ಅಂಕೋಲಾ: ಅವ್ಯವಸ್ಥೆಯ ತಾಣ ಈ ಹೈಟೆಕ್ ಬಸ್ ನಿಲ್ದಾಣ ಎನ್ನುವ ಕುರಿತು,ವಿಸ್ಮಯ ವಾಹಿನಿ, ಸಾರ್ವಜನಿಕ ಹಿತಾಸಕ್ತಿಯಿಂದ ವಿಸ್ತೃತ ವರದಿ ಪ್ರಕಟಿಸಿ, ಸಮಸ್ಯೆ ನಿವಾರಣೆಗೆ ಅಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಿತ್ತು. ಇದಾದ ಬೆನ್ನಿಗೆ ಕುಮಟಾ ಉಪ ವಿಭಾಗಾಧಿಕಾರಿಗಳು ಬಸ್ ನಿಲ್ದಾಣಕ್ಕೆ ಹಠಾತ್ ಭೇಟಿ ನೀಡಿ,ಇಲ್ಲಿನ ಅಶುಚಿತ್ವ ಮತ್ತು ಪ್ರಯಾಣಿಕರಿಗಾಗುತ್ತಿರುವ ತೊಂದರೆ ಗಮನಿಸಿ, ಸಂಬಂಧಿತ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ , ಕೂಡಲೇ ಕಸ ತ್ಯಾಜ್ಯ ವಿಲೇವಾರಿ ಮತ್ತಿತರ ಕೆಲ ತುರ್ತು ಕ್ರಮ ಕೈಗೊಳ್ಳುವಂತೆ ಖಡಕ್ ವಾರ್ನಿಂಗ್ ನೀಡಿದರು.
ಅವ್ಯವಸ್ಥೆಯ ತಾಣ ಈ ಹೈಟೆಕ್ ಬಸ್ ನಿಲ್ದಾಣ ಎನ್ನುವ ವಿಷಯ ಪ್ರಸ್ತಾಪಿಸಿ, ವಿಸ್ಮಯ ವಾಹಿನಿ ವಿಸ್ತೃತ ವರದಿ ಒಂದನ್ನು ಪ್ರಕಟಿಸಿತ್ತು. ಚೆಂಬರ್ ನಿಂದ ಉಕ್ಕಿ ಹರಿಯುತ್ತಿರುವ ಮಲೀನ ನೀರಿನಿಂದ ದುರ್ನಾತ, ತ್ಯಾಜ್ಯಗಳ ವಿಲೇವಾರಿಗಿದೆ ಸಮಸ್ಯೆ ಎಂಬಿತ್ಯಾದಿ ವಿಷಯಗಳನ್ನು ಸಚಿತ್ರ ಹಾಗೂ ವಿಡಿಯೋ ಸಹಿತ ಇಲ್ಲಿನ ಅವ್ಯವಸ್ಥೆ ಕುರಿತು ಸಾರ್ವಜನಿಕ ಕಳಕಳಿಯಿಂದ ಧ್ವನಿ ಎತ್ತಿದ್ದ ವಕೀಲ ಉಮೇಶ ನಾಯ್ಕ ಹೇಳಿಕೆಯೊಂದಿಗೆ ಇಲ್ಲಿನ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವರದಿ ಮಾಡಿ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಿತ್ತು.
ವರದಿ ಪ್ರಕಟವಾದ ಬೆನ್ನಿಗೇ, ಹಠಾತ್ ಭೇಟಿ ನೀಡಿದ ಕುಮಟಾ ಉಪ ವಿಭಾಗಾಧಿಕಾರಿ, ಕಲ್ಯಾಣಿ ಕಾಂಬ್ಳೆ ಬಸ್ ನಿಲ್ದಾಣದ ಆವರಣ,ಕಸದ ತೊಟ್ಟಿಗಳನ್ನಿಡು ಸ್ಥಳ ಪರಿಶೀಲನೆ ನಡೆಸಿ,ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸ್ವಚ್ಛತೆಯ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಿ,ಬಸ್ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸುಡುವುದು ಗಮನಕ್ಕೆ ಬಂದಲ್ಲಿ,ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಂಕೋಲಾ ತಹಶೀಲ್ದಾರ , ಪುರಸಭೆ ಮುಖ್ಯಾಧಿಕಾರಿಗಳು,ಸಾರಿಗೆ ಸಂಸ್ಥೆಯ ಹಿರಿ ಕಿರಿಯ ಅಧಿಕಾರಿಗಳು,ಸಂಬಂಧಿತ ಕೆಲ ಇಲಾಖೆಗಳ ಸಿಬ್ಬಂದಿಗಳಿದ್ದರು. ಅಂಕೋಲಾ ಸಾರಿಗೆ ಘಟಕದ ವ್ಯವಸ್ಥಾಪಕರಾದ ಚೈತನ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿ,ಸಾರಿಗೆ ಸಂಸ್ಥೆಯ ಇಂಜಿನಿಯರ್ ಗಳು ಮೂರ್ನಾಲ್ಕು ದಿನಗಳಲ್ಲಿ ಇಲ್ಲಿ ಭೇಟಿ ನೀಡಿ,ಶೌಚಗುಂಡಿ ಮತ್ತು ಕ್ಯಾಂಟೀನ್ ನಿಂದ ಹೊರಸೂಸುವ ತ್ಯಾಜ್ಯ ನೀರು ಸಮಸ್ಯೆ ನಿವಾರಣೆ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿ ಕಸ ತ್ಯಾಜಗಳ ವಿಲೇವಾರಿ ಹಾಗೂ ಸ್ವಚ್ಛತೆ ನಿರ್ವಹಣೆಗೆ ತಮ್ಮ ಕಿರಿಯ ಅಧಿಕಾರಿಗಳಿಗೆ ಕೆಲ ಮಾರ್ಗದರ್ಶನ ನೀಡಿದರು. ಇಲ್ಲಿನ ಅಶುಚಿತ್ವದಿಂದ ಮೂಗು ಕಟ್ಟುವ ವಾತಾವರಣ ನಿರ್ಮಾಣವಾಗಿತ್ತು.
ಈ ಕುರಿತು ಸಾರ್ವಜನಿಕರ ಪರಿವಾಗಿ ಧ್ವನಿ ಎತ್ತಿದ್ದ ವಕೀಲ ಉಮೇಶ್ ನಾಯ್ಕ,ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದ ವಿಸ್ಮಯ ಟಿವಿ, ಹಾಗೂ ಜನಸ್ಪಂದನೆ ರೀತಿಯಲ್ಲಿ ಸ್ಥಳ ಪರಿಶೀಲಿಸಿದ ಕುಮಟಾ ಎಸಿ ಮತ್ತಿತರ ಅಧಿಕಾರಿಗಳು ಸೇರಿದಂತೆ ಸಕಾರಾತ್ಮಕವಾಗಿ ಸ್ಪಂದಿಸಿದ ಸರ್ವರಿಗೂ ತಾಲೂಕಿನ ಪ್ರಜ್ಞಾವಂತ ಜನತೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇನ್ನು ಮುಂದಾದರು ಸಾರಿಗೆ ಸಂಸ್ಥೆ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಅಂತೆಯೇ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಸಾರ್ವಜನಿಕರು, ಪ್ರಯಾಣಿಕರು, ಮತ್ತಿತರರೆಲ್ಲರೂ ಸ್ವಚ್ಛತೆಯ ಕುರಿತು ಸ್ವಯಂ ಪ್ರೇರಿತರಾಗಿ ಸಂಬಂಧಿತ ಇಲಾಖೆಗಳ ಜೊತೆ ಕೈಜೋಡಿಸಬೇಕಿದೆ.