Big News
Trending

ಮೀನುಗಾರಿಕಾ ಫೆಡರೇಷನ್ ಜಿಲ್ಲಾಧ್ಯಕ್ಷರಾಜು ತಾಂಡೇಲ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ

ಕಾರವಾರ : ಪ್ರಭಾವೀ ಮೀನುಗಾರ ಮುಖಂಡ, ಜನಪರ ಕಾಳಜಿಯ ನೇತಾರ, ಮೀನುಗಾರಿಕಾ ಫೆಡರೇಷನ್ ಜಿಲ್ಲಾಧ್ಯಕ್ಷ
ರಾಜು ತಾಂಡೇಲ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಹಲವರ ರಾಜಕೀಯ ಏಳಿಗೆಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತ, ತಮ್ಮ ಆಪ್ತ ವಲಯದಲ್ಲಿ ರಾಜಣ್ಣ ಎಂದೇ ಪ್ರಸಿದ್ಧಿ ಪಡೆದಿದ್ದ ಇವರು, ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಪೆಡೆರೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ಕರಾವಳಿಯ ಕಡಲ ಮಕ್ಕಳ ಜೀವನ ಸುಧಾರಣೆ ಮತ್ತು ಸಂಕಷ್ಟಕ್ಕೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು.

ಚಿತ್ತಾಕುಲ ಗ್ರಾ ಪಂ ನಿಂದ ಆರಂಭಿಸಿ ಕರಾವಳಿಯಲ್ಲಿ ತನ್ನದೇ ಆದ ಪ್ರಭಾವ ಬೆಳೆಸಿಕೊಳ್ಳುತ್ತ, ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಧ್ವನಿಯಾಗಿ, ನೊಂದವರ ಪಾಲಿನ ಆಶಾಕಿರಣವಾಗಿ, ನೂರಾರು ಬಡ ಕುಟುಂಬಗಳಿಗೆ ನೆರವು ನೀಡುತ್ತಿದ್ದ ಮಹಾದಾನಿಯಾಗಿ, ಸದ್ಯ ಶಾಸಕ ಸತೀಶ್ ಸೈಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ತನ್ನ ಜನಪರ ಕಾಳಜಿ, ನೇರ – ನಡೆ ನುಡಿ ಹಾಗೂ ನಂಬಿಕೆ ಹಾಗೂ ವಿಶ್ವಾಸಾರ್ಹ ವ್ಯಕ್ತಿತ್ವದ ಮೂಲಕ ನಮ್ಮೆಲ್ಲರಿಗೂ ಬೇಕಾಗಿದ್ದ ರಾಜು ತಾಂಡೇಲ ಅಕಾಲಿಕ ನಿಧನದಿಂದ ಸಮಾಜಕ್ಕೆ ಹಾಗೂ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿರುವ ಶಾಸಕ ಸತೀಶ ಸೈಲ್, ಮೃತರ ಆತ್ಮಕ್ಕೆ ಶಾಂತಿ ಕೋರಿ, ಮೃತರ ಕುಟುಂಬಕ್ಕೆ ಶ್ರೀ ದೇವರು ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಎಂ.ಎಲ್.ಸಿ ಗಣಪತಿ ಉಳ್ವೇಕರ, ಮಾಜಿ ಸಚಿವ ಆನಂದ ಅಸ್ನೋಟಿಕರ, ಜೆಡಿಸ್ ಮಹಿಳಾ ನಾಯಕಿ ಚೈತ್ರಾ ಕೊಠಾರಕರ, ಪ್ರಮುಖರಾದ ಶಂಭು ಶೆಟ್ಟಿ, ಮಾಧವ ನಾಯ್ಕ, ಗಣಪತಿ ಮಾಂಗ್ರೆ ಸೇರಿದಂತೆ ಮೀನುಗಾರರ ಹಿರಿ-ಕಿರಿಯ ಮುಖಂಡರು, ಸಮಾಜ ಬಾಂಧವರು, ಮೀನುಗಾರಿಕಾ ಪೆಡರೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು,ಇತರೆ ಸಮಾಜ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ರಾಜು ತಾಂಡೇಲ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಜು ತಾಂಡೇಲ, ಅಕಾಲಿಕ ನಿಧನದ ಸುದ್ದಿ ಹಲವರ ಪಾಲಿಗೆ ಸಿಡಿಲಿನಂತೆ ಬಂದಪ್ಪಳಿಸಿದ್ದು, ಜಿಲ್ಲಾಸ್ಪತ್ರೆ ಶವಾಗಾರದ ಬಳಿ, ಹಾಗೂ ಅಲ್ಲಿಂದ ಮೃತರ ಪಾರ್ಥಿವ ಶರೀರದ ಮೆರವಣಿಗೆ ನಡೆಸುವಾಗ ಜನಸಾಗರವೇ ಕಂಡು ಬಂತು. ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ, ಹಾಗೂ ಕಾರವಾರ ಕಡಲ ತೀರದಲ್ಲಿ ಮೀನುಗಾರಿಕೆ ತಾತ್ಕಾಲಿಕ ವಾಗಿ ಬಂದ ಮಾಡಿ, ಅಗಲಿದ ಮಹಾನಾಯಕನಿಗೆ ಮೀನುಗಾರ ಸಮಾಜದ ವತಿಯಿಂದ ಗೌರವ ನಮನ ಸೂಚಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ,ಕಾರವಾರಕ್ಕೆ ಬಂದು, ಮೃತ ರಾಜು ತಾಂಡೇಲ ಅವರ ಅಂತಿಮ ದರ್ಶನ ಪಡೆದು,ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.ಮೃತರ ಅಂತ್ಯಕ್ರಿಯೆ ವೇಳೆಯೂ ಸಾವಿರಾರು ಜನ ಸೇರಿದ್ದು,ರಾಜು ತಾಂಡೆಲ್ ಅವರ ಜನಪ್ರಿಯತೆ ಹಾಗೂ ಸಮಾಜದ ಬಗ್ಗೆ ಅವರಿಗೆ ಇದ್ದ ಕಳಕಳಿಗೆ ಸಾಕ್ಷಿಯಾದಂತಿತ್ತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button