Important
Trending

ಪ್ರತಿಷ್ಠಿತ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿಯೇ ಕಾರ್ಡ್ ಬದಲಾಯಿಸಿ ವಂಚನೆ : ದಾಖಲಾಯಿತು ಮತ್ತೊಂದು ಪೊಲೀಸ್ ಪ್ರಕರಣ

ಅಂಕೋಲಾ: ಎಟಿಎಂ ಗೆ ಹಣ ವಿತ್ ಡ್ರಾ ಮಾಡಲು ಬಂದಿದ್ದ ಪಂಚಾಯತನ ನಿವೃತ್ತ ಖಾಸಗಿ ಸಿಬ್ಬಂದಿ ಓರ್ವರಿಗೆ ,ಬ್ಯಾಂಕಿಂಗ್ ವ್ಯವಹಾರದಲ್ಲಿ ಸಹಾಯ ಮಾಡಿದಂತೆ ನಟಿಸಿ ,ಅವರ ಅರಿವಿಗೆ ಬಾರದಂತೆ ಎಟಿಎಂ ಕಾರ್ಡ್ ಬದಲಾಯಿಸಿ ನಂತರ ಗ್ರಾಹಕರ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸಿದ ಘಟನೆ ಪಟ್ಟಣದ ಕೆ.ಸಿ.ರಸ್ತೆಯಲ್ಲಿರುವ ಎಸ್. ಬಿ.ಐ. ಎ.ಟಿ.ಎಂ ನಲ್ಲಿ ನಡೆದಿದೆ.

ತಾಲೂಕಿನ ಬೆಳಸೆ ತೆಂಕನಾಡ ನಿವಾಸಿ ದೇವಾ ಲೋಕಪ್ಪ ಗೌಡ (61 ) ಎನ್ನುವವರೇ ವಂಚನೆಗೊಳಗಾಗಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಪಟ್ಟಣದ ಕೆಸಿ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಬಂದು ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಹಾಯದಿಂದ ಹಣವನ್ನು ತೆಗೆಸಿಕೊಂಡು ಹೊರ ಬರುತ್ತಿರುವಾಗ , ಅಲ್ಲೇ ಪಕ್ಕದಲ್ಲಿ ನಿಂತಿದ್ದ ಅಪರಿಚಿತ , ಹಣ ತೆಗೆದುಕೊಂಡ ಬಗ್ಗೆ ಎಟಿ ಎಮ್ ಸ್ಟೇಟ್ಮೆಂಟನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿ , ಸಹಾಯ ಮಾಡುವ ನೆಪದಲ್ಲಿ, ಎಟಿಎಂ ಕಾರ್ಡನ್ನು ಪಡೆದುಕೊಂಡು ಮಷಿನಿನಲ್ಲಿ ಹಾಕಿ ಪಾಸ್ವರ್ಡ್ ನಮೂದಿಸಲು ತಿಳಿಸಿ ,ಪಾಸ್ವರ್ಡ್ ನಮೂದಿಸುತ್ತಿರುವಾಗ ಅದನ್ನು ನೊಡಿಕೊಂಡು , ನಂತರ ಎ.ಟಿ.ಎಂ ಕಾರ್ಡ್ ನೀಡುವಾಗ , ಗೌಡರ ಅರಿವಿಗೆ ಬಾರದಂತೆ ಇನ್ನೊಂದು ಕಾರ್ಡ್ (ಬದಲಾಯಿಸಿ ) ಕೊಟ್ಟಿದ್ದರು ಎನ್ನಲಾಗಿದ್ದು ,ಕಾರ್ಡನ್ನು ಪರಿಶೀಲಿಸದೇ ತನ್ನದೇ ಎಟಿಎಂ ಕಾರ್ಡ್ ಅಂತಾ ತಿಳಿದು ಮನೆಗೆ ತೆಗೆದುಕೊಂಡು ಹೋದ ಸ್ವಲ್ಪ ಹೊತ್ತಿನಲ್ಲಿಯೇ ,ಅಕೌಂಟ್ ಖಾತೆಯಿಂದ ಹಣ ಕಡಿತವಾದ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿದ್ದನ್ನು ನೋಡಿ ,ಬ್ಯಾಂಕಿಗೆ ಬಂದು ಪರಿಶೀಲಿಸಿದಾಗ ,ಬ್ಯಾಂಕ್ ಸಿಬ್ಬಂದಿ ತಮ್ಮ ಖಾತೆಯಿಂದ ರೂ 37,000 ಹಣ ಕಡಿತವಾಗಿದೆ ಎಂದು ತಿಳಿಸಿದ್ದಾರೆ.

