ಕಾವೇರಿದ ವಾತಾವರಣ ನಿರ್ಮಿಸಿದ ಗೂಡಂಗಡಿ ವಿಚಾರ: ರಿಕ್ಷಾ ಯೂನಿಯನ್ ನವರಿಗೆ ಸ್ಥಳದ ಇಕ್ಕಟ್ಟು: ತೆರವು ಕ್ರಮ ಕೈಗೊಳ್ಳಲು ಮುಂದಾದರೆ ಅಧಿಕಾರಿಗಳಿಗೆ ಬಿಕ್ಕಟ್ಟು ?
ಅಂಕೋಲಾ : ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷಾಂತ್ಯದ ದಿನವಾದ ಡಿಸೆಂಬರ್ 31 ರ ಬೆಳಿಗ್ಗೆಯೇ ಗೂಡಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಕಾಲ ಕಾವೇರಿದ ವಾತಾವರಣ ಕಂಡುಬಂದು ,ಆಡಳಿತ ವ್ಯವಸ್ಥೆಯ ಹೊಂದಾಣಿಕೆ ಕೊರತೆ ಎದ್ದು ಕಾಣುವಂತಿತ್ತು. ಪಟ್ಟಣದ ಮುಖ್ಯ ಅಂಚೆ ಕಛೇರಿ ಎದುರು , ಜೈ ಹಿಂದ್ ಹೈ ಸ್ಕೂಲ್ ಎದುರು ಇತ್ತೀಚೆಗೆ ಹೊಸದಾಗಿ ರೆಡಿಮೇಡ್ ಗೂಡಂಗಡಿ ಒಂದನ್ನು ತಂದು ಇಡಲಾಗಿತ್ತು.
ಈ ಸ್ಥಳದ ಆಜು ಬಾಜು ಕಳೆದ ಒಂದೆರಡು ದಶಕಗಳಿಂದ ಸುಮಾರು 20 ಕ್ಕೂ ಹೆಚ್ಚು ಆಟೋ ರಿಕ್ಷಾಗಳನ್ನು ಜೈ ಹಿಂದ್ ಆಟೋರಿಕ್ಷಾ ನಿಲ್ದಾಣದ ಹೆಸರಿನಲ್ಲಿ ನಿಲ್ಲಿಸಿ,ರಿಕ್ಷಾ ಬಾಡಿಗೆಯಿಂದ ಸಂಸಾರದ ಜವಾಬ್ದಾರಿ ನಿಭಾಯಿಸುತ್ತಾ ಬಂದಿರುವ ತಮಗೆ ,ಹೊಸ ಗೂಡಂಗಡಿ ಇಟ್ಟಿರುವುದರಿಂದ ನಮ್ಮ ರಿಕ್ಷಾ ನಿಲ್ದಾಣದ ಬಳಿ ರಿಕ್ಷಾ ನಿಲ್ಲಿಸಲು ಸ್ಥಳದ ಇಕ್ಕಟ್ಟಿನ ಸಮಸ್ಯೆಯಾಗಿದ್ದು , ಇದು ಹೀಗೆ ಮುಂದುವರಿದರೆ , ಸಂಘರ್ಷಕ್ಕೂ ಕಾರಣವಾಗಬಹುದು. ಹೀಗಾಗಿ ಆ ಹೊಸ ಗೂಡಂಗಡಿಯನ್ನು ಸಂಬಂಧಿತ ಆಡಳಿತ ವರ್ಗ ಅಲ್ಲಿಂದ ತೆರವುಗೊಳಿಸುವಂತೆ ,ತಹಶೀಲ್ದಾರ್ ಅಂಕೋಲಾ ,ಸಿಪಿಐ ಅಂಕೋಲಾ ಹಾಗೂ ಪುರಸಭೆ ಅಂಕೋಲಾಕ್ಕೆ ಮನವಿ ಸಲ್ಲಿಸಿದ್ದರು.
