Follow Us On

WhatsApp Group
Important
Trending

ಗೋಕರ್ಣದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಅಕ್ರಮ ಬಹುಮಹಡಿ ಕಟ್ಟಡದ ಪುರಾಣ ? ಗ್ರಾ.ಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯನ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳೇನು ?

ಕಣ್ಣಿದ್ದೂ ಕುರುಡಾಯಿತೇ ಆಡಳಿತ ವ್ಯವಸ್ಥೆ

ಗೋಕರ್ಣ ಪಂಚಾಯಿತಿಯ ಹಾಲಿ ಸದಸ್ಯ ಮಂಜುನಾಥ ವಿಠ್ಠಲ್ ಜನ್ನು ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರವಿ ನಾಯಕ ಎನ್ನುವವರು ತೆರಿಗೆ ವಂಚಿಸಿ, ಬಹು ಮಹಡಿ ಕಟ್ಟಡ ನಿರ್ಮಾಣ ಮಾಡಿದ ಆರೋಪ ಮಾಡಿದ್ದರು. ವಿಸ್ಮಯ ಟಿ.ವಿಗೆ ರವಿ ನಾಯಕ ಅವರು ಈ ಕುರಿತು ಮಾಹಿತಿ ನೀಡಿದ್ದು, ವಿಸ್ಮಯ ಟಿ.ವಿ ಈ ಕುರಿತು ವರದಿ ಬಿತ್ತರಿಸಿತ್ತು. ಆದ್ರೆ, ಮಂಜುನಾಥ ವಿಠ್ಠಲ್ ಜನ್ನು ಅವರು ಈ ಕುರಿತು ವಿಸ್ಮಯ ಟಿ.ವಿಗೆ ವಿವರಣೆ ನೀಡಿದ್ದು, ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿಲ್ಲ, ಕಾಯ್ದೆಯನ್ನು ಉಲ್ಲಂಘಿಸಿಲ್ಲ. ಅನುಮತಿಯಲ್ಲಿ ತೋರಿಸಿದ ನಕ್ಷೆಯ ವಿನ್ಯಾಸವನ್ನು ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಸ್ಮಯ ಟಿ.ವಿಯಲ್ಲಿ ಪ್ರಕಟವಾದ ವರದಿಯಿಂದ ಮಂಜುನಾಥ ವಿಠ್ಠಲ್ ಜನ್ನು ಅವರಿಗೆ ಮತ್ತು ಅವರ ಕುಟುಂಬಕ್ಕೆ ನೋವಾಗಿದ್ದಲ್ಲಿ, ವಿಸ್ಮಯ ಟಿ.ವಿ,, ವಿಷಾದಿಸಿ, ಅವರ ಕ್ಷಮೆ ಕೋರುತ್ತದೆ.

ಕಾರವಾರ/ಗೋಕರ್ಣ: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯನೋರ್ವ ತನ್ನ ರಾಜಕೀಯ ಅಧಿಕಾರ ಮತ್ತು ಪ್ರಭಾವದಿಂದ,ಸ್ಥಳೀಯ ಪಂಚಾಯತ ಇಲ್ಲವೇ ಸರ್ಕಾರಕ್ಕೆ ಬರಬೇಕಿದ್ದ ಆದಾಯಕ್ಕೆ ವಂಚಿಸಿ, ಕೆಲ ಸುಳ್ಳು ಕಾಗದಪತ್ರ ನೀಡಿ ಕಾನೂನು ಉಲ್ಲಂಘಿಸಿ,ಯಾರಿಗೂ – ಯಾವುದಕ್ಕೂ ಕ್ಯಾರೇ ಎನ್ನದೇ ತನ್ನದೇ ಹೆಸರಿನಲ್ಲಿ ಬಿಂದಾಸ್ ಆಗಿ ಬಹುಕೋಟಿ ವೆಚ್ಚದ ಗಗನಚುಂಬಿ ಕಟ್ಟಡ ನಿರ್ಮಿಸುತ್ತಿರುವ ಗಂಭೀರ ಆರೋಪ ಎದುರಿಸುವಂತಾಗಿದೆ.

