Follow Us On

WhatsApp Group
Important
Trending

ಅಂಕೋಲಾ ಪುರಸಭೆಗೆ ಸಾಮಾನ್ಯ ಮೀಸಲಾತಿ : ಕೈಗೆ ಅಧಿಕಾರ ಗಳಿಕೆಯ ಯತ್ನ : ಕಮಲಕ್ಕೆ ಅಧಿಕಾರ ಉಳಿಕೆಯ ಪ್ರಯತ್ನ

ಸಹಜವಾಗಿಯೇ ಹೆಚ್ಚಿದೆ ಆಕಾಂಕ್ಷಿಗಳ ಪಟ್ಟಿ. ಪಕ್ಷೇತರರೇ ನಿರ್ಣಾಯಕರಾಗಿರುವ ಚದುರಂಗದಾಟದಲ್ಲಿ ಸಮಬಲದ ಹೋರಾಟ

ಅಂಕೋಲಾ : ಕಳೆದ ಜುಲೈ 7ರಂದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರುಗಳ ಹುದ್ದೆಗೆ ವರ್ಗವಾರು ಮೀಸಲಾತಿ ಕರಡು ಪ್ರಕಟಿಸಿದ್ದ ನಗರಾಭಿವೃದ್ಧಿ ಇಲಾಖೆ, ಈ ಸಂಬಂಧ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಿತ್ತು. ಸದರೀ ಕಾಲಾವಧಿ ಪೂರ್ಣಗೊಂಡಿದ್ದು, ರಾಜ್ಯದ 61 ನಗರ ಸಭೆ, 123 ಪುರಸಭೆ, 117 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದೇ ವೇಳೆ ಅಂಕೋಲಾ ಪುರಸಭೆಯ ಅಧ್ಯಕ್ಷ -ಸಾಮಾನ್ಯ (G ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ (GW) ಗೆ ಮೀಸಲಿಡಲಾಗಿದೆ.

ಒಟ್ಟೂ 23 ಸದಸ್ಯ ಬಲದ ಅಂಕೋಲಾ ಪುರ ಸಭೆಯಲ್ಲಿ, ಜಗದೀಶ ನಾಯಕ ಅಕಾಲಿಕ ನಿಧನದಿಂದ ಒಂದು ಸ್ಥಾನ ತೆರವಾಗಿದ್ದು,ಆ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಬೇಕಿದೆ.ಉಳಿದಂತೆ 22 ಸದಸ್ಯರಲ್ಲಿ ಮೀಸಲಾತಿಯ (ಸಾಮಾನ್ಯ ) ಪ್ರಕಾರ ಎಲ್ಲಾ 22 ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಕ್ತ ಅವಕಾಶವಿದೆ. ಅಂತೆಯೇ ಉಪಾಧ್ಯಕ್ಷ ಸ್ಥಾನವನ್ನು (ಸಾಮಾನ್ಯ ಮಹಿಳೆಗೆ) ಮೀಸಲಿಡಲಾಗಿದ್ದು,ಕಾಂಗ್ರೆಸ್ (3) ಮತ್ತು ಬಿಜೆಪಿಯಲ್ಲಿರುವ (6) ಮತ್ತು ಪಕ್ಷೇತರರಾಗಿ ಗೆದ್ದು ಬಂದಿರುವ 2 ಮಹಿಳೆಯರೂ ಸೇರಿ ಒಟ್ಟೂ 11 ಮಹಿಳೆಯರಲ್ಲಿ ಯಾರೂ ಬೇಕಾದರೂ ಆ ಸ್ಥಾನಕ್ಕೆ ಸ್ಪರ್ಧಿಸುವ ಮುಕ್ತ ಅವಕಾಶವೂ ಇದಾಗಿದೆ.

