ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಉಳಿಸಿಕೊಳ್ಳಲಾಗದ ದುರ್ವಿಧಿ ಒಂದೆಡೆಯಾದರೆ , ಮೃತ ದೇಹ ಸಾಗಿಸಲು ಅಂಬುಲೆನ್ಸ್ ವಾಹನವನ್ನು ಹಳ್ಳದ ನೀರಿಗಿಳಿಸಿ ದುರ್ಗಮ ಹಾದಿಯಲ್ಲಿ ಹರಸಾಹಸ ಪಟ್ಟು ಸಾಗಿಸಬೇಕಾದ ದೌರ್ಭಾಗ್ಯ ಇನ್ನೊಂದೆಡೆ,ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆ ಆರೋಗ್ಯ ಭಾಗ್ಯ ಹಾಗೂ ಮೂಲಭೂತ ಸೌಕರ್ಯದ ಕೊರತೆ ನೀಗಿಸಿ ಉತ್ತರ ಕಂಡುಕೊಳ್ಳುವುದು ಯಾವಾಗ ಎನ್ನುವುದೇ ಯಕ್ಷಪ್ರಶ್ನೆಯಂತಿದೆ.
ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ಬೆಂಜ್ ಎಂಬ ಹೊಸ ಲಾರಿಯೊಂದು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ,ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾ ಸಮೀಪದ ಕ್ಯಾದಗಿ ಗ್ರಾಮದ ನಿವಾಸಿಯಾಗಿದ್ದ ಸುರೇಶ ರೂಪ ಗೌಡ (33 ) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ.
ಈತನು ಬೈಕ್ ಮೇಲೆ ರಾ.ಹೆ. 63 ರ ಅಂಕೋಲಾ ಬಾಳೆಗುಳಿ ಕಡೆಯಿಂದ ತನ್ನ ಮನೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಬೊಗ್ರಿಬೈಲ್ – ಕಂಚಿನ ಬಾಗಿಲ ಬಳಿ ಈ ಅಪಘಾತ ಸಂಭವಿಸಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಭಾರತ ಬೆಂಜ್ ಕಂಪನಿಯ ಭಾರೀ ವಾಹನವೊಂದು ಜೋರಾಗಿ ಡಿಕ್ಕಿ ಪಡಿಸಿದ ಪರಿಣಾಮ ,ಬೈಕ್ ನುಜ್ಜಾಗಿತ್ತಲ್ಲದೇ ಅಪಘಾತದ ರಭಸಕ್ಕೆಸಿಡಿದು ಬಿದ್ದ ಬೈಕ್ ಸವಾರನ ತಲೆ ,ಕೈ ಕಾಲು ಮತ್ತಿತರೆಡೆ ಗಂಭೀರ ಗಾಯ ನೋವುಗಳಾಗಿತ್ತು .
ಕೂಡಲೇ 108 ಅಂಬುಲೆನ್ಸ್ ಮೂಲಕ ಸ್ಥಳೀಯರ ಸಹಕಾರದಲ್ಲಿ ಗಾಯಾಳುವನ್ನು ಅಂಕೋಲಾ ತಾಲೂಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಹೆದ್ದಾರಿ ಗಸ್ತು ವಾಹನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು. ಗಾಯಾಳು ಸುರೇಶ ಗೌಡ ನಿಗೆ ಅಂಕೋಲಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು ,ಅಲ್ಲಿ ಕೆಲ ಹೊತ್ತು ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿ ಗಂಭೀರ ಗಾಯ ನೋವುಗೊಂಡಿದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ .
ಆ ಪ್ರಕಾರ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದಿಂದ ಮಂಗಳೂರಿಗೆ ಸಾಗಿಸುತ್ತಿರುವಾಗ ದುರದೃಷ್ಟವಶಾತ್ ದಾರಿ ಮಧ್ಯೆ ಆತ ಭಟ್ಟಳ ಬಳಿ ಕೊನೆ ಉಸಿರೆಳೆದ ಎನ್ನಲಾಗಿದೆ. ಈ ಕುರಿತು ಹೊನ್ನಳ್ಳಿಯ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಥಳೀಯ ಪ್ರಮುಖ ಆನಂದ ಗೌಡ ಘಟನೆ ಕುರಿತಂತೆ ಅತೀವ ಬೇಸರ ವ್ಯಕ್ತಪಡಿಸಿ , ಅಪಘಾತ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿಯಿಂದ ಅಂಕೋಲಾ ಆಸ್ಪತ್ರೆ ,ಅಂಕೋಲಾ ದಿಂದ ಕಾರವಾರ ಆಸ್ಪತ್ರೆ ,ಅಲ್ಲಿ ಪರೀಕ್ಷೆ ತಪಾಸಣೆ ಚಿಕಿತ್ಸೆ ಮತ್ತಿತರ ಕಾರಣಗಳ ಬಳಿಕ ಕೊನೆಗೆ ಕಾರವಾರದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಿರಿ ಎಂದಾಗ , ದಾರಿಮಧ್ಯೆ ಆತ ಕೊನೆಯುಸಿರಳೆದಿರುವುದು ದುರದೃಷ್ಟಕರ. ಅಲ್ಲಿಂದ ಇಲ್ಲಿಗೆ ಐದಾರು ತಾಸು ವಿಳಂಬ ಮಾಡುವ ಬದಲು , ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಂತೆ ಮೊದಲೇ ಸೂಚಿಸಿದ್ದರೆ ನಮ್ಮವ ಬದುಕುತ್ತಿದ್ದೇನೋ ಏನೋ ಎಂದು ವ್ಯವಸ್ಥೆ ವಿರುದ್ಧ ಹತಾಶೆ ಹಾಗೂ ಬೇಸರದಿಂದ ನುಡಿದರು.
