Follow Us On

WhatsApp Group
Focus News
Trending

ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ

ಅಂಕೋಲಾ: ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ, ವಕೀಲರ ಸಂಘ, ಜೈಹಿಂದ್ ಹೈಸ್ಕೂಲ್ ಅಂಕೋಲಾ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಪಟ್ಟಣದ ಜೈಹಿಂದ್ ಹೈಸ್ಕೂಲ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಸಮಾಜದ ದೊಡ್ಡ ಪಿಡುಗಾಗಿರುವ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಜಾಗೃತಿ ಮೂಡಿಸಲು, ಅಂಕೋಲಾ ಪಟ್ಟಣದ ಜೈಹಿಂದ್ ಪ್ರೌಢಶಾಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಉಚಿತ ಕಾನೂನು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅತಿಥಿ ಗಣ್ಯರು ವೇದಿಕೆಗೆ ಬರುತ್ತಿದ್ದಂತೆ ಶಾಲಾ ವಿದ್ಯಾರ್ಥಿಗಳು ಚಪ್ಪಾಳೆಯ ಮೂಲಕ ಪ್ರೀತಿಯ ಸ್ವಾಗತ ಕೋರಿದರು. ಶಾಲಾ ಶಿಕ್ಷಕಿ ರೋಹಿಣಿ ನಾಯಕ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸುವ ವೇಳೆ,ಶಾಲಾ ವಿದ್ಯಾರ್ಥಿಗಳು ಅತಿಥಿಗಣ್ಯರಿಗೆ ಪುಷ್ಪ ನೀಡಿ ಗೌರವಿಸಿದರು. ಸಿವಿಲ್ ಜಡ್ಜ್ ಮತ್ತು ಜೆ. ಎಂ. ಎಫ್ ಸಿ ನ್ಯಾಯಾಧೀಶರಾದ ಮಾನ್ಯ ಅರ್ಪಿತಾ ಬಿ ಬೆಲ್ಲದ ಅವರು ಅತಿಥಿ ಗಣ್ಯರೊಂದಿಗೆ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ನಮ್ಮ ದೇಶ ಎಷ್ಟೇ ಮುಂದೆ ಬಂದಿದೆ, ಸ್ವಾತಂತ್ರ‍್ಯ ಪಡೆದಿದೆ ಎಂದು ಹೇಳಿಕೊಂಡರೂ ಸಹ,ಮಾನವ ಕಳ್ಳ ಸಾಗಾಣಿಕೆ ಎನ್ನುವುದು ಸಮಾಜದ ಗಂಭೀರ ಸಮಸ್ಯೆ ಆಗಿದ್ದು, ಸಮಾಜದ ದೌರ್ಭಾಗ್ಯವಾಗಿದೆ.ಮಾನವ ಕಳ್ಳ ಸಾಗಾಣಿಕೆ ಇದು ಶಿಕ್ಷಾರ್ಹ ಅಪರಾಧವೂ ಆಗಿದೆ ಎಂದರು. ಸಹಾಯಕ ಸರ್ಕಾರಿ ಅಭಿಯೋಜಕಿ ಶಿಲ್ಪಾ ನಾಯ್ಕ, ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ದೀಕ್ಷಿತ ನಾಯಕ, ಅಂಕೋಲಾ ಪೋಲೀಸ್ ಠಾಣೆಯ ಎ ಎಸ್ ಐ ಲಲಿತಾ ರಾಠೋಡ ಮಾನವ ಕಳ್ಳ ಸಾಗಾಣಿಕೆ ತಡೆ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ಜೈ ಹಿಂದ್ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಪ್ರಭಾಕರ ಬಂಟ ಅಧ್ಯಕ್ಷತೆ ವಹಿಸಿ ಮಾತನಾಡಿ,ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಎಲ್ಲರೂ ಜಾಗೃತರಾಗಿ,ಗಂಭೀರ ಪಿಡುಗನ್ನು ಹೊಡೆದೋಡಿಸಲು ಪ್ರತಿಜ್ಞೆ ತೊಡೋಣ ಎಂದರು.

ಶಿಕ್ಷಕ ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರುಪಿಸಿದರು.ಶಾಲೆಯ ಕೆಲ ಬೋಧಕ ಭೋದಕೇತರ ಸಿಬ್ಬಂದಿಗಳು,ಹತ್ತನೇ ವರ್ಗದ ವಿದ್ಯಾರ್ಥಿಗಳಿದ್ದರು. ವಕೀಲರ ಸಂಘದ ಕಾರ್ಯದರ್ಶಿ ವಿನಾಯಕ ನಾಯ್ಕ,ಹಿರಿಯ ವಕೀಲರಾದ ಉಮೇಶ ನಾಯ್ಕ, ಗುರು ನಾಯ್ಕ, ಕಿರಿಯ ವಕೀಲೆ ತೇಜ ಬಂಟ,ನ್ಯಾಯಾಲಯದ ಸಿಬ್ಬಂದಿಗಳಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button