Follow Us On

WhatsApp Group
Big News
Trending

ಕೆರೆಗೆ ಮೀನು ಬಿಟ್ಟು, ಹೃದಯವಂತ ಮೀನುಗಾರ ಮುಖಂಡನಿಗೆ ಭಾವಪೂರ್ಣ ಶ್ರದ್ಧಾಂಜಲಿ: ಅರ್ಥಪೂರ್ಣ ಕಾರ್ಯಕ್ರಮ

ಅಂಕೋಲಾ: ಅಗಲಿದ ಮೀನುಗಾರ ಮುಖಂಡ,ಇತರ ಎಲ್ಲ ಸಮಾಜದೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದ ರಾಜು ತಾಂಡೇಲ,ಅಕಾಲಿಕವಾಗಿ ನಿಧನರಾಗಿ ಕೆಲ ದಿನಗಳೇ ಕಳೆದು ಹೋಗಿದ್ದರೂ,ಹಲವರ ಮನಸ್ಸಿನಲ್ಲಿ ಅವರ ಧೀಮಂತ ವ್ಯಕ್ತಿತ್ವ ಮರೆಯಾಗದೇ, ಈಗಲೂ ಅವರನ್ನು ಹಲವರು ನೆನೆಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.ಸಮಾಜ ಬಾಂಧವರು,ವಿವಿಧ ಸಂಘಟನೆಗಳು,ಸಂಘ ಸಂಸ್ಥೆಗಳು,ಆಪ್ತರು,ಒಡನಾಡಿಗಳು ಸೇರಿದಂತೆ ಸಮಾಜದ ವಿವಿಧ ವರ್ಗದ ಜನ ಮತ್ತಿತರರು ನಾನಾ ರೀತಿಯಲ್ಲಿ ರಾಜು ತಾಂಡೇಲ್ ಅವರ ವ್ಯಕ್ತಿತ್ವವನ್ನು ಸ್ಮರಿಸಿ,ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಆದರೆ ಅಂಕೋಲಾ ತಾಲೂಕಿನ ಹನುಮಟ್ಟದಲ್ಲಿ ನಡೆದ ಸರಳ ಮತ್ತು ಅರ್ಥಪೂರ್ಣ ಕಾರ್ಯಕ್ರಮದಲ್ಲಿ, ಕೆರೆಗೆ ಮೀನು ಮರಿಗಳನ್ನು ಬಿಡುವ ಮೂಲಕ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ,ಮೀನುಗಾರ ಮುಖಂಡ ರಾಜು ತಾಂಡೇಲ ಅವರಿಗೆ ಗೌರವ ನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಿ,ಅವರ ದಿವ್ಯ ಆತ್ಮಕ್ಕೆ ಶಾಂತಿ ಕೋರಲಾಯಿತು.ಮಗುವಿನಂತೆ ಮುಗ್ದ ಸ್ವಭಾವದ ಹೃದಯವಂತ ರಾಜು ತಾಂಡೇಲ್. ಅವರ ಅಕಾಲಿಕ ನಿಧನ ಸಮಾಜಕ್ಕೆ ನೋವು ತಂದಿದೆ ಎಂದು ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಉಮೇಶ್ ನಾಯ್ಕ ಹೇಳಿದರು.

ಅವರು ತಾಲ್ಲೂಕಿನ ವಂದಿಗೆ – ಹನುಮಟ್ಟದಲ್ಲಿ ಮೀನುಗಾರ ಮುಖಂಡರು ಮತ್ತು ವಿವಿಧ ಸಮುದಾಯದವರು ಆಯೋಜಿಸಿದ್ದ,ರಾಜು ತಾಂಡೇಲರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಸರಳ ಕಾರ್ಯಕ್ರಮದಲ್ಲಿ, ಕೆರೆಯಲ್ಲಿ ಮೀನು ಮರಿಗಳನ್ನು ಪುಟಾಣಿ ಪ್ರತಿಕ್ ನಾಯ್ಕ್ ಮತ್ತಿತರರೊಂದಿಗೆ ನೀರಿಗೆ ಬಿಡುವ ಮೂಲಕ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಣ್ಣ ಎಂದರೆ ಕರಾವಳಿ ಜಿಲ್ಲೆಯಲ್ಲಿ ಕೊಡುಗೈ ದಾನಿ ಎಂದೇ ಹೆಸರಾಗಿದ್ದರು. . ಮಾನವೀಯ ಸಮಾಜಮುಖಿ ಚಿಂತನೆಗಳು ಮತ್ತು ಕಾರ್ಯಗಳ ಮೂಲಕ ಅವರು ಸದಾ ನೆನಪಿನಲ್ಲಿ ಇರುತ್ತಾರೆ. ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು, ಉತ್ತಮ ಕಾರ್ಯಗಳಿಗೆ ಸಮಾಜ ಎಂದಿಗೂ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆ ಎಂದರು.

ಮೀನುಗಾರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರಿಹರ ಹರಿಕಂತ್ರ ಮುಂದಾಳತ್ವದಲ್ಲಿ ವಿದ್ಯಾರ್ಥಿ ಪ್ರತೀಕ್ ಗಣೇಶ್ ನಾಯ್ಕ ಮತ್ತು ವಿವಿಧ ಸಮುದಾಯದ ಪ್ರಮುಖರು ಮತ್ತು ರಾಜು ತಾಂಡೇಲ್ ಅಭಿಮಾನಿಗಳು ಕೆರೆಗೆ ಮೀನುಮರಿಗಳನ್ನು ಬಿಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಉಪನ್ಯಾಸಕ ಮತ್ತು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಮಾರುತಿ ಹರಿಕಂತ್ರ, ಕಾರ್ಯಕ್ರಮ ಸಂಘಟನೆಯ ನೇತೃತ್ವ ವಹಿಸಿ ಮಾತನಾಡಿ,ರಾಜು ತಾಂಡೇಲ್ ಸಮಾಜದ ಬಗ್ಗೆ ದೂರ ದೃಷ್ಟಿ ಉಳ್ಳವರಾಗಿದ್ದರು. ಮೀನುಗಾರಿಕೆಯ ಮೂಲಕವೇ ಉನ್ನತ ಸ್ಥಾನಕ್ಕೇರಿ ಸಮಾಜದಲ್ಲಿ ಗುರುತಿಸಿಕೊಂಡಿದ್ದವರು. ಹಾಗಾಗಿ ಕೆರೆಗೆ ಮೀನು ಬಿಡುವ ಮೂಲಕ ಅವರ ನಿಧನದ ನಂತರವೂ ಮೀನುಗಳೊಂದಿಗೆ ಅವರ ನೆನಪು ಶಾಶ್ವತವಾಗಿರಲಿ ಎನ್ನುವ ಉದ್ದೇಶಕ್ಕೆ ಈ ರೀತಿ ವಿನೂತನವಾಗಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದರು.

ಪುರಸಭೆಯ ಸ್ಥಳೀಯ ವಾರ್ಡ್ ಸದಸ್ಯೆ ರೇಖಾ ಗಾಂವಕರ, ನಿವೃತ್ತ ಉಪ ತಹಶೀಲ್ದಾರ ಸುರೇಶ್ ಹರಿಕಂತ್ರ, ನಿವ್ರತ್ತ ಉಪನ್ಯಾಸಕ ರಾಮಾ ಶಿರೂರು, ಮೀನುಗಾರ ಪ್ರಮುಖ ಹೂವಾ ಖಂಡೇಕರ, ಗುತ್ತಿಗೆದಾರರಾದ ನಾಗೇಶ ನಾಯ್ಕ, ಉಪೇಂದ್ರ ನಾಯ್ಕ ಸಹೋದರರು, ಗಣೇಶ ನಾಯ್ಕ, ಜೈಹಿಂದ್ ಆಟೋ ಯೂನಿಯನ್ ಅಧ್ಯಕ್ಷ ಸಂಜೀವ ಬಲೆಗಾರ, ಪ್ರಮುಖರಾದ ಸಂಜಯ್ ಬೊಬ್ರುಕರ್, ಸಂದೀಪ ಹರಿಕಂತ್ರ, ಶರತ್ ನಾಯ್ಕ, ಪವನ ನಾಯ್ಕ, ನಾಗೇಂದ್ರ ನಾಯ್ಕ, ಪ್ರಸನ್ನ ನಾಯ್ಕ, ಸುಹಾಸ್ ನಾಯ್ಕ ಮತ್ತಿತರರು ಇದ್ದರು. ಶಿಕ್ಷಕ ಜಿ ಆರ್ ತಾಂಡೇಲ್ ವಂದಿಸಿದರು.ರಾಜು ತಾಂಡೇಲ ನಿಧನದಿಂದ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಸೂತಕದ ಛಾಯೆ ಆವರಿಸಿತ್ತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button