ಪ್ರಸಿದ್ಧ ನಾಗಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಸಂಭ್ರಮ: ರಾಜ್ಯದೆಲ್ಲೆಡೆಯಿಂದ ಹರಿದುಬಂದ ಜನಸಾಗರ
ಹೊನ್ನಾವರ; ಸುಬ್ರಹ್ಮಣ್ಯ ಕ್ಷೇತ್ರವೆಂದ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ನಮ್ಮ ಗಮನ ಹರಿಯುತ್ತದೆ. ಆದರೆ ಆ ಕ್ಷೇತ್ರಕ್ಕಿಂತ ಪುರಾತನವಾದ, ಅದರಷ್ಟೇ ಶಕ್ತಿಶಾಲಿಯಾದ ಸುಬ್ರಹ್ಮಣ್ಯ ಕ್ಷೇತ್ರ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿದೆ. ಹೌದು, ಇದು ಪ್ರಸಿದ್ದ ನಾಗಕ್ಷೇತ್ರಗಳಲ್ಲೊಂದು. ಹೀಗಾಗಿ ನಾಗರಪಂಚಮಿಗೆ ಇಲ್ಲಿ ಜನಸಾಗರವೇ ಹರಿದುಬರುತ್ತದೆ.
ಇಲ್ಲಿ ನಾಗರ ಕಲ್ಲಿಗೆ ನೈವೇದ್ಯ ನೀಡಿ, ಹಾಲಿನ ಅಭಿಷೇಕ ಮಾಡಿ, ಇಡಿಯಾದ ಬಾಳೆಗೊನೆ, ಅಡಿಕೆ ಹಿಂಗಾರ, ತೆಂಗಿನಕಾಯಿಗಳನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತರು ತಮ್ಮ ಸಂಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ. ನಾಗರ ಹಾವಿನ ದೋಷಗಳ ಪರಿಹಾರಕ್ಕೆ ಈ ಕ್ಷೇತ್ರಕ್ಕೆ ಹರಕೆ ಹೇಳಿಕೊಂಡರೆ ಪರಿಹಾರ ದೊರೆಯುತ್ತದೆ, ಹಾವಿನ ದೊಷ ದೂರವಾಗುತ್ತದೆ ಎಂಬುದು ಪ್ರತೀತಿ.
ಚರ್ಮರೋಗ ನಿವಾರಣೆ, ಸಂತಾನಪ್ರಾಪ್ತಿ , ದುಸ್ವಪ್ನ ದೂರೀಕರಣ, ವೈವಾಹಿಕ ಸಂಬoಧ ಪ್ರಾಪ್ತಿ, ಉದ್ಯೋಗ ಮತ್ತು ವ್ಯವಹಾರ ವೃದ್ಧಿಗೆ ಜನ ಹರಕೆ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಬೆಳ್ಳಿ, ಕಂಚು, ತಾಮ್ರಗಳ ತೊಟ್ಟಿಲು, ಸುಬ್ರಹ್ಮಣ್ಯ ಮೂರ್ತಿ, ನಾಗ ದೇವರ ಮೂರ್ತಿಗಳನ್ನು ಹರಕೆಯಾಗಿ ಅರ್ಪಿಸುತ್ತಾರೆ. ಮತ್ತು ತುಪ್ಪದ ದೀಪಗಳನ್ನು ಹಚ್ಚುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆಯುತ್ತಾರೆ.
ನಾಗ ದೋಷ ಮುಕ್ತಿಗಾಗಿ ಹಲಾರು ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾಧ ಸ್ವೀಕರಿಸುತ್ತಾರೆ. ಭಕ್ತರು ನಾಗರಪೂರ್ತಿಗಳನ್ನು ಪ್ರತಿಷ್ಟಾಪಿಸಲು ಪ್ರತ್ಯೇಕವಾಗಿ ನಾಗವನ ನಿರ್ಮಿಸಲಾಗಿದ್ದು 4000 ಕ್ಕೂ ಅಧಿಕ ನಾಗರ ಕಲ್ಲುಗಳಿವೆ. ಸರ್ಪ ಸಂಸ್ಕಾರವನ್ನು ಹೊರತುಪಡಿಸಿ ಎಲ್ಲಾ ಬಗೆಯ ಪೂಜೆಗಳು ಶ್ರೀ ಕ್ಷೇತ್ರ ಮುಗ್ವಾದಲ್ಲಿ ಜರುಗುತ್ತವೆ. ಈ ದೇವಾಲಯ ನಾರದಮುನಿಗಳಿಂದ ಪ್ರತಿಷ್ಠಾಪನೆಯಾಗಿದ್ದು ಎಂಬ ಉಲ್ಲೇಖವಿದೆ. ಇಲ್ಲಿ ಬಂದು ಸೇವೆ ಸಲ್ಲಿಸಿದ್ರೆ ಭಕ್ತರ ಇಷ್ಟ ಸಿದ್ಧಿಸುತ್ತದೆ ಎಂಬುದು ನಂಬಿಕೆ.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಎಸ್ ಆರ್ ಹೆಗಡೆ ಮಾತನಾಡಿ ಪ್ರತಿವರ್ಷವು ಭಕ್ತರು ಆಗಮಿಸಿ ನಾಗದೇವರಿಗೆ ಅಭಿಷೇಕಗಳನ್ನು ಸಲ್ಲಿಸುವುದೇ ವಿಶೇಷ. ನಾಗವನದಲ್ಲಿ ಪ್ರತಿಷ್ಠಾಪಿಸಿದ ನಾಗದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲು, ವಿವಿಧ ಅಭಿಷೇಕಗಳನ್ನು ಸಲ್ಲಿಸಲು ಭಕ್ತರು ಆಗಮಿಸುತ್ತಾರೆ. ಇನ್ನೂ ಕೆಲವರು ತೀರ್ಥ ಸ್ನಾನ ಮಾಡಿ ಸುಬ್ರಹ್ಮಣ್ಯ, ನಾಗದೇವರಲ್ಲಿ ಹರಕೆಸೇವೆ ಸಲ್ಲಿಸುವ ಪದ್ದತಿಯಿದೆ ಎಂದು ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