ಮನವಿ ಸಲ್ಲಿಸಿ ಕೆಲ ದಿನಗಳಾದರೂ ಹೊಸ ಗೂಡಂಗಡಿ ತೆರವು ಆಗದಿರುವ ಕಾರಣ ಕೇಳಿ ,ಮತ್ತೆ ಸಂಬಂಧಿತ ಅಧಿಕಾರಿಗಳ ಬಳಿ ವಿಳಂಬ ನೀತಿಯ ಕುರಿತು ಪ್ರಶ್ನಿಸಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾನೂನು ರೀತ್ಯ ,ಆಟೋರಿಕ್ಷಾ ನಿಲ್ದಾಣದವರ ದೂರಿನ ಹಿನ್ನೆಲೆಯಲ್ಲಿ ಗೂಡಂಗಡಿ ತೆರವಿಗೆ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ ಈ ವಿಚಾರದಲ್ಲಿ ಒಂದಿಬ್ಬರು ಜನಪ್ರತಿನಿಧಿಗಳು ಮತ್ತು ಕೆಲ ಸಾರ್ವಜನಿಕ ಪ್ರಮುಖರಿಂದಲೂ ಆಕ್ಷೇಪ ಕೇಳಿ ಬಂದಂತಿತ್ತು. ಹೊಟ್ಟೆಪಾಡಿಗಾಗಿ ಗೂಡಂಗಡಿ ಇಟ್ಟುಕೊಂಡಿರುವ ಇವರೊಬ್ಬರನ್ನೇ ಟಾರ್ಗೆಟ್ ಮಾಡಬೇಡಿ ಎಂದು ಕೆಲವರು ವಾದಿಸಿದರೆ ,ಯಾರಿಗೂ ಅನವಶ್ಯಕವಾಗಿ ತೊಂದರೆ ಕೊಡಲಾಗುವುದಿಲ್ಲ. ರಿಕ್ಷಾ ನಿಲ್ದಾಣದವರ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುವುದು ಆಡಳಿತ ವರ್ಗದವರ ಸ್ಪಷ್ಟನೆಯಾಗಿತ್ತು.
ಕೆಲವರ ಸ್ವ ಪ್ರತಿಷ್ಠೆ ಗೋ ಅಥವಾ ಜನಪರ ಕಾಳಜಿಯೋ ತಿಳಿಯದು ಆದರೆ ಗೂಡಂಗಡಿ ವಿಚಾರ ಕೆಲಕಾಲ ಕಾವೇರಿದ ವಾತಾವರಣ ಸೃಷ್ಟಿಸಿದಂತಿತ್ತು. ಈ ವೇಳೆ ಕೆಲವರು ಆವೇಶಭರಿತರಾಗಿ ಬಾಯಿಗೆ ಬಂದಂತೆ ಮಾತನಾಡಲು ಹೊರಟಂತಿತ್ತು. ಅಧ್ಯಕ್ಷರು ಕೆಲ ಸದಸ್ಯರು , ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದರೂ ,ಸಾರ್ವಜನಿಕರೆದುರು ಇವರ ಕೆಲ ನಡೆ ನುಡಿಗಳು ಆಡಳಿತ ವರ್ಗಕ್ಕೆ ಮುಜುಗರ ಮೂಡಿಸುವಂತಿತ್ತು. ನಂತರ ಕೆಲವರು ತಮಷ್ಟಕ್ಕೆ ತಾವು ಸುಮ್ಮನಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಮತ್ತು ಪುರಸಭೆಯ ಜೆಸಿಬಿ ಮತ್ತಿತರ ವಾಹನಗಳು ಮರಳುವುದರೊಂದಿಗೆ ವಾತಾವರಣ ಸ್ವಲ್ಪ ತಿಳಿಯಾಯಿತು.ಮುಂದೆ ಮತ್ತೆ ಈ ಗೂಡಂಗಡಿ ವಿಚಾರ ಏನೆಲ್ಲ ತಿರುಗು ಪಡೆಯಲಿದೆ ಕಾದು ನೋಡಬೇಕಿದೆ.
ನಮ್ಮ ದೂರಿನ ಹಿನ್ನೆಲೆಯಲ್ಲಿಯೇ ಪುರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು , ಈ ಕುರಿತು ಅವರ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ,ವೈಯಕ್ತಿಕವಾಗಿ ಹೊಸದಾಗಿ ಗೂಡಂಗಡಿ ಇಟ್ಟವರ ಬಗ್ಗೆ ನಮಗೆ ಯಾವುದೇ ದ್ವೇಷವಿಲ್ಲ. ಬೇಕಾದರೆ ಅವರ ಜೀವನೋಪಾಯಕ್ಕೆ ಪರ್ಯಾಯ ಸ್ಥಳ ಗುರುತಿಸಿ ಅಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಿ. ನಾವು ಹೊಸ 1 ಗೂಡಂಗಡಿ ಹೊರತಾಗಿ ಇತರ ಯಾವುದೇ ಗೂಡಂಗಡಿಕಾರರ ಬಗ್ಗೆಯೂ ನಮ್ಮ ಮನವಿಯಲ್ಲಿ ಚಕಾರ ವೆತ್ತಿಲ್ಲ. ಹಾಗಾಗಿ ಈ ಗೂಡಂಗಡಿ ವಿಚಾರವನ್ನು ಅವರವರ ಮೂಗಿನ ನೇರಕ