ಹೀಗಾಗಿ ಈ ಬಾರಿಯ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಯ ಚುನಾವಣೆ ಸಾಮಾನ್ಯ ಮೀಸಲಾತಿಯೊಂದಿಗೆ,ಹಲವರಲ್ಲಿ ಆಸೆ ಗರಿಗೆದರುವಂತಾಗಿದೆ. ಇನ್ನು ಒಟ್ಟಾರೆ ಸಂಖ್ಯಾಬಲ ವಿಶ್ಲೇಷಿಸುವುದಾದರೆ, ಬಿಜೆಪಿ (9) ಕಾಂಗ್ರೆಸ್ (9) ಸದಸ್ಯರೊಂದಿಗೆ ಸಮಬಲ ಹೊಂದಿವೆ. ಉಳಿದವರು ಪಕ್ಷೇತರರಾಗಿದ್ದು(4) ಎಲ್ಲರೂ ಸೇರಿ 22 ಸದಸ್ಯ ಬಲವಿದೆ.

ರಾಜಕೀಯ ಚದುರಂಗದಾಟದಲ್ಲಿ ಪಕ್ಷದ ಆಕಾಂಕ್ಷಿಗಳು ಮತ್ತು ಇತರೆ ಸದಸ್ಯರ ಜೊತೆ ಸ್ವತಂತ್ರ (ಪಕ್ಷೇತರ) ಸದಸ್ಯರ ಬೆಂಬಲವೇ ನಿರ್ಣಾಯಕವಾಗಲಿದೆ. ಮೊದಲ ಅವಧಿಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಮಲ ಪಡೆ,ಎರಡನೇ ಅವಧಿಗೂ ಮತ್ತೆ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದೆ.ಈ ಮೊದಲಿನ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಯಾ ಬಾಲಕೃಷ್ಣ ನಾಯ್ಕ , ಬರುವ ಅವಧಿಗೆ ಪುರಸಭೆಯ ಅಧ್ಯಕ್ಷರಾಗುವ ಪ್ರಬಲ ಆಕಾಂಕ್ಷಿಯಾಗಿದ್ದು,ಅಧ್ಯಕ್ಷ ಗಾದಿಯ ರೇಸಿನಲ್ಲಿ ಇತರರಿಗಿಂತ ಮುಂದಿದ್ದಾರೆ.ಅವರಿಗೆ ಸ್ಪ ಪಕ್ಷದ ಇನ್ನೋರ್ವ ಆಕಾಂಕ್ಷಿಯಾಗಿ ಸೂರಜ್ ನಾಯ್ಕ್ ಸಹ ಪ್ರಯತ್ನ ಮುಂದುವರೆಸಿರುವುದು ಕೊಂಚ ಹಿನ್ನಡೆಯಾದಂತಿದೆ.

ಈ ನಡುವೆ ನಿಕಟ ಪೂರ್ವ ಅಧ್ಯಕ್ಷೆ ಶಾಂತಲಾ ನಾಡಕರ್ಣಿ,ತನಗೆ ಈ ಹಿಂದೆ ಅವಕಾಶ ಮಾಡಿಕೊಟ್ಟ ಎಲ್ಲರನ್ನು ಕೃತಜ್ಞತೆಯಿಂದ ಸ್ಮರಿಸಿ,ಇನ್ನೊಮ್ಮೆ ಅವಕಾಶ ದೊರೆತರೆ ಪಟ್ಟಣದ ಅಭಿವೃದ್ಧಿಯ ತನ್ನ ಕನಸಿನ 1-2 ಯೋಜನೆಗಳಿಗೆ ಕಾಯಕಲ್ಪ ನೀಡಬಹುದಿತ್ತು.ನಾನು ಇಲ್ಲಿ ಆಕಾಂಕ್ಷಿಯಾದರು ಸಹ,ಇತರರಿಗೂ ಅವಕಾಶ ಮಾಡಿಕೊಡಲು ಪಕ್ಷ ತೀರ್ಮಾನಿಸಿದರೆ ನಾನೂ ಸಹ ಪಕ್ಷದ ತೀರ್ಮಾನಕ್ಕೆ ಬದ್ದಳಿರುವೆ ಎನ್ನುವಂತೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಮೂಲಕ ಮುಸುಕಿನ ರಾಜಕೀಯ ಗುದ್ದಾಟಕ್ಕೆ ತೆರೆ ಬೀಳಬೇಕಿದ್ದು,ಪಕ್ಷೇತರ ಒಲವೇ,ಕೈಗೆ ಬಲವೋ ಅಥವಾ ಕಮಲಕ್ಕೆ ಜಯ ವೋ ಎಂಬುದನ್ನು ನಿರ್ಧರಿಸಲಿದ್ದು ಅಗಸ್ಟ 19 ರಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.ಈ ಬಾರಿ ಅಧಿಕಾರ ಅವಧಿಯು 15 ರಿಂದ 18 ತಿಂಗಳು ಮಾತ್ರ ಸಿಗುವ ಸಾಧ್ಯತೆ ಇದ್ದು,ಸೀಮಿತ ಅವಧಿಯಲ್ಲಿ ಯಾರೇ ಅಧಿಕಾರಕ್ಕೇರಿದರೂ,ಜಾತಿ- ಪಕ್ಷ ರಾಜಕಾರಣ ಮಾಡದೇ,ಸಾಧ್ಯವಾದಷ್ಟು ಎಲ್ಲರೂ ಒಂದುಗೂಡಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸುವಂತಾಗಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.