ಸಾಮಾಜಿಕ ಕಾರ್ಯಕರ್ತ ರವಿ ನಾಯಕ ಎನ್ನುವವರು, ಜನ್ನುರವರ ವಿರುದ್ಧ, ಮಾಹಿತಿ ಹಕ್ಕಿನಡಿ ಪಡೆದ, ಮತ್ತು ಲೋಕಾಯುಕ್ತ ಪೊಲೀಸರಿಗೆ ನೀಡಿದ ದೂರಿನ ಪ್ರತಿ ,ಹಾಗೂ ಸ್ಥಳೀಯ ಗ್ರಾಪಂ ಗೆ ನೀಡಿದ ದೂರಿನ ಪ್ರತಿ ಮತ್ತಿತರ ಕೆಲ ಪೂರಕ ಹಾಗೂ ಅಧಿಕೃತ ದಾಖಲೆ ಸಮೇತ, ಗಂಭೀರ ಆರೋಪ ಮಾಡುತ್ತಾ ಗೋಕರ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 381/ಅ/2, 381/ಬ, ಮತ್ತು 381/ಅ/4 (ಈ ಮೂರು ಸರ್ವೆ ನಂಬರಗಳಿಗೆ ಈ ಸ್ವತ್ತು ಮಾಡಿಸಲಾಗಿದೆ) ಗಳಲ್ಲಿ ಮಂಜುನಾಥ ವಿಠಲ ಜನ್ನು ಬಹು ಮಹಡಿ ಕಟ್ಟಡ ಒಂದನ್ನು ನಿರ್ಮಿಸುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ಬಹುತೇಕ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವ ಬಳಸಿ ಸರ್ಕಾರಕ್ಕೂ ವಂಚಿಸಿದ್ದಾರೆ.

ಈ ಮೂರು ಸರ್ವೆ ನಂಬರ್ಗಳಲ್ಲಿ ಏಕ ವಿನ್ಯಾಸ ಕಟ್ಟಡ ನಿರ್ಮಿಸುವುದಾಗಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆಯಲಾಗಿದೆ. ಪರವಾನಿಗೆ ನೀಡುವಾಗ ಗೋಕರ್ಣ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಸ್ತೆಯ ಚರಂಡಿ ಅಂಚಿನಿಂದ ಆರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬಹು ಮಹಡಿ ಕಟ್ಟಡ ನಿರ್ಮಾಣ ಮಾಡದಂತೆ ಷರತ್ತಿಗೆ ಒಳಪಡಿಸಿ, ನಿರ್ಮಾಣಕ್ಕೆ ಮೂರು ವರ್ಷಗಳ ಅವಧಿಯನ್ನು ನಿಗದಿಪಡಿಸಿ 15 ಜನವರಿ 2021ರಂದು ಅನುಮತಿ ನೀಡಿದ್ದರು. ಅನುಮತಿ ಪಡೆಯುವಾಗ ತೋರಿಸಿದ ನಕ್ಷೆಯ ವಿನ್ಯಾಸವೇ ಬದಲು ಮಾಡಿದಂತಿರುವ ಜನ್ನುಅವರು, ತಮ್ಮದೇ ಹೆಸರಿನಲ್ಲಿ ಅಕ್ರಮ ಕಟ್ಟಡ ನಿರ್ಮಿಸುತ್ತಿದ್ದಾರೆ.

