವಿರ ಹಣವನ್ನು ತೆಗೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿ ವಂಚಕರನ್ನು ಪತ್ತೆ ಹಚ್ಚಿ,ತನ್ನ ಹಣ ಮರಳಿಸಿ ಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.
ನಿವೃತ್ತ ನೌಕರನ ಪೆನ್ಷನ್ ಹಣ ಪ್ರತಿ ತಿಂಗಳು ಜೀವನಾಧಾರಕ್ಕೆ ಬಳಕೆಯಾಗುತ್ತಿತ್ತು.ಅಲ್ಲದೇ ಕಳೆದ ಕೆಲವು ತಿಂಗಳ ಹಿಂದೆ ಅವರ ಪತ್ನಿ ಅನಾರೋಗ್ಯದಿಂದ ಅಕಾಲಿಕ ನಿಧನ ಹೊಂದಿದ್ದು,ಮೊದಲೇ ನೊಂದಿದ್ದ ಇಂಥವರಿಗೆ ಮೋಸ ಆಗಬಾರದಿತ್ತು ಎಂದು,ಅವರ ಕುಟುಂಬದ ಕೆಲ ಪರಿಚಯಸ್ತರು ಬೇಸರದಿಂದ ಮಾತನಾಡಿಕೊಂಡಂತಿತ್ತು. ತಾಲೂಕು ಜಿಲ್ಲೆ ಹಾಗೂ ರಾಜ್ಯದ ಇತರಡೆಯು ಇಂತಹ ವಂಚನೆ ಕೃತ್ಯಗಳು ಆಗಾಗ ಕೇಳಿ ಬರುತ್ತಲೇ ಇದ್ದು,ಅಪರಿಚಿತರನ್ನು ನಂಬದೇ,ಸಾರ್ವಜನಿಕರು ಸ್ವಯಂಜಾಗ್ರತಿ ತೆಗೆದುಕೊಳ್ಳಬೇಕಿದೆ.ಸಿ ಸಿ ಕ್ಯಾಮೆರಾ ದೃಶ್ಯಾವಳಿ ಮತ್ತಿತರ ಪೂರಕ ಸಾಕ್ಷ್ಯ ಸಂಗ್ರಹಿಸಿ,ಪೊಲೀಸರು ವಂಚಕರ ಜಾಲ ಭೇದಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