ಅಂಕೋಲಾ : ಹೆಸ್ಕಾಂ ಇಲಾಖೆಯ ಮೇಲ್ವಿಚಾರಕ , ತಾಲೂಕಿನ ಪೂಜಗೇರಿ ನಿವಾಸಿ ರಮಾಕಾಂತ ಗಣಪತಿ ಗಾಂವಕರ (54) ರವಿವಾರ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಇತ್ತೀಚಿನ ಅನಾರೋಗ್ಯ ಸಮಸ್ಯೆಯಿಂದ ಆಗಾಗ ಚಿಕಿತ್ಸೆ ಒಳಪಡುತ್ತಿದ್ದ ಇವರನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆ ಉಸಿರೆಳೆದರು.
ಹೆಸ್ಕಾಂ ಇಲಾಖೆಯಲ್ಲಿ ದಿನಗೂಲಿಯಾಗಿ ಸೇರಿಕೊಂಡು,ನಂತರ ಖಾಯಂ ನೌಕರರಾಗಿ, ಈ ವರೆಗೆ ಲೈನ್ ಮೆನ್ ಆಗಿ, ಈದೀಗ ಮೇಲ್ವಿಚಾರಕರಾಗಿ ಸುದೀರ್ಘ ಸೇವಾ ಅನುಭವ ಹೊಂದಿದ್ದರು. ಅವರ ಆತ್ಮೀಯ ವಲಯದಲ್ಲಿ ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಕೆ. ಇ ಬಿ ರಮಾಕಾಂತ ಎಂದೇ ಚಿರ ಪರಿಚಿತರಾಗಿದ್ದರು.
ಶಿರೂರು ಗುಡ್ಡ ಕುಸಿತ ದುರಂತ : ಮೂರನೇ ದಿನದ ಕೊನೆಯಲ್ಲಿ ಮೂಳೆ ಪತ್ತೆ
ಮೊದಲುದಿನಗೂಲಿಯಾಗಿದ್ದ ತಾನು ಹಂತ ಹಂತವಾಗಿ ಮೇಲಿನ ಹುದ್ದೆ ಪಡೆಯುತ್ತಾ ಮೇಲ್ವಿಚಾರಕನಾಗಿದ್ದರೂ ಯಾವುದೇ ಅಹಂ ತೋರಿಸದೇ,ತನ್ನೂರಿನ ಹಾಗೂ ಸಮಾಜದ ಅನೇಕ ಯುವಕರಿಗೆ ಸಲಹೆ ಮಾರ್ಗದರ್ಶನ ಕೊಟ್ಟು,ಅವರು ಸಹ ಉದ್ಯೋಗ ಕಂಡು ಕೊಳ್ಳುವ ಮೂಲಕ ಹತ್ತಾರು ಕುಟುಂಬಗಳ ಜೀವನ ನಿರ್ವಹಣೆಗೆ ರಮಕಾಂತ ಅವರೇ ಬೆಳಕಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ.
ಹೆಸ್ಕಾಂ ಇಲಾಖೆಯ ನೌಕರರ ಸಂಘದ ಸದಸ್ಯರಾಗಿ,ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ರಮಾಕಾಂತ ಗಾಂವಕರ,ತಮ್ಮ ಹಾಸ್ಯ ಚಟಾಕಿ, ಆತ್ಮೀಯ ಮಾತುಗಾರಿಕೆ ಮೂಲಕ ಹಲವರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು. ಊರಿನ ಹಾಗೂ ಇತರೆಡೆಯ ಹತ್ತಾರು ಧಾರ್ಮಿಕ,ಸಾಂಸ್ಕೃತಿಕ ಕ್ರೀಡೆ ಮತ್ತಿತರ ವಿದಾಯಕ ಕಾರ್ಯಗಳಲ್ಲಿಯೂ ತನ್ನ ಕೈಲಾದ ತನು ಮನ ಧನ ಸೇವೆ ಸಹಕಾರ ನೀಡುತ್ತಿದ್ದರು.
ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಅವರ ಮೃತದೇಹವನ್ನು ಅಂಕೋಲಾದ ಪೂಜಗೇರಿಯ ಸ್ವಗೃಹಕ್ಕೆ ತಂದು, ತದನಂತರ ಊರಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು.ನೂರಾರು ಜನ ಮೃತರ ಅಂತಿಮ ದರ್ಶನ ಪಡೆದುಕೊಂಡರು. ಮೃತರು, ಪತ್ನಿ,ಇಬ್ಬರು ಗಂಡು ಮಕ್ಕಳು, ಮಗಳು-ಅಳಿಯ, ಮೊಮ್ಮಗಳು, ತಾಯಿ ಸಹೋದರ – ಸಹೋದರಿಯರು ಸೇರಿದಂತೆ ತಮ್ಮ ಕುಟುಂಬ ವರ್ಗ ಹಾಗೂ ಅಪಾರ ಬಂಧು-ಬಳಗ ತೊರೆದಿದ್ದಾರೆ.
ರಮಾಕಾಂತ ಗಾಂವಕರ ಅಕಾಲಿಕ ನಿಧನಕ್ಕೆ ಶಾಸಕ ಸತೀಶ ಸೈಲ್, ಹೆಸ್ಕಾಂ ಇಲಾಖೆಯ ಹಿರಿ ಕಿರಿಯ ಸಿಬ್ಬಂದಿಗಳು, ಪೂಜಗೇರಿ, ಬಾಸಗೋಡ, ಶೀಳ್ಯ , ಬೆಳಂಬಾರ ಸೇರಿದಂತೆ ಹತ್ತಾರು ಹಳ್ಳಿಗಳ ಪ್ರಮುಖರು, ಗ್ರಾಮಸ್ಥರು ಮತ್ತು ತಾಲೂಕಿನ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