ಕಿರಿಯ ಸದಸ್ಯೆ ಮತ್ತು ಹೆಚ್ಚು ವಿದ್ಯಾವಂತೆ ಎನಿಸಿರುವ ಕೀರ್ತಿ ನಾಯಕ ಸಹ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗೆ ಸಹಜ ಅರ್ಹತೆ ಹೊಂದಿರುವ ಮತ್ತು ಇದೇ ವೇಳೆ ಆಕಾಂಕ್ಷಿಯಾಗಿಯೂ ಇರುವ ಸಾಧ್ಯತೆ ಕೇಳಿ ಬಂದಿದೆ. ಉಳಿದಂತೆ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ ಎನ್ನಲಾದ ನಾಗರಾಜ ಐಗಳ ಸಹ ಈ ಬಾರಿ ಅಧ್ಯಕ್ಷರಾಗಬೇಕೆನ್ನುವ ಹಂಬಲದಲ್ಲಿದ್ದಾರೆ.

ಕಳೆದ ಅವಧಿಯಲ್ಲಿ ಇವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಯ ಭರವಸೆ ನೀಡಿ,ಕೊನೆ ಘಳಿಗೆಯಲ್ಲಿ ಆದ ರಾಜಕೀಯ ಬದಲಾವಣೆ ಐಗಳ ಅವರಿಗೆ ಸ್ವಲ್ಪ ಅಸಮಾಧಾನ ತಂದಂತಿದೆ.ಹಾಗಾಗಿ ಈ ಬಾರಿ ತಾನು ಅಧ್ಯಕ್ಷ ಹುದ್ದೆಗೆ ಪಟ್ಟು ಹಿಡಿಯುತ್ತೇನೆ.ಒಂದೊಮ್ಮೆ ಅವಕಾಶ ಸಿಗದಿದ್ದರೆ,ನನಗೆ ಮತ್ಯಾವ ಹುದ್ದೆಗಳು ಬೇಡವೇ ಬೇಡ, ಆದರೆ ಪಕ್ಷಕ್ಷೆ ತಲೆಬಾಗಿ ಈ ಬಾರಿ ಸುಮ್ಮನಿರುವೆ.ಮುಂದಿನ ನಿರ್ಧಾರಗಳನ್ನು ಕಾದು ನೋಡೋಣ ಎಂಬಂತೆ ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ವಿಶ್ವನಾಥ ನಾಯ್ಕ,ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ,ಬಿಜೆಪಿಯಿಂದ ಮರು ಆಯ್ಕೆಗೊಂಡು ವಾರ್ಡಿನಲ್ಲಿ ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಲ್ಲದೇ,ಪಟ್ಟಣದಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿಸಿದ್ದಾರೆ.