ರಸ್ತೆ ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ .ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು , ಅರಣ್ಯ ಪ್ರದೇಶದ ದುರ್ಗಮ ಹಾದಿಯಲ್ಲಿ ಹಳ್ಳ ಕೊಳ್ಳಗಳನ್ನು ದಾಟಿ ಶವ ತಲುಪಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ ನಾಯ್ಕ ರಕ್ಷಕ ಅಂಬುಲೆನ್ಸ್ ವಾಹನವನ್ನು ಅತೀ ಜಾಗರೂಕತೆಯಿಂದ ಚಲಾಯಿಸಿ ಮತ್ತು ತಮ್ಮ ವಾಹನ ಅಪಾಯಕ್ಕೆ ಸಿಲುಕಿ ಕೊಳ್ಳುವ ಅಥವಾ ಕೆಟ್ಟು ನಿಲ್ಲುವ ಸಾಧ್ಯತೆಗಳು ಇದ್ದಾಗಲೂ ಅವನು ಲೆಕ್ಕಿಸದೇ ಹರಸಾಹಸ ಪಟ್ಟು ಮಾನವೀಯ ಸೇವೆಗೆ ಮಾದರಿಯಾಗಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು. ಅಂಬುಲೆನ್ಸ್ ಹೋಗಿಬರಲು ಸ್ಥಳೀಯ ಪ್ರಮುಖರು ಮತ್ತು ಗ್ರಾಮಸ್ಥರು ಸಹಕರಿಸಿದರು. ನೀರಿನ ಹರಿವು ಕಡಿಮೆ ಇರುವ ಈಗಿನ ದಿನಗಳಲ್ಲಿಯೇ ಅಂಬುಲೆನ್ಸ್ ನಂತಹ ತುರ್ತು ಸೇವೆಗೆ ನಾವು ಪರದಾಡಬೇಕಿದೆ.
ಮಳೆಗಾಲದಲ್ಲಿಯಂತೂ ಇಲ್ಲಿನ ವರ ಪಾಡು ಹೇಳತೀರದು. ದಿನನಿತ್ಯ ಶಾಲೆಗೆ ಸಾಗುವ ಮಕ್ಕಳು ಅತಿ ಕಿರಿದಾದ ಪುಟ್ ಬ್ರಿಜ್ ಮೇಲೆ ಜೀವ ಕೈಯಲ್ಲಿ ಹಿಡಿದು ಸಾಗುವಂತಿಾಗಿದೆ.ಅನಾರೋಗ್ಯ ಮತ್ತು ಇತರ ಸಂದರ್ಭಗಳಲ್ಲಿ ನಮ್ಮನ್ನು ದೇವರೇ ಕಾಪಾಡಬೇಕು. ಇನ್ನು ಮುಂದಾದರು ಸಂಬಂಧಿತ ಆಡಳಿತ ವರ್ಗ ಹೊಸ ಕಿರು ಸೇತುವೆ ನಿರ್ಮಿಸಿ ,ರಸ್ತೆ ಅಭಿವೃದ್ಧಿಪಡಿಸಿ ಸುತ್ತಮುತ್ತಲ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಿ ಕೊಡಬೇಕೆಂದು ಅಗಸೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಶವಂತ ಗೌಡ ಅಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕೃಷಿ ಮತ್ತು ಕೂಲಿ ಕೆಲಸದ ಮೂಲಕ ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ತಂದೆ -ತಾಯಿಗಳಿಗೆ ಪುತ್ರ ಶೋಕವಾದರೆ , ಗಂಡವನ್ನು ಅಕಾಲಿಕವಾಗಿ ಕಳೆದುಕೊಂಡ ನೃತದೃಷ್ಟ ಹೆಂಡತಿ ಮತ್ತು ತಂದೆಯನ್ನು ಕಳೆದುಕೊಂಡ ಪುಟ್ಟ ಪುಟಾಣಿಯ ರೋಧನ , ನೋವು , ಆಕ್ರಂದನ ಎಂಥವರ ಮನವೂ ಮರಗುವಂತೆ ಮಾಡದಿರದು.
ಈ ಬಡ ಕುಟುಂಬಕ್ಕೆ ಸರ್ಕಾರ ಸಂಘ ಸಂಸ್ಥೆಗಳು ದಾನಿಗಳು ಹಾಗೂ ಸಮಾಜ ಬಾಂಧವರು ಪರಿಹಾರ ಮತ್ತು ಕೈಲಾದ ಸಹಾಯ ಸರ್ಕಾರ ನೀಡಿ ಮಾನವೀಯ ಅನುಕಂಪ ತೋರಿ ಸಾಂತ್ವನ ಹೇಳಿ ಧೈರ್ಯ ತುಂಬಬೇಕಿದೆ. ಅಂತೆಯೇ ಕುಗ್ರಾಮಗಳಂತಿರುವ ಕ್ಯಾದಿಗೆ ಮತ್ತಿತರ ಗ್ರಾಮಗಳ ಸರ್ವೆ ಕಾರ್ಯ ನಡೆಸಿ ಅಂತಹ ಪ್ರದೇಶಗಳಲ್ಲಿ ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸಿ , ಸೂಕ್ತ ಯೋಜನೆ ರೂಪಿಸಬೇಕಿದೆ.ಜನಪರ ಜಿಲ್ಲಾಧಿಕಾರಿ ಎಂದೇ ಗುರುತಿಸಿಕೊಂಡಿರುವ ಲಕ್ಷ್ಮಿಪ್ರಿಯಾ ಇವರು ಈ ಕುರಿತು ಗಮನಹರಿಸಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ವಿಸ್ಮಯ ನ್ಯೂಸ್, ವಿಲಾಸ ನಾಯಕ ಅಂಕೋಲಾ