ಅಂಕೋಲಾ: ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿರುವ ಕುರಿತು ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಡಿ.ವೈ.ಎಸ್. ಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸರು ಪಟ್ಟಣದಲ್ಲಿ ಸಂಚಾರ ನಿಯಮಗಳ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಪೊಲೀಸ್ ವಾಹನದಲ್ಲಿ ಧ್ವನಿ ವರ್ಧಕಗಳ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಲಾಯಿತು.
ಬೈಕುಗಳಲ್ಲಿ ಮೂರು ನಾಲ್ಕು ಜನರು ಕುಳಿತು ಸಂಚರಿಸದಂತೆ, ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡದಂತೆ ಜನ ಜಾಗೃತಿ ಮೂಡಿಸಲಾಯಿತು. ಬಸ್ ನಿಲ್ದಾಣ, ಆಟೋ ರಿಕ್ಷಾ ನಿಲ್ದಾಣ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದ ಆರಕ್ಷಕರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.
ಕಾರವಾರದಿಂದ ಸಂಚಾರ ಪೊಲೀಸರ ತಂಡ ಆಗಮಿಸಿ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ದು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಮುಂದಿನ ದಿನಗಳಲ್ಲಿ ದಂಡ ವಿಧಿಸುವ ಕಾರ್ಯ ನಡೆಯಲಿದೆ. ಎಸ್ಪಿ ನಾರಾಯಣ ಎಂ ಮಾರ್ಗದರ್ಶನ ಹಾಗೂ ತುರ್ತು ಸ್ಪಂದನೆಯ ಕ್ರಮದ ರೀತಿಯಲ್ಲಿ ಡಿವೈಎಸ್ಸಿ ಗಿರೀಶ್ , ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿ ಎಸ್ ಐ ಉದ್ದಪ್ಪ ಧರೆಪ್ಪನವರ , ಸಂಚಾರ ವಿಭಾಗದ ಪಿ.ಎಸ್. ಐ ಸುನೀಲ ಹುಲ್ಲೊಳ್ಳಿ ,ಕಾರವಾರ ಸಂಚಾರಿ ಠಾಣೆಯ ದೇವೇಂದ್ರ ನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಅತಿ ವೇಗ ತಿಥಿ ಬೇಗ ಎನ್ನುವ ಎಚ್ಚರಿಕೆಯ ಸಂದೇಶದೊಂದಿಗೆ ವಾಹನ ಸಂಚಾರರಿಗೆ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಜಾಗೃತಿ ಮೂಡಿಸುತ್ತಿರುವುದಕ್ಕೆ ಪ್ರಜ್ಞಾವಂತ ವಲಯದಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎನ್ನುವುದು ,ಸವಾರರ ಪ್ರಾಣ ರಕ್ಷಣೆ ಉದ್ದೇಶದಿಂದ ಸರಿಯಾದ ನಿರ್ಣಯವೇ ಆಗಿದ್ದರೂ , ಮಾರುಕಟ್ಟೆ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ನಾನಾ ಕಾರಣಗಳಿಂದ ಕಾನೂನಿನಲ್ಲಿ ಕೊಂಚ ಸಡಿಲಿಕ್ಕೆ ಮಾಡಿದ್ದರೆ ,ಒಳ್ಳೆಯದಾಗುತ್ತಿತ್ತು ಎನ್ನುವ ಅಭಿಪ್ರಾಯವು ಕೆಲ ಸಾರ್ವಜನಿಕ ಪ್ರಮುಖರಿಂದ ಕೇಳಿ ಬಂದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