Join Our

WhatsApp Group
Important
Trending

ಹೆದ್ದಾರಿ ತಿರುವಿನಲ್ಲಿ ಪಲ್ಟಿಯಾದ ನ್ಯಾನೋ ಕಾರು : ಸ್ಥಳದಲ್ಲೇ ಚಾಲಕ ಸಾವು

ವಧು ಅನ್ವೇಷಣೆಗೆ ಹೊರಟಿದ್ದ ಎನ್ನಲಾದ ಇನ್ನೋರ್ವ ಪ್ರಾಣಪಾಯದಿಂದ ಪಾರು

ಅಂಕೋಲಾ : ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕೊಡಸಣಿಯ ಅಪಾಯಕಾರಿ ಕ್ರಾಸ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ , ಇನ್ನೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಬೆಳಿಗ್ಗೆ ಸಂಭವಿಸಿದೆ.

ಹೊನ್ನಾವರ ಕಡೆಯಿಂದ ಕುಮಟಾ ಮಾರ್ಗವಾಗಿ ಅಂಕೋಲಾ ಕಡೆ ಬರುತ್ತಿದ್ದ ವೇಳೆ ದಾರಿಮಧ್ಯೆ ಗಂಗಾವಳಿ ಸೇತುವೆ ದಾಟಿ ಕೊಡಸಣಿ ಕ್ರಾಸ್ ಬಳಿ ಬರುತ್ತಿದ್ದಂತೆ ಅಪಾಯಕಾರಿ ತಿರುವಿನಲ್ಲಿ ದನ ಅಡ್ಡ ಬಂದಂತಾಗಿ ಇಲ್ಲವೇ ಅದೇಗೋ ಚಾಲಕ ಕಾರ್ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ಬಲ ಬದಿಯ ತಗ್ಗಿನಲ್ಲಿ ಕಾರು ಪಲ್ಟಿ ಪಡಿಸಿಕೊಂಡು ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಸಿಡಿದು ಬಿದ್ದ ಎನ್ನಲಾಗಿದ್ದು ,ಅಪಘಾತದ ತೀವ್ರತೆಗೆ ಮುಖ ಹಣೆ ಮತ್ತಿತರೆಡೆ ಗಂಭೀರ ಗಾಯಗೊಂಡು ತೀವ್ರ ರಕ್ತ-ಸ್ರಾವದೊಂದಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಮೃತ ದುರ್ದೈವಿಯಾಗಿದ್ದಾನೆ . ವಧು ಅನ್ವೇಷಣೆಗಾಗಿ ಅದೇ ಕಾರಿನಲ್ಲಿ ಅಂಕೋಲಾ ಕಡೆ ಬರುತ್ತಿದ್ದ ಎನ್ನಲಾದ ದಿನೇಶ ಎನ್ನುವವನ ತಲೆ ಹಾಗೂ ಇತರೆಡೆ ಗಾಯನೋವುಗಳಾಗಿದ್ದು ಎನ ಎಚ್ ಎ ಐ ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸಿಪಿಐ ಚಂದ್ರಶೇಖರ ಮರಪತಿ , ಪಿ ಎಸ್ ಐ ಗಳಾದ ಜಯಶ್ರೀ ಪ್ರಭಾಕರ , ಸುನೀಲ ಹುಲ್ಲೊಳ್ಳಿ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲಿಸಿ ಕಾನೂನು ಕ್ರಮ ಮುಂದುವರೆಸಿದ್ದಾರೆ. ಎನ್ ಎಚ್ ಎ ಐ ಸುರಕ್ಷಾ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ಮೃತ ದೇಹವನ್ನು ಘಟನಾ ಸ್ಥಳದಿಂದ ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಕನಸಿಗದ್ದೆಯ ಸಾಮಾಜಿಕ ಕಾರ್ಯ ಕರ್ತರಾದ ವಿಜಯಕುಮಾರ ನಾಯ್ಕ , ರತನ ನಾಯ್ಕ ಸಹಕರಿಸಿದರು.

ಅವೈಜ್ಞಾನಿಕ ಹಾಗೂ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದ ಕೊಡಸಣಿ ಕ್ರಾಸ್ ಬಳಿ ಹತ್ತಾರು ಅಪಘಾತಗಳು ಸಾವು ನೋವುಗಳು ಸಂಭವಿಸುತ್ತಲೇ ಇದ್ದು ಕಳೆದ ವಾರ ಇದೇ ಸ್ಥಳದ ಹತ್ತಿಪತ್ತು ಮೀಟರ್ ದೂರದಲ್ಲಿ ಭಾರೀ ವಾಹನ ಒಂದು ಪಲ್ಟಿಯಾಗಿ ಹೆದ್ದಾರಿ ಅಂಚಿನ ಪೆಟ್ಟಿಗೆ ಅಂಗಡಿಯೊಂದಕ್ಕೆ ಗುದ್ಧಿ ಕೊಂಡಿದ್ದನ್ನು ನೆನಪಿಸಿ , ಈ ಭಾಗದಲ್ಲಿ ಸ್ಥಳೀಯರ ಹಾಗೂ ಹೆದ್ದಾರಿ ಸಂಚಾರಿಗಳ ಸುರಕ್ಷತೆಗೆ ಒತ್ತು ನೀಡಲು ಸಂಬಂಧಿತ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ .ನ್ಯಾನೋ ಕಾರು ಅಪಘಾತದ ಘಟನೆ ಕುರಿತಂತೆ ಇನ್ನಷ್ಟು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button