ಹೀಗಾಗಿ ಇವರು ಸಹ ಪುರಸಭೆಯ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ಪಕ್ಷದ ಪ್ರಾಬಲ್ಯ ಮತ್ತು ಒಲಿದು ಬಂದಿರುವ ಮೀಸಲಾತಿಯ ಅವಕಾಶ ಸದುಪಯೋಗಪಡಿಸಿಕೊಳ್ಳಲು ಯೋಚಿಸಿದಂತಿದೆ. ಕಳೆದ ಬಾರಿ ತನ್ನ ಶಾಸಕತ್ವದ ಅವಧಿಯಲ್ಲಿ ಅಂಕೋಲಾ ಕ್ಷೇತ್ರದ ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದು ಗೆದ್ದು ಬೀಗಿದ್ದ ರೂಪಾಲಿ ನಾಯ್ಕ್,ಈಗಲೂ ಸಹ ಸ್ಥಳೀಯ ಬಿಜೆಪಿಗೆ ಹೈಕಮಾಂಡ್ ಅವರೇ ಆಗಿರುವುದು,ಅವರ ಕೃಪಾಕಟಾಕ್ಷ ದೊರೆತವರು ಮಾತ್ರ ಸ್ಪರ್ಧೆಯ ರೇಸ್ ನಲ್ಲಿ ಗುರಿ ಮುಟ್ಟಬಹುದು ಎಂಬ ಮಾತು ರಾಜಕೀಯ ವಲಯದಿಂದ ಕೇಳಿಬಂದಿದೆ.

ಅದಕ್ಕೆ ಪೂರಕವಾಗಿ ಈ ಹಿಂದೆ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿ ಬಂದಿದ್ದ ಪುರಸಭೆಯ ಎರಡು ಸದಸ್ಯರನ್ನು ತನ್ನತ್ತ ಸೆಳೆದುಕೊಂಡು,ಮರು ಚುನಾವಣೆಯಲ್ಲಿ ಒರ್ವರನ್ನು ಗೆಲ್ಲಿಸಿ,ಒಂದರ್ಥದಲ್ಲಿ ಕಾಂಗ್ರೆಸ್ ಬಲ ಕುಗ್ಗಿಸಿರುವ ರೂಪಾಲಿಯ ರಾಜಕೀಯ ಚತುರ ನಡೆ,ಮತ್ತು ಪಕ್ಷದ ಹಾಗೂ ಪಕ್ಷೇತರ ಇತರ ಸದಸ್ಯರ ಬೇಕು ಬೇಡಿಕೆಗಳನ್ನು ಈಡೇರಿಸುವ ಸಾಮರ್ಥ್ಯದಿಂದ, ತಾನು ಮಾಜಿ ಶಾಸಕಿಯಾದರು ಸಹ ಛಲ ಬಿಡದೇ,ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾ,ತನ್ನ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಾ ಪಕ್ಷ ಸಂಘಟನೆಯಲ್ಲಿ ಮುನ್ನಡೆಯುತ್ತಿರುವುದು,ಸ್ವಪಕ್ಷೀಯ ಹಾಗೂ ಇತರೆ ಪಕ್ಷದ ವಿರೋಧಿಗಳ ಮಟ್ಟಿಗೆ ನೇರವಾಗಿ ರೂಪಾಲಿ ಅವರನ್ನು ಎದುರಿಸುವುದು ಸವಾಲಿನಂತಿದೆ. ಅಲ್ಲದೇ ಸದ್ಯದ ಮಟ್ಟಿಗೆ ಅಂಕೋಲಾ ಪುರಸಭೆ ಆಡಳಿತದ ಚುಕ್ಕಾಣಿ ಬಿಜೆಪಿ ಪರವಾಗಿದೆ ಎಂದೇ ಹೇಳಬಹುದಾಗಿದೆ.

ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕರು,ಹಾಗೂ ರಾಜ್ಯದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಾಲಾಗಿದ್ದು,ಅಂಕೋಲಾ ಪುರಸಭೆಯಲ್ಲಿಯೂ ಕಾಂಗ್ರೆಸ್ ಸದಸ್ಯರು ಸಮಬಲ ಹೊಂದಿರುವುದು,ಈ ಬಾರಿಯಾದರೂ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲೇಬೇಕೆಂದು ಪ್ರಯತ್ನಿಸುತ್ತಿರುವಂತಿದೆ.ಕಳೆದ ಬಾರಿ ಹೆಚ್ಚಿನ ಸಂಖ್ಯಾ ಬಲವಿದ್ದರೂ ( ಕಾಂಗ್ರೆಸ್- 10, ಬಿಜೆಪಿ 8, ಸ್ವತಂತ್ರರು 5 ) ಅಧಿಕಾರಕ್ಕೇರಲು ಪಕ್ಷೇತರರ ಒಲವು ಗಳಿಸಿಕೊಳ್ಳಲಾಗದೇ ಕೈ ಚೆಲ್ಲಿದ್ದ ಕಾಂಗ್ರೆಸ್ , ಮರು ಚುನಾವಣೆಯಲ್ಲಿ ಒಂದು ಸ್ಥಾನ ಕಳೆದು ಕೊಂಡಿದೆ.ಸ್ವತಂತ್ರ ಅಭ್ಯರ್ಥಿ ಓರ್ವರ ಅಕಾಲಿಕ ನಿಧನದಿಂದ ಒಂದು ಸ್ಥಾನ ತೆರವಾಗಿ,ಒಟ್ಟು 22 ಸಂಖ್ಯಾಬಲದಲ್ಲಿ ( ಕಾಂಗ್ರೆಸ್ 9, ಬಿಜೆಪಿ 9, ಪಕ್ಷೇತರರು 4 ) ಇದ್ದು, ಕಾಂಗ್ರೆಸ್ ಪಕ್ಷ ಗೆಲ್ಲಲು ಕನಿಷ್ಠ 3 ಪಕ್ಷೇತರರ ಬೆಂಬಲ ಗಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ.

ಕಾಂಗ್ರೆಸ್ ಪಕ್ಷದಿಂದ ಪ್ರಕಾಶ್ ಗೌಡ,ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.ಈ ಹಿಂದೆ ಒಮ್ಮೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಂಜುನಾಥ್ ನಾಯ್ಕ, ತಾನೇಕೆ ಅಧ್ಯಕ್ಷರಾಗಬಾರದು ಎನ್ನುತ್ತಲೇ ತಾನೂ ಆಕಾಂಕ್ಷಿ, ಆದರೆ ನಮ್ಮ ಪಕ್ಷದ ಪ್ರಕಾಶ್ ಗೌಡ ಮತ್ತು ನಾವೆಲ್ಲರೂ ಸ್ನೇಹಿತರಾಗಿದ್ದು,ಯಾರಿಗೇ ಅಧಿಕಾರ ಬಂದರೂ ಒಬ್ಬರಿಗೊಬ್ಬರು ತ್ಯಾಗ ಮಾಡಲು ಸಿದ್ದ ಎನ್ನುತ್ತಿದ್ದಾರೆ.ಉಳಿದಂತೆ ಒಂದಿಬ್ಬರಿಗೆ ತಮಗೂ ಅವಕಾಶ ದೊರತಿತೇ ಎಂದು ಒಳಗಿಂದೊಳಗೆ ಮನಸಿರಬಹುದಾದರೂ, ಇತರೇ ಯಾವುದೇ ಸದಸ್ಯರು ಅಧ್ಯಕ್ಷ ಗಾದಿಗೇರಲು ಸ್ವತಃ ತಾವೇ ಮಾನಸಿಕವಾಗಿ ಸಿದ್ದಗೊಂಡಂತಿಲ್ಲ.ಈ ಬಾರಿ ಸ್ಥಳೀಯ ಶಾಸಕ ಸತೀಶ್ ಸೈಲ್, ಕಷ್ಟ ಸಾಧ್ಯವಾಗಿರುವ ಗೆಲುವಿಗೆ ಪ್ರಯತ್ನಿಸಿ,ಕಾಂಗ್ರೆಸ್ಸಿಗೆ ಅಧಿಕಾರ ಗಳಿಸಿಕೊಡುತ್ತಾರೆಯೇ? ಈಗ ಅಲ್ಲದಿದ್ದರೆ ಮುಂದೆ ಯಾವಾಗ ಎನ್ನುವ ಪ್ರಶ್ನೆ ಪಕ್ಷದ ಕೆಲ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮೂಡುವಂತಾಗಿದೆ.

