Follow Us On

WhatsApp Group
Focus News
Trending

ಕವಿವಿ ಸಿಂಡಿಕೇಟ್ ಗೆ ನೇಮಕ; ಹಿರಿಯರ ಆಶೀರ್ವಾದ ಪಡೆದ ಡಾ. ಶಿವಾನಂದ ನಾಯಕ

ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿರುವ ಹಿನ್ನಲೆ ನಿವೃತ್ತ ಪ್ರಾಧ್ಯಾಪಕ ಡಾ. ಶಿವಾನಂದ ನಾಯಕ ತಾಲೂಕಿನ ಹಿರಿಯ ಸಾಹಿತಿ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಶಾಂತರಾಮ ನಾಯಕ ಮತ್ತು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ನಾಯಕ ಅವರನ್ನು ಶನಿವಾರ ಭೇಟಿ ಮಾಡಿ ಆಶೀರ್ವಾದ ಕೋರಿದರು.

ಶಾಂತಾರಾಮ ನಾಯಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿ ಮತ್ತು ಉನ್ನತ ಶಿಕ್ಷಣದ ಕುರಿತಂತೆ ಸಲಹೆ ನೀಡಿ ಮಾರ್ಗದರ್ಶನ ಮಾಡುವಂತೆ ಶಿವಾನಂದ ನಾಯಕ ಅವರು ಕೋರಿದರು. ಅಂಕೋಲಾ ತಾಲೂಕಿನ ಸ್ವಾತಂತ್ರ ಹೋರಾಟದ ಚರಿತ್ರೆಯ ಕುರಿತು ಹಮ್ಮಿಕೊಳ್ಳಬಹುದಾದ ವಿದಾಯಕ ಕಾರ್ಯಗಳಿದ್ದರೆ ತಿಳಿಸಿ ಎಂದು ಮನವಿ ಮಾಡಿದರು. ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆ ಮತ್ತು ತಾಲೂಕಿನ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಸಾಹಿತಿ ಶಾಂತಾರಾಮ ನಾಯಕ ಆಶೀರ್ವದಿಸಿದರು.

ನಂತರ ಕರ್ಣಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ರಮಾನಂದ ನಾಯಕರ ಮನೆಗೆ ಭೇಟಿ ನೀಡಿ, ಅವರ ಅವಧಿಯಲ್ಲಿ ಜಾರಿಯಾದ ಹಲವು ಪ್ರಗತಿಪರ ನಿಲುವುಗಳ ಬಗ್ಗೆ ಮಾಹಿತಿ ಪಡೆದು, ನಿರ್ವಹಿಸಬೇಕಾದ ಕರ್ತವ್ಯ ಮತ್ತು ಸಮನ್ವಯತೆಯ ಕುರಿತು ಅಗತ್ಯ ಮಾರ್ಗದರ್ಶನ ನೀಡುವಂತೆ ಕೇಳಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಮತ್ತು ವಿವಿಧ ಸಮಿತಿಗಳ ಬಗ್ಗೆ ರಮಾನಂದ ನಾಯಕರು ಮಾಹಿತಿ ನೀಡಿದರು.

ನೂತನವಾಗಿ ನೇಮಕಗೊಂಡ ಹಿನ್ನಲೆ ಇಬ್ಬರು ಹಿರಿಯರನ್ನು ಡಾ. ಶಿವಾನಂದ ನಾಯಕ ಸನ್ಮಾನಿಸಿ ಗೌರವಿಸಿದರು. ಪ್ರಾಥಮಿಕ ಶಾಲಾ ಶಿಕಕ್ಷರ ಸಂಘದ ಅಧ್ಯಕ್ಷ ಜಗದೀಶ ಜಿ ನಾಯಕ ಹೊಸ್ಕೇರಿ, ಹಿರಿಯ ಉಪನ್ಯಾಸಕ ಮಹೇಶ ನಾಯಕ ಮತ್ತು ಶಾಂತರಾಮ ನಾಯಕ ಹಾಗೂ ರಮಾನಂದ ನಾಯಕರ ಕುಟುಂಬಸ್ಥರು ಇದ್ದರು.ನಿವೃತ್ತ ಪ್ರಾಚಾರ್ಯರಾಗಿ,ಯಕ್ಷಗಾನ ಕಲಾವಿದರಾಗಿ,ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡ ಶಿವಾನಂದ ನಾಯಕ ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿರುವುದಕ್ಕೆ,ಹಲವರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button