ಅಂಕೋಲಾ: ನೆರಮನೆಯ ಗೇಟ್ ಬಳಿ ಆಟ ಆಡುತ್ತಿದ್ದ ಪುಟಾಣಿ ಬಾಲಕನ ಮೇಲೆ ಆಕಸ್ಮಿಕವಾಗಿ ಕಳಚಿಕೊಂಡ ಗೇಟ್ ಬಿದ್ದು , ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಬಾಲಕ ಮೃತಪಟ್ಟ ಹೃದಯ ವಿಧ್ರಾವಕ ಘಟನೆ ಪಟ್ಟಣದ ಕನಸಗದ್ದೆ ಸಮೀಪದ ಮುಲ್ಲಾ ವಾಡದಲ್ಲಿ ಸಂಭವಿಸಿದೆ.ಅಜಾಮ ಜಾವೇದ್ ಶೇಖ್ (6) ಮೃತ ದುರ್ದೈವಿ ಬಾಲಕ.
ಡಿ 4 ರ ಬುಧವಾರ ಸಂಜೆ ತಮ್ಮ ಮನೆಯ ಪಕ್ಕದ ಬೇರೋಬ್ಬರ ಮನೆ ಅಂಗಳದ ಎದುರಿನ ಗೇಟ್ ಬಳಿ ಆಟ ಆಡುತ್ತಿದ್ದ ಸಂದರ್ಭದಲ್ಲಿ , ಸ್ಲೈಡಿಂಗ್ ಗೇಟ್ ಆಕಸ್ಮಿಕವಾಗಿ ಕಳಚಿ ಬಂದು ಆಟ ಆಡುತ್ತಿದ್ದ ಪುಟಾಣಿ ಬಾಲಕನ ಮೈಮೇಲೆ ಬಿದ್ದ ಪರಿಣಾಮ ತಲೆಯ ಭಾಗಕ್ಕೆ ಬಲವಾಗಿ ಏಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನಿಗೆ ಅಂಕೋಲಾ ಆಸ್ವತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಯ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಅಂಕೋಲಾ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ತಂದಾಗ , ಕನಸಿಗದ್ದೆ ಹಾಗೂ ಸುತ್ತಮುತ್ತಲಿನ ಹಿಂದೂ – ಮುಸ್ಲಿಂ ಬಾಂಧವರು ಸೇರಿ ನೂರಾರು ಜನ ಕಂಬನಿ ಮಿಡಿಯುತ್ತಿರುವ ದೃಶ್ಯ ಕಂಡುಬಂತು . ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನು ಕ್ರಮ ಮುಂದುವರೆಸಿದ್ದಾರೆ. ಪುಟಾಣಿ ಬಾಲಕನನ್ನು ಕಳೆದುಕೊಂಡ ಬಡ ಕುಟುಂಬದಲ್ಲಿ ಆಕೃಂದನ ಮುಗಿಲು ಮುಟ್ಟಿತ್ತು . ಈ ಹಿಂದೆಯೂ ತಾಲೂಕು ಹಾಗೂ ಜಿಲ್ಲೆಯ ಕೆಲವೆಡೆ ಗೇಟ್ ಬಳಿ ಆಟವಾಡುವ ಪುಟಣಿ ಮಕ್ಕಳ ಸಾವು ನೋವಿನ ಘಟನೆ ಸಂಭವಿಸಿದ್ದು , ಪಾಲಕರು – ಪೋಷಕರು ತಮ್ಮ ಮಕ್ಕಳು ಮನೆ ಮುಂದೆ ಆಟ ವಾಡಿಕೊಂಡಿರುತ್ತಾರೆ ಎಂದು ಅಲಕ್ಷ್ಯ ಮಾಡದೇ , ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಲಕ್ಷ್ಯ ವಹಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