ಈ ಹಿಂದೆ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯರಲ್ಲಿ ಒರ್ವರಾಗಿರುವ ಶ್ರೀಧರ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು,ಇತ್ತೀಚೆಗೆ ಪಕ್ಷ ಹಮ್ಮಿಕೊಂಡ ಮೈಸೂರು ಚಲೋ ಪಾದಯಾತ್ರೆಯಲ್ಲೂ ಪಾಲ್ಗೊಂಡು ತಾನು ಬಿಜೆಪಿ ಜೊತೆ ಇದ್ದೇನೆ ಎನ್ನುವ ಸ್ಪಷ್ಟ ಸಂದೇಶ ನೀಡಿದಂತಿದೆ.ಇದೆ ವೇಳೆ ಈ ಹಿಂದೆ ಪಕ್ಷಕ್ಷೆ ಬೆಂಬಲಿಸಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೇಖಾ ಗಾಂವಕರ,ಪಕ್ಷದ ಕೆಲವರು ತನ್ನನ್ನು ಕಡೆಗಣಿಸುವ ಯತ್ನ ಮಾಡಿದ್ದಾರೆ ಎಂದು ಆಗಾಗ ತಮ್ಮ ಅಸಮಾಧಾನ ತೋರ್ಪಡಿಸುತ್ತಾ ,ಕೆಲವರಿಗೆ ಮುಜುಗರ ತಂದಿದ್ದರಾದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಗೇರಿ ಹಾಗೂ ಪಕ್ಷದ ಪರವಾಗಿಯೇ ಕೆಲಸ ಮಾಡಿದ್ದರು.ಆದರೆ ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ರೇಖಾ ಅವರನ್ನು ಸಮಾಧಾನ ಪಡಿಸುವುದು ರೂಪಾಲಿ ಅವರಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿದ್ದು,ಕಾಂಗ್ರೆಸ್ ಸಹ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು, ಗಾಂವಕರ ಅವರಿಗೆ ಉಪಾಧ್ಯಕ್ಷ ಹುದ್ದೆ ನೀಡಿ ಪ್ರಯತ್ನಿಸುತ್ತಿದೆಯೇ? ,ಅವರ ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಫಲವಾಗಬಹುದು? ರೇಖಾ ಗಾಂವಕರ ಈ ಬಾರಿ ಕಾದು ನೋಡುವ ತಂತ್ರದೊಂದಿಗೆ ಯಾರನ್ನು ಬೆಂಬಲಿಸಬಹುದು,ಮೊದಲು ಬೆಂಬಲ ಪಡೆದಿದ್ದ ಪಕ್ಷದವರೇ ಈ ಬಾರಿಯೂ ಸೂಕ್ತ ಸ್ಥಾನಮಾನ ನೀಡಿ,ಅವರನ್ನು ಸಮಾಧಾನ ಪಡಿಸಿಯಾರೇ ಎಂಬ ಚರ್ಚೆ ಅಲ್ಲಲ್ಲಿ ಕೇಳಿ ಬಂದಿದೆ.

ಪಕ್ಷೇತರರಾಗಿರುವ ಮತ್ತು ಈ ಹಿಂದೆ ಬಿಜೆಪಿಗೆ ಬೆಂಬಲಿಸಿದ್ದ ಹಿರಿಯ ಸದಸ್ಯೆ ತಾರಾ ನಾಯ್ಕ,ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ,ತನ್ನ ಮೂಲ ಕುಟುಂಬಸ್ಥರು ನೆಚ್ಚಿಕೊಂಡಿರುವ ಕಾಂಗ್ರೆಸ್ ನತ್ತ ಒಲವು ತೋರಬಹುದೇ ಅಥವಾ ಬಿಜೆಪಿ ಜೊತೆ ಸಖ್ಯ ಮುಂದುವರಿಸುತ್ತಾರೆಯೇ? ಅಂತೆಯೇ ಈ ಹಿಂದೆ ಬಿಜೆಪಿ ಬೆಂಬಲಿಸಿದ್ದ ಮಂಗೇಶ ಆಗೇರ ಎನ್ನುವ ಇನ್ನೋರ್ವ ಪಕ್ಷೇತರ ಸದಸ್ಯನ ನಡೆ ಯಾವ ಕಡೆ,ಈ ಎಲ್ಲ ಸದಸ್ಯರು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವಷ್ಟು ಗಟ್ಟಿಗರೇ ? ಇವರ ಮೇಲೆ ಈ ಹಿಂದೆ ಚುನಾವಣೆಯಲ್ಲಿ ಗೆದ್ದು ಬರಲು ಕಾರಣೀಕರ್ತರಾದ ಕುಟುಂಬಸ್ಥರು, ಹಿತೈಷಿಗಳು ಮತ್ತಿತರ ಕಾಣದ ಕೈಗಳ ಪ್ರಭಾವ ಈಗಲೂ ಇರಬಹುದೇ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಸದಸ್ಯರಿಗಿಂತ, ಪಕ್ಷೇತರರಿಗೆ ಸಕತ್ ಡಿಮ್ಯಾಂಡ್ ತಂದಿಟ್ಟಿದ್ದು ಅವರೆಲ್ಲರ ನಡೆ ಯಾವ ಕಡೆ ಎನ್ನುವ ರಾಜಕೀಯ ಕುತೂಹಲ ಮೂಡುವಂತಾಗಿದೆ. ರಾಜಕೀಯವೂ ಒಂದು ಅನಿಶ್ಚಿತ ಗೇಮ್ ಎನ್ನಲಾಗುತ್ತಿದ್ದು,ಯಾವುದೇ ಕಾರಣ ಮತ್ತು ಕ್ಷಣ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾಗಿದೆ.

ನಾನಾ ರೀತಿಯ ಕಸರತ್ತು,ಜಾತಿ ಮತ್ತಿತರ ಒಲೈಕೆ ರಾಜಕಾರಣ,ಅತೃಪ್ತರನ್ನು ಸಮಾಧಾನಪಡಿಸುವುದು ಇಲ್ಲವೇ ಅಡ್ಡ ಮತದಾನ,ಉಪಾಧ್ಯಕ್ಷ ಹುದ್ದೆ, ಸ್ಥಾಯಿ ಸಮಿತಿ ಹುದ್ದೆ ಮತ್ತಿತರ ಕಾರಣಗಳು,ಕೊನೆಯ ಕ್ಷಣದಲ್ಲಿಯೂ ರಾಜಕೀಯ ಮೇಲಾಟಕ್ಕೆ ಕಾರಣವಾಗಬಹುದಾದ ಸಾಧ್ಯತೆಗಳಿವೆ.ಕಳೆದ ಬಾರಿಯಂತೆ ರೆಸಾರ್ಟ್ ರಾಜಕೀಯ ಮಟ್ಟಕ್ಕೆ ಈ ಬಾರಿ ಸದಸ್ಯರಿಗೆ ಭಾರಿ ಡಿಮ್ಯಾಂಡ್ ಮತ್ತು ದಿಗ್ಬಂಧನ ಕಂಡುಬರುವ ಸಾಧ್ಯತೆ ಕಡಿಮೆ ಇದ್ದರೂ, ಕೆಲ ಮಟ್ಟಿನ ನಿರೀಕ್ಷೆ ಮತ್ತು ಭರವಸೆಗಳು ಯಾವಾಗ ಬೇಕಾದರೂ ಏರುಪೇರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎನ್ನಲಾಗಿದೆ.ಒಂದೊಮ್ಮೆ ಅನಿವಾರ್ಯವಾಗಿ ಎರಡು ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದರೆ,ಪುರಸಭೆಯ ಸದಸ್ಯರ ಜೊತೆ ಸ್ಥಳೀಯ ಎಂ.ಎಲ್ ಸಿ ಮತ್ತು ಶಾಸಕರಂತ ಸಂಬಂಧಿತ ಹಿರಿಯ ಜನಪ್ರತಿನಿಧಿಗಳು,ತಮ್ಮ ಕ್ಷೇತ್ರ ವ್ಯಾಪ್ತಿಯ ಯಾವುದಾದರೂ ಒಂದು ಸ್ಥಳೀಯ ಸಂಸ್ಥೆಯಲ್ಲಿ ವಿಶೇಷ ಮತದಾನ ಮಾಡುವ ಹಕ್ಕನ್ನು ಬಳಸಿಕೊಳ್ಳುವ ಸಾಧ್ಯತೆಯೂ ಕಂಡು ಬರಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button