ತಾನು ಕೇವಲ ರೂ3000 ಮಾತ್ರ ಹಣ ತೆಗೆದುಕೊಂಡು ಹೋಗಿರುವೆ ಎಂದು ಹೇಳಿದಾಗ ಮತ್ತೊಮ್ಮೆ ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ನಿಮ್ಮ ಎಟಿಎಂ ಕಾರ್ಡ್ ನಲ್ಲಿಯೇ 37,000 ವಿಥ್ ಡ್ರಾ ಮಾಡಲಾಗಿದೆ ಎಂದು ಬ್ಯಾಂಕ್ ಸ್ಟೇಟ್ಮೆಂಟ್ ತೋರಿಸಿದ್ದಾರೆ. ಈ ವೇಳೆ ತಾವು ಮೋಸ ಹೋಗಿರುವುದು ಗ್ರಾಹಕರ ಗಮನಕ್ಕೆ ಬಂದು , ತಮ್ಮ ಸಂಬಂಧಿ ಯೋರ್ವರ ಮೂಲಕ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರದಲ್ಲಿ ದಾಖಲಾಗಿರುವ ಸಾಧ್ಯತೆ ಇದೆ. ಇತ್ತೀಚೆಗೆ ಇದೇ ಎಟಿಎಮ್ ಕೇಂದ್ರದಲ್ಲಿ ಮಹಿಳೆ ಒಬ್ಬರಿಗೆ ಇದೇ ರೀತಿ ಕಾಡು ಬದಲಿಸಿ ರೂ 40000 ವಂಚಿಸಲಾಗಿದ್ದು ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಎರಡು ವಂಚನೆ ಕೃತ್ಯಗಳನ್ನು ಮಾಡಿದ ಆರೋಪಿತರರು ? ಒರ್ವನೇ ಇವನ್ನು ಮಾಡಿದನೇ? ಸಿಸಿ ಕ್ಯಾಮೆರಾ ಮತ್ತಿತರ ಸಾಕ್ಷಾಧಾರಗಳನ್ನು ಪರಿಶೀಲಿಸಿ ಪೊಲೀಸರು ಚುರುಕಿನ ತನಿಖೆ ಕೈಗೊಂಡು ,ಆರೋಪಿತನಿಗೆ ಕೈ ಕೋಳ ತೊಡಿಸಿ ,ವಂಚನೆಗೊಳಗಾದವರಿಗೆ ಹಣ ವಾಪಸ್ ಮಾಡಿಸಿ ನೆಮ್ಮದಿ ಕರುಣಿಸಿ ಯಾರೇ ಕಾದುನೋಡಬೇಕಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ಕಣಕಣೇಶ್ವರ ದೇವಸ್ಥಾನದ ಪಕ್ಕದ ಎಟಿಎಂ ಕೇಂದ್ರ ಒಂದರಲ್ಲಿ ,ಇದೇ ರೀತಿ ಅಪರಿಚಿತ ವ್ಯಕ್ತಿಯೋರ್ವ ಕೆಇಬಿ ನಿವೃತ್ತ ನೌಕರನಿಗೆ ನಯವಂಚಕ ಮಾತುಗಳ ಮೂಲಕ ಲಕ್ಷ್ಯ ಬೇರೆಡೆ ಸೆಳೆದು ,ಅವರ ಕಾರ್ಡ್ ಬದಲಿಸಿ ಬೇರೊಂದು ಕಾರ್ಡ ನೀಡಿ ,ನಂತರ ಅಸಲಿ ಕಾರ್ಡಿನಿಂದ ಹಣ ಎಗರಿಸಿದ್ದ. ಅಂದು ಚುರುಕಿನ ತನಿಖೆ ಕೈಗೊಂಡಿದ್ದ ಅಂಕೋಲಾ ಪೋಲಿಸರು ,ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದು ಕಾನೂನು ಕ್ರಮ ಮುಂದುವರಿಸಿದ್ದು,ಈಗಲೂ ಅದೇ ಚುರುಕುತನದ ಕಾರ್ಯಾಚರಣೆ ಕೈಗೊಳ್ಳುವ ವಿಶ್ವಾಸ ಕೆಲವರಲ್ಲಿದೆ. ಇಂತಹ ವಂಚನೆಗಳ ವಿರುದ್ಧ ಜನಜಾಗೃತಿ ಉದ್ದೇಶದಿಂದ ಸ್ಥಳೀಯ ಪೊಲೀಸರು ಆಗಾಗ ಕೆಲ ಎಟಿಎಂ ಗಳಿಗೆ ತೆರಳಿ ,ಜನರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದದ್ದನ್ನು ಸ್ಮರಿಸಬಹುದಾಗಿದೆ.

ಅಪರಿಚಿತರ ಮಾತಿಗೆ ಮರುಳಾಗಿ ಸಹಾಯ ಪಡೆಯುವ ಮುನ್ನ ಬ್ಯಾಂಕ್ ಗ್ರಾಹಕರು ,ಸ್ವಯಂ ಜಾಗ್ರತಿ ಪಡೆದುಕೊಳ್ಳಬೇಕಿದೆ.ಅತ್ಯವಶ್ಯ ಸಂದರ್ಭದಲ್ಲಿ ನಿರ್ದಿಷ್ಟ ಪಟ್ಟ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಮಾತ್ರ ಮುಕ್ತ ಚರ್ಚೆ ಮಾಡಿ ,ತಮ್ಮ ಖಾತೆಗೆ ಕನ್ನ ಬೀಳದಂತೆ ,ಅಥವಾ ತಾವು ವಂಚನೆಗೊಳಗಾಗದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ. ಬ್ಯಾಂಕ್ ಸಿಬ್ಬಂದಿಗಳು ಸಹ ಸೂಕ್ತ ರಕ್ಷಣಾ ಸಿಬ್ಬಂದಿಗಳು ಮತ್ತು ಗ್ರಾಹಕರಿಗೆ ಅಧಿಕೃತ ಕೇರ್ ಟೇಕರ್ ಗಳನ್ನು ನೇಮಿಸಿ ,ವೃದ್ಧರು ಮಹಿಳೆಯರ ಸೇವೆ ಮತ್ತು ಸುರಕ್ಷತೆಗೆ ಒತ್ತು ನೀಡಬೇಕೆಂಬ ಮಾತು ಪ್ರಜ್ಞಾವಂತ ವಲಯದಿಂದ ಕೇಳಿಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button