Important
Trending

ಉತ್ತರಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಸಮಾರಂಭ: ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಪ್ರಶಸ್ತಿ ಪ್ರದಾನ

ಹೊನ್ನಾವರ: ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಸಮಾರಂಭವು ಹೊನ್ನಾವರ ತಾಲೂಕಿನ ಮಣ್ಣಿಗೆಯ ರಂಗ ಶ್ರೀಧರ ಮಂಟಪದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ನಾಡೋಜ ಡಾಕ್ಟರ್ ಹಂ. ಪ. ನಾಗರಾಜಯ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಗೀತ, ಸಾಹಿತ್ಯ, ಕ್ರೀಡೆ, ಮತ್ತು ಕಲೆ ಈ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈದ ಶತಾವಧಾನಿ ಡಾ.ಆರ್ ಗಣೇಶ ರವರು ಉತ್ತಮರಲ್ಲಿ ಅತ್ಯುತ್ತಮರು. ಯಕ್ಷಗಾನದ ದಿನವನ್ನಾಗಿ ಘೋಷಣೆ ಮಾಡಿದ ಈ ದಿನ ಐತಿಹಾಸಿಕ ದಿನ ಎಂದು ಅವರು ಬಣ್ಣಿಸಿದರು.

ಸೆಲ್ಕೋ ಸೋಲಾರ್ ಸಿಇಓ, ಮೋಹನ ಹೆಗಡೆ ಮಾತನಾಡಿ ನಮ್ಮ ಉತ್ತರಕನ್ನಡ ಜಿಲ್ಲೆಯ ಜನರು ಸಹಬಾಳ್ವೆ ಹಾಗೂ ಸಹಜ ಬಾಳ್ವೆಯಲ್ಲಿದ್ದಾರೆ. ನಮ್ಮ ಜಿಲ್ಲೆಯ ಜನರು ಶಿಕ್ಷಣದಲ್ಲಾಗಲಿ ಸಾಹಿತ್ಯದಲ್ಲಾಗಲಿ ಅಥವಾ ಪತ್ರಿಕಾ ರಂಗದಲ್ಲಾಗಲಿ , ವೇದ ಉಪನಿಷತ್ತುಗಳಲ್ಲಿ, ವಾದನ, ಬ್ಯಾಂಕಿoಗ್, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರಾದ ಶತಾವಧಾನಿ ಡಾ. ಆರ್ ಗಣೇಶ್ ಮಾತನಾಡಿ ಯಕ್ಷಗಾನದ ಮಹತ್ವವನ್ನು ವಿವರಿಸಿದರು. ಯಕ್ಷ ವಿಭೂಷಣ, ಕಾರ್ಯಕ್ರಮದ ರೂವಾರಿ ರಾಮಚಂದ್ರ ಹೆಗಡೆ ಕೊಂಡದಕುಳಿ ದಿಕ್ಕೂಚಿ ಭಾಷಣ ಮಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರದ ಕಲಾವಿದರಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನ ಮಾಡಿ ಪ್ರಶಸ್ತಿ, ಸನ್ಮಾನ ಪಡೆದು ಬರುತ್ತಿದ್ದಾರೆ. ಉತ್ತರ ಕನ್ನಡದ್ದೇ ಆದ ಪ್ರಶಸ್ತಿಯನ್ನು ಸ್ಥಾಪಿಸಿ ಬೇರೆಯವರನ್ನು ಸನ್ಮಾನಿಸಿ ಗೌರವಿಸುವ ಕಲ್ಪನೆಯೊಂದಿಗೆ ಜಿಲ್ಲಾ ಯಕ್ಷಶ್ರೀಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಎಂದರು.

ವೇದಿಕೆಯಲ್ಲಿ ಪ್ರಜಾವಾಣಿ ದಿನಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ರವೀಂದ್ರ ಭಟ್ ಐನಕೈ, ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷರಾದ ಸತ್ಯನಾರಾಯಣ ಶೇಟ ಹಾಜರಿದ್ದರು. ಈ ಸಂದರ್ಭದಲ್ಲಿ ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಸನ್ಮಾನಿಸಿ ಬೆಳ್ಳಿ ಖಡ್ಗವನ್ನು ನೀಡಿ ಗೌರವಿಸಲಾಯಿತು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button