Follow Us On

WhatsApp Group
Focus News
Trending

ಕೊನೆಗೂ ಸ್ವಚ್ಛತೆಯತ್ತ ಮುಖ ಮಾಡುತ್ತಿರುವ ಬಸ್ ನಿಲ್ದಾಣ:  ಎಸಿ ಮತ್ತು ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ ಫಲಿತಾಂಶ

ಎಲ್ಲರಿಗಿಂತ ಮೊದಲು ಮತ್ತು ಆ ನಂತರವೂ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯುತ್ತಿದ್ದ ವಿಸ್ಮಯ ವಾಹಿನಿ

ಅಂಕೋಲಾ:  ಬಸ್ ನಿಲ್ದಾಣದ ಆವರಣದಲ್ಲಿ ಕಳೆದ ಕೆಲ ದಿನಗಳಿಂದ ರಾಶಿ ರಾಶಿಯಾಗಿ ಬಿದ್ದಿದ್ದ ಕಸತ್ಯಾಜ್ಯ ವಿಲೇವಾರಿಗೆ,ಕ್ರಮ ಕೈಗೊಳ್ಳುವ ಮೂಲಕ ಅಂಕೋಲಾ ಪುರಸಭೆಯ ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಇಲ್ಲಿನ  ನಿಲ್ದಾಣದ ಅಶುಚಿತ್ವ ಮತ್ತು ಇತರೆ ಅವ್ಯವಸ್ಥೆಗಳ ಕುರಿತು ಆಗಾಗ ವರದಿಯಾ ಗುತ್ತಲೇ ಇದ್ದರೂ,ಸ್ಥಳೀಯ ಘಟಕ ವ್ಯವಸ್ಥಾಪಕರಾಗಲಿ,ಇತರ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾರಿಕೆಯ ಉತ್ತರ ನೀಡುತ್ತಲೇ ತಮ್ಮ ಜವಾಬ್ದಾರಿಯಿಂದ ನುಣಚ್ಚಿಕೊಳ್ಳುವ ಯತ್ನ ಮಾಡುತ್ತಿರುವಂತ ಆರೋಪ ವಕೀಲ ಉಮೇಶ್ ನಾಯ್ಕ ಸೇರಿದಂತೆ, ಇತರೆ ಕೆಲ ಸಾರ್ವಜನಿಕರಿಂದಲೂ ಕೇಳಿ ಬಂದಿತ್ತು.

ನಿಲ್ದಾಣದ ಸಾರ್ವಜನಿಕ ಶೌಚಾಲಯದ ಶೌಚ ಗುಂಡಿ ತುಂಬಿ,ಮಲೀನ ನೀರುಹೊರ ಚೆಲ್ಲಿ ದುರ್ನಾತ ಬೀರುತ್ತಿರುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈ ನಡುವೆ ಕುಮಟಾ ಉಪ ವಿಭಾಗಾಧಿಕಾರಿಗಳು ಮತ್ತು ಸ್ವತಃ  ಕಾರವಾರ ಲೋಕಾಯುಕ್ತ ಎಸ್ಪಿ ಮತ್ತು ಸಿಬ್ಬಂದಿಗಳು, ಸ್ಥಳ ಪರಿಶೀಲಿಸಿ, ಸಂಬಂಧಿತ ಸಾರಿಗೆ ಅಧಿಕಾರಿಗಳಿಗೆ,ಸ್ವಚ್ಛತೆ ನಿರ್ವಹಣೆಯ ಜವಾಬ್ದಾರಿಯ ಪಾಠ ಹೇಳಿ,ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದಾದ ಇಲ್ಲಿನ ದುರ್ನಾತ  ಮತ್ತು ಅಸಹ್ಯಕರ ವಾತಾವರಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿದ್ದರೆ, ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.