ಮೇಲಿನ ಸರ್ವೆ ನಂಬರ್ ನಲ್ಲಿ ಈ ಹಿಂದೆ 163/ಏ ನಂಬರ್ ನ ಹಳೆಯ ಶೆಡ್ ಒಂದಿದ್ದು ಅದನ್ನು ನೆಲಸಮ ಮಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ ಎನ್ನುವ ಆರೋಪವೂ ಇದ್ದು ಈ ಕುರಿತು ಅದೇ ಗ್ರಾ.ಪಂ ನ ಹಿರಿಯ ಸದಸ್ಯರೊಬ್ಬರು ಕಳೆದ ಕೆಲ ತಿಂಗಳ ಹಿಂದೆಯೇ ಗ್ರಾಪಂ ಗೆ ಲಿಖಿತ ದೂರು ಸಲ್ಲಿಸಿರುವ ಮಾಹಿತಿ ಇದೆ ಎಂದು ಹೇಳಿ,ಕಟ್ಟಡ ಕಟ್ಟಲು ನೀಡಿದ್ದ ಮೂರು ವರ್ಷಗಳ ಅವಧಿ ಮುಗಿದಿದ್ದರೂ ಈಗಲೂ ಕಟ್ಟಡ ಕಾಮಗಾರಿ ಮುಂದುವರಿದಿದೆ . ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಏನೆಂದರೆ, ಕಟ್ಟಡ ಕಾಮಗಾರಿ ಅಂದಾಜು ಶೇಕಡ 40 ರಷ್ಟು ಬಾಕಿ ಇರುವಾಗಲೇ ಕಟ್ಟಡ ನಿರ್ಮಾಣ ಮುಗಿದಿದೆ ಬೆಂಗಳೂರು ಮೂಲದ ರುಶೀಲ್ ಹೆಗಡೆ ಕೊಲಬರೇಟಿವ್ ಪ್ರಾಜೆಕ್ಟ್ ಖಾಸಗಿ ಕಂಪನಿ ಕಡೆಯಿಂದ ಮಾರ್ಚ್ 13,2023 ರಂದು ಕಟ್ಟಡ ನಿರ್ಮಾಣ ಮುಗಿದಿರುವುದಾಗಿ ದಾಖಲೆ ನೀಡಲಾಗಿದೆ.

ಇದು ವಾಸ್ತವಾಂಶಕ್ಕೆ ದೂರವಾಗಿದ್ದು ಸುಳ್ಳು ಮಾಹಿತಿ ಎಂದು ತಿಳಿದುಬರುತ್ತಿದೆ ಹೀಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ರುಶೀಲ್ ಹೆಗಡೆ ಮತ್ತು ಮಂಜುನಾಥ ಜನ್ನು ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಹೀಗಿದ್ದೂ ಮತ್ತೆ ಕಟ್ಟಡ ಕಾಮಗಾರಿಯನ್ನು ಮುಂದುವರಿಸಿ ಯಾರಿಗೂ ಕ್ಯಾರೇ ಎನ್ನದೇ ತಾವು ಮಾಡಿದ್ದೆ ಕಾಮಾನು ಎಂಬಂತೆ ವರ್ತಿಸಿದಂತಿದೆ.ಗೋಕರ್ಣ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯರೊಬ್ಬರು, ಸದರೀ ಕಟ್ಟಡ ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ಈ ಹಿಂದೆ ಇದ್ದ ಹಳೆ ಶೆಡ್ ಮಾದರಿ ಕಟ್ಟಡ ನೆಲಸಮಗೊಳಿಸಿ, ಅದೇ ನಂಬರ ನಲ್ಲಿ ಹೊಸ ದಾಖಲಾತಿ ಮಾಡಿಕೊಳ್ಳಲು ಜನ್ನು ಅವರು ಮುಂದಾಗಿರುವ ಸಾಧ್ಯತೆ ಕುರಿತು, ಮತ್ತು ಪಂಚಾಯಿತಿಯಿಂದ ಕಟ್ಟಡ ಪರವಾನಿಗೆ ಪಡೆದುಕೊಳ್ಳುವಾಗ, ಟ್ಯಾಕ್ಸ್ ತಪ್ಪಿಸಲು ಕಟ್ಟಡದ ಮೌಲ್ಯ ಕಡಿಮೆ ತೋರಿಸಿ,ಅದೇ ಆಸ್ತಿಯ ಮೇಲೆ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳುವಾಗ ದುಪ್ಪಟ್ಟು ಮೌಲ್ಯ ತೋರಿಸಿ, ಪಂಚಾಯತ ಆದಾಯಕ್ಕೂ ವಂಚಿಸಿದ್ದಾರೆ.

ಹಾಗಾಗಿ ಕಾನೂನು ಬಾಹೀರ ಈ ಕಟ್ಟಡ ಕಾಮಗಾರಿಗೆ ಬ್ರೇಕ್ ಹಾಕುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ದೂರು ಸಲ್ಲಿಸಿದ ನಂತರ, ಮತ್ತು ರವಿ ನಾಯಕ ಎನ್ನುವವರು ಸ್ಥಳೀಯ ಪಂಚಾಯತ ಮತ್ತು ಲೋಕಾಯುಕ್ತ ರಿಗೆ ಸವಿಸ್ತಾರ ದೂರು ನೀಡಿದ್ದರು ಎನ್ನಲಾಗಿದೆ.

ಇದೇ ವೇಳೆ ಪಂಚಾಯತ ವತಿಯಿಂದ ರುಶೀಲ್ ಹೆಗಡೆ ಕೊಲಬರೇಟಿವ್ ಪ್ರಾಜೆಕ್ಟ್ ಕಂಪನಿಯ ಮೇಲೆ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ದಾಖಲಿಸಿ ನಷ್ಟದ ಪರಿಹಾರವನ್ನು ವಸೂಲಿ ಮಾಡುವುದಾಗಿ ಎಚ್ಚರಿಕೆ ನೋಟೀಸ್ ನೀಡಲಾಗಿದೆ. ಮಂಜುನಾಥ್ ಜನ್ನು ಅವರಿಗೂ ನೋಟಿಸ್ ನೀಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಡಲೇ ಕಾಮಗಾರಿಯನ್ನು ನಿಲ್ಲಿಸದಿದ್ದರೆ ಕರ್ನಾಟಕ ಗ್ರಾಮ ಸ್ವರಾಜ್ ಗ್ರಾಮ ಪಂಚಾಯಿತಿ ಅಧಿನಿಯಮ 1993ರ ನಿಯಮ 64ರ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.

ಅನಿವಾರ್ಯವಾದರೆ ಕಟ್ಟಡ ತೆರವಿಗೆ ಮುಂದಾಗ ಬೇಕು . ಈ ವಿಷಯದಲ್ಲಿ ಮತ್ತೆ ವಿಳಂಬ ನೀತಿ ಮುಂದುವರೆದರೆ ಸಂಬಂಧಿತ ಪಂಚಾಯತ್ ಇಲ್ಲವೇ ಇಲಾಖೆಗಳ ವಿರುದ್ಧ ಉಗ್ರ ಪ್ರತಿಭಟನೆ ಹಾದಿ ತುಳಿಯುವುದಲ್ಲದೇ, ಈ ಅಕ್ರಮದಲ್ಲಿ ಶಾಮಿಲಾಗಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೂ,ಸಾರ್ವಜನಿಕ ಹಿತಾಸಕ್ತಿಯಿಂದ ಕಾನೂನು ರೀತಿ,ಹೋರಾಟ ನಡೆಸುವುದಾಗಿ, ರಾಜ್ಯಪಾಲರಿಗೂ ಮನವಿ ರೂಪದ ದೂರು ನೀಡುವುದಾಗಿ ನೀಡುತ್ತೇನೆ. – ರವಿ ನಾಯಕ, ಸಾಮಾಜಿಕ ಕಾರ್ಯಕರ್ತ

ಮಂಜುನಾಥ ಜನ್ನು ಅವರ ಈ ಕಟ್ಟಡದ ಬಗ್ಗೆ ಹಲವು ರೀತಿಯ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ತನಿಖೆ ಮತ್ತು ಸ್ಥಳ ಪರಿಶೀಲನೆ ನಡೆಸಿದಾಗ, ಮೇಲ್ನೋಟಕ್ಕೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಾಬೀತಾದ ಹಿನ್ನೆಲೆ ಅಗಸ್ಟ 20 ರ ಮಂಗಳವಾರ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯ ಚರ್ಚಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಇಲ್ಲವೇ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾಪಂ ಪ್ರಭಾರಿ ಪಿಡಿಒ ತಿಳಿಸಿದ್ದಾರೆ.

ಬ್ಯೂರೋ ರಿಪೋರ್ಟ ವಿಸ್ಮಯ ನ್ಯೂಸ್

Back to top button