Follow Us On

WhatsApp Group
Big News
Trending

ಮಿರ್ಜಾನ್ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಶಾಲಾ ಸಂಸತ್ ಚುನಾವಣೆ: ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಆಯೋಜನೆ

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮಿರ್ಜಾನಿನಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾದ ಭಾಸ್ಕರ ಪಟಗಾರರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗುವುದರಿಂದ ಶಾಲಾ ಕಲಿಕೆಯ ಜೊತೆಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತಮ್ಮ ನಾಗರಿಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು ಎಂದರು.

ಬಿಜಿಎಸ್ ಸಂಸ್ಥೆಯ ಆಡಳಿತಾಧಿಕಾರಿ ಜಿ. ಮಂಜುನಾಥ ಅವರು ಮಕ್ಕಳಿಗೆ ಚುನಾವಣೆಯ ಮಹತ್ವವನ್ನು ತಿಳಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಎಂ. ಜಿ. ಹಿರೇಕುಡಿ ಮಾತನಾಡಿದರು. ವಿದ್ಯಾರ್ಥಿಗಳು ಶಾಲಾ ಸಂಸತ್ ಚುನಾವಣೆಯಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸಿ, ಮೊಬೈಲ್‌ನಿಂದ ಗೂಗಲ್ ಫಾರ್ಮ್ ಬಳಕೆ ಮಾಡುವ ಮೂಲಕ ಮತದಾನ ಮಾಡಿದರು. ಶಾಲಾ ಸಂಸತ್ತಿನಲ್ಲಿ ಒಟ್ಟು 8 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆಯಿತು. ಇದಕ್ಕೂ ಮೊದಲು ಚುನಾವಣೆ ವೇಳಾಪಟ್ಟಿ ಮತ್ತು ಚುನಾವಣಾ ನೀತಿನಿಯಮಾವಳಿಗಳನ್ನು ಪ್ರಕಟಿಸಿ ಕಟ್ಟುನಿಟ್ಟಿನ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿತ್ತು.

ಶಾಲಾ ಪ್ರತಿನಿಧಿ, ಕ್ರೀಡಾ ವಿಭಾಗ ಪ್ರತಿನಿಧಿ, ಶಿಸ್ತುಪಾಲನಾ ವಿಭಾಗಪ್ರತಿನಿಧಿ ಹಾಗೂ ಸಾಂಸ್ಕತಿಕ ವಿಭಾಗ ಪ್ರತಿನಿಧಿಗಳ ಒಟ್ಟು 8 ಸ್ಥಾನಗಳಿಗೆ 26 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಚುನಾವಣಾ ವೀಕ್ಷಕರಾದ ಜಿ. ಮಂಜುನಾಥರವರು, ಮುಖ್ಯ ಚುನಾವಣಾ ಆಯುಕ್ತರಾದ ಶ್ರೀಮತಿ ಅರ್ಚನಾ ಭಟ್, ಚುನಾವಣಾ ಆಯುಕ್ತರಾದ ಎಂ. ಜಿ. ಹಿರೇಕುಡಿ, ಉಪಚುನಾವಣಾ ಆಯುಕ್ತರಾದ ಶ್ರೀಮತಿ ಅನುರಾದ ಗುನಗರವರ ಉಪಸ್ಥಿತಿಯಲ್ಲಿ, ಚುನಾವಣಾ ಅಧೀಕ್ಷಕರಾದ ಬಾಲಕೃಷ್ಣ ನಾಯಕ ಮತ್ತು ಎಲ್ಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಮಿರ್ಜಾನ್ ಶಾಖಾಮಠದ ಪೂಜ್ಯರಾದ ನಿಶ್ಚಲಾನಂದನಾಥಜೀಯವರು ಚುನಾವಣೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಆಶೀರ್ವದಿಸಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button