ಆದರೆ ಶೌಚ ಗುಂಡಿಯಿಂದ ತುಂಬಿ ಹೊರ ಚೆಲ್ಲುವ ಮಲೀನ ನೀರು ,ಮತ್ತೆ ಹೊರ ಚೆಲ್ಲದಂತೆ ವಿಲೇವಾರಿ ಮಾಡಿಸುವ ಜವಾಬ್ದಾರಿಯ ಮಾತುಗಳನ್ನಾಡಬೇಕಿದ್ದ ಸಾರಿಗೆ ಅಧಿಕಾರಿಗಳು,ಸ್ವಚ್ಛತೆ ತಮಗೆ ಸಂಬಂಧವೇ ಇಲ್ಲ ಎಂಬಂತೆ ಬಂದು ಹೋಗುವ ಇತರೆ ಅಧಿಕಾರಿಗಳಿಗೆ,ಇದು ಪುರಸಭೆಯ ಕೆಲಸ ಇದು ಪುರಸಭೆಯ ಕೆಲಸ ಎನ್ನುತ್ತ ತಮ್ಮ ಜವಾಬ್ದಾರಿಯನ್ನು,ಬೇರೆಯವರ ಹಣೆಗೆ ಕಟ್ಟಿ ಕೈ ತೊಳೆದುಕೊಳ್ಳುವ ಯತ್ನ ಮಾಡಿದಂತಿತ್ತು.

ಆದರೆ ಹಿರಿಯ ಅಧಿಕಾರಿಗಳು ಬಂದಾಗಲೆಲ್ಲ,ಸ್ಥಳೀಯ ಪುರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು , ತಮ್ಮ ಇತಿ ಮಿತಿಯಲ್ಲಿ ಸಾಮಾಜಿಕ ಜವಾಬ್ದಾರಿ ನಿಭಾಯಿಸಲು ತಾವು ತೆಗೆದುಕೊಂಡ ಸೂಕ್ತ ಕ್ರಮಗಳನ್ನು, ಸಚಿತ್ರ ಹಾಗೂ ದಾಖಲಾತಿಗಳೊಂದಿಗೆ ತೋರಿಸಿದ್ದಲ್ಲದೇ,ಸಾರ್ವಜನಿಕ ಆರೋಗ್ಯ ಹಿತ ದೃಷ್ಟಿಯಿಂದ ಹಾಗೂ ತಮ್ಮ ಇಲಾಖೆಗಳ ಕಾನೂನು ಪರಿಮಿತಿಯೊಳಗೆ ಸಾರಿಗೆ ಸಂಸ್ಥೆಗೆ ತಮ್ಮ ಇಲಾಖೆಗಳ ವತಿಯಿಂದ ನೀಡಲಾದ    ನೋಟಿಸ್ ಪ್ರತಿಗಳನ್ನು ಸಹ ತೋರಿಸಿ, ತಮ್ಮ ಕರ್ತವ್ಯ ಬದ್ಧತೆ ಹಾಗೂ   ಕೈಗೊಂಡ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಂತಿತ್ತು.

ಅಲ್ಲದೆ ಅಧಿಕಾರಿಗಳ ಎದುರೇ ಹಸಿ ಕಸ ಒಣ ಕಸ ವಿಂಗಡಣೆಯ ಮಹತ್ವ, ಸಾರಿ ಹೇಳಿದಂತಿತ್ತು. ಸಾರಿಗೆ ಸಂಸ್ಥೆಯವರು ಬೇಕಾ ಬಿಟ್ಟಿಯಾಗಿ ಪ್ಲಾಸ್ಟಿಕ್ ಸುಡುತ್ತಿರುವುದು, ಹಸಿ ಕಸ ಒಣ ಕಸ ವಿಂಗಡಿಸಿ ಪುರಸಭೆ ವಾಹನಕ್ಕೆ ಕೊಡಲು ಸ್ಥಳೀಯ ಸಿಬ್ಬಂದಿಗಳು ಸಹಕಾರ ನೀಡದಿರುವುದು,ಕಸ ತ್ಯಾಜ್ಯಗಳ  ತೊಟ್ಟಿ ತುಂಬಿ ಕಸ ಹೊರ ಚೆಲ್ಲುತ್ತಿರುವುದು,ಶೌಚಗುಂಡಿ ಮತ್ತು ಕ್ಯಾಂಟೀನ್ ತ್ಯಾಜ್ಯ ನೀರು, ಟ್ಯಾಂಕ್ ನಿಂದ ಹೊರ ಚೆಲ್ಲಿ, ಬಹುದೂರದ ವರೆಗೆ ಸಂಗ್ರಹಗೊಂಡು ಕೊಳಚೆ ಗುಂಡಿಯಂತೆ ಗಬ್ಬೆದ್ದು ನಾರುತ್ತಿರುವುದು , ಮತ್ತಿತರ ಅಶುಚಿತ್ಪ ವಾತಾವರಣದಿಂದ ಸಾರ್ವಜನಿಕರು ಸಾರಿಗೆ ಸಂಸ್ಥೆ ಆಡಳಿತ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುವಂತಿತ್ತು.

ಬಸ್ ನಿಲ್ದಾಣದ ತಮ್ಮ ಭೇಟಿಯ ವೇಳೆ  ಇಲ್ಲಿನ ಪರಿಸ್ಥಿತಿಗಳನ್ನು ಗಮನಿಸಿದ್ದ,ಕುಮಟಾ ಎಸಿಯವರಾಗಲಿ, ಲೋಕಾಯುಕ್ತ ಅಧಿಕಾರಿಗಳು, ಈ ಎಲ್ಲ ಅಂಶಗಳನ್ನು ಪರಿಗಣಿಸಿ,ಮೇಲ್ನೋಟಕ್ಕೆ ಸಾರಿಗೆ ಸಂಸ್ಥೆಯ ಕರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನಕ್ಕೆ ಕಿಡಿಕಾರಿ,ಶುಚಿತ್ವಕ್ಕೆ ಒತ್ತು ನೀಡುವಂತೆ ತಿಳಿಸಿ ,ಅನಿವಾರ್ಯವಾದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿ ಹೋಗಿದ್ದರು. ಇದೇ ವೇಳೆ  ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆಯವರೂ ಸಹ ಈಗಾಗಲೇ ಸಂಗ್ರಹವಾಗಿರುವ ಕಸ ತ್ಯಾಜ್ಯಗಳ ವಿಲೇವಾರಿಗೆ ಒತ್ತು ನೀಡುವಂತೆ  ಸೂಚಿಸಿದ್ದರು.

ಹೀಗಾಗಿ ತಮ್ಮ ಸಾರ್ವಜನಿಕ ಜವಾಬ್ದಾರಿ ಅರಿತ ಪುರಸಭೆ ನೂತನ ಮುಖ್ಯಾಧಿಕಾರಿ,ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು,ಕೆಲ ಜನ ಪ್ರತಿನಿಧಿಗಳು  ನಸುಕಿನ ಜಾವಾದಲ್ಲಿಯೇ ,ಬಸ್ ನಿಲ್ದಾಣಕ್ಕೆ ಬಂದು ಬಹುತೇಕ ಎಲ್ಲೆಡೆ 2 -3 ತಾಸುಗಳ ಕಾಲ ಸ್ವಚ್ಛತಾ ಸೇವೆ ನಡೆಸಿ ಗಮನ ಸೆಳೆದರು. ಕಸ ತ್ಯಾಜ್ಯ ವಿಲೇವಾರಿಯ ಈ ಸಂದರ್ಭದಲ್ಲಿ ಕೊಂಚ ಮಟ್ಟಿಗಾದರೂ ಕೈಜೋಡಿಸಬೇಕಿದ್ದ ಸಾರಿಗೆ ಸಂಸ್ಥೆಯ ಯಾರೊಬ್ಬರೂ,ಇದು ತಮ್ಮ ಗಮನಕ್ಕೆ ಇಲ್ಲದಂತೆ ಮತ್ತು ತಮ್ಮ ಕರ್ತವ್ಯ ಅಲ್ಲ ಎನ್ನುವಂತೆ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ತೋರಿದರೇ ಅಥವಾ ಎಸಿ ಹೇಳಿದರೇನು ? ಲೋಕಾಯುಕ್ತರು ಹೇಳಿದರೇನು ?  ಇವರು ನಮ್ಮ ಸಾರಿಗೆ ಸಂಸ್ಥೆಯ ಡಿಸಿ ಪವರ್ ನವರು  ಅಲ್ಲವಲ್ಲ ಎಂದು ಉಡಾಫೆ ತೋರಿದರೆ ತಿಳಿಯದಾಗಿದೆ  ಎಂದು  ಸ್ಥಳದಲ್ಲಿದ್ದ ಒಂದಿಬ್ಬರು ಪ್ರಯಾಣಿಕರೋ, ಸಾರ್ವಜನಿಕರೋ ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಂತಿತ್ತು.

ನಿಲ್ದಾಣದ ಆವರಣದಲ್ಲಿಯೇ 1 – 2 ಕಡೆ ಮಲ-ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯ ವಾತಾವರಣ ಸಹಿಸಿಕೊಂಡು, ಟನ್ ಗಟ್ಟಲೆ ಕಸ ತ್ಯಾಜ್ಯಗಳನ್ನು ತಮ್ಮ ಕಸ ವಿಲೇವಾರಿ ವಾಹನದಲ್ಲಿ ತುಂಬಿಸಿಕೊಂಡು ಹೋಗುವ ಮೂಲಕ ಪುರಸಭೆಯವರು ಹಲವರ ಪ್ರಶಂಸೆಗೆ ಪಾತ್ರರಾದರು. ಪುರಸಭೆ ವತಿಯಿಂದ ಸ್ವಚ್ಛತಾ ಹಿ ಸೇವಾ ಅಭಿಯಾನದ,ಈ ವರ್ಷದ ಧ್ಯೇಯ ವಾಕ್ಯವಾದ ಸ್ವಭಾವ ಸ್ವಚ್ಛತೆ, ಸಂಸ್ಕಾರ  ಸ್ವಚ್ಛತೆ ಎಂಬ ಅಭಿಯಾನವನ್ನು ಸೆ 17 ರಿಂದ ಆರಂಭಿಸಲಾಗುತ್ತಿದ್ದು,ಅಕ್ಟೋಬರ್ 2 ರ ಗಾಂಧಿ  ಜಯಂತಿ ವರೆಗೆ ವಿಶೇಷ ಅಭಿಯಾನ ರೂಪದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಇದರ ಪೂರ್ವಭಾವಿ ಎಂಬಂತೆ ಸ್ವತ:  ಮುಖ್ಯಾಧಿಕಾರಿಗಳು ಸಹಿತ ಇತರೆ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ಸ್ವಚ್ಛತಾ ಸೇವೆ ಆರಂಭಿಸಿದ್ದು,ಸಾಮಾಜಿಕ ಸ್ವಾಸ್ಥ್ಯದಲ್ಲಿ ಪುರಸಭೆಯ ಪಾತ್ರದ ಕುರಿತು ತಮ್ಮ ಜವಾಬ್ದಾರಿ ನಿಭಾಯಿಸಿ, ಸೇವೆ ಹಾಗೂ ಕರ್ತವ್ಯದ ಮೂಲಕ ಇತರರಿಗೂ ಮಾದರಿಯಾದಂತಿದೆ. ಮುಂದಿನ ವಾರ ಮತ್ತೆ ಬಸ್ ನಿಲ್ದಾಣದತ್ತ ಪುರಸಭೆ ಪೌರಕಾರ್ಮಿಕರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತಿತರರು ಸ್ವಚ್ಛತೆಗಾಗಿ ಆಗಮಿಸಲಿದ್ದು,ಆ ವೇಳೆಗಾದರೂ ಸ್ಥಳೀಯ ಸಾರಿಗೆ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇವಾ ಕಾರ್ಯದಲ್ಲಿ ತಾವು ಕೈಜೋಡಿಸಿ ತಮ್ಮ ಜವಾಬ್ದಾರಿ ಪ್ರದರ್ಶಿಸುವರೇ ಕಾದುನೋಡಬೇಕಿದೆ? ಎಲ್ಲ ಇಲಾಖೆಗಳ ಸಮನ್ವಯತೆಯ ಮೂಲಕ  ನಾಗರಿಕರಿಗೂ ಜಾಗೃತಿ ಸಂದೇಶ ರವಾನಿಸಿ,ಸ್ವಚ್ಛತೆ ಎನ್ನುವುದು ಒಂದು ದಿನಕಷ್ಟೇ ಸೀಮಿತವಲ್ಲ,ಅದು ನಿತ್ಯ ನಿರಂತರ ಎಂಬ ಭಾವನೆ ಪ್ರತಿ ನಾಗರಿಕರಲ್ಲೂ ಮೂಡುವಂತಾಗಿ,ಎಲ್ಲಡೆಯೂ ಸ್ವಚ್ಛತೆಯ ಮಹತ್ವ ಪಸರಿಸಬೇಕೆಂಬುದು ತಾಲೂಕಿನ ಪ್ರಜ್ಞಾವಂತ ಜನತೆಯ ಆಶಯವಾಗಿದೆ.

ಬಸ್ ನಿಲ್ದಾಣದ ಅವ್ಯವಸ್ಥೆ ಮತ್ತು ಅಶುಚಿತ್ವದ ಕುರಿತು ಎಲ್ಲರಿಗಿಂತ ಮೊದಲು ವಿಸ್ತೃತ ವರದಿ ಪ್ರಕಟಿಸಿದ್ದಲ್ಲದೇ, ತದ ನಂತರವೂ ಫಾಲೋ ಅಪ್ ಮಾದರಿಯಲ್ಲಿ ನಿರಂತರ ವರದಿ ಪ್ರಕಟಿಸಿ ಗಮನ ಸೆಳೆದ ವಿಸ್ಮಯ ವಾಹಿನಿ, ವರದಿಗೆ ಸ್ಪಂದಿಸಿದ ಅಧಿಕಾರಿಗಳ ಭೇಟಿ,ಅಂಕೋಲಾ ತಾಲೂಕಿನ ತಾಲೂಕ ಆರೋಗ್ಯ ಅಧಿಕಾರಿಗಳು ಮತ್ತು ಪುರಸಭೆ ಮುಖ್ಯಾ ಧಿಕಾರಿ ಮತ್ತಿತರ ಆಯಾ ಇಲಾಖೆಗಳ ಹಿರಿಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯ ಬದ್ಧತೆ ಮತ್ತು ಸಮಸ್ಯೆ ನಿವಾರಣೆಗೆ ತೆಗೆದುಕೊಂಡ ಕ್ರಮ ಹಾಗೂ ಸ್ಪಂದನೆಗೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಬನ್ನಿ ಎಲ್ಲರೂ ಕೂಡಿ ಸ್ವಚ್ಛತೆಗೆ ನಮ್ಮ ಕೈಲಾದ ಸೇವೆ ಸಲ್ಲಿಸೋಣ:  ಕೊನೆ ಪಕ್ಷ ಸೇವೆ ಸಲ್ಲಿಸಲಾಗದಿದ್ದರೂ,ಕಂಡ ಕಂಡಲ್ಲಿ ಉಗುಳದೇ,ಕಸ ತ್ಯಾಜ್ಯಗಳನ್ನು ಎಸೆಯದೇ, ಸ್ವಚ್ಚತೆಯನ್ನು ಸ್ವಯಂ ಅಳವಡಿಸಿಕೊಂಡು ನಮ್ಮ ಸುತ್ತಮುತ್ತಲ ಪರಿಸರ ಸಚ್ಚ  ಸುಂದರವಾಗಿರುವಂತೆ ನಾಗರಿಕ ಜವಾಬ್ದಾರಿ ಮೆರೆಯೋಣ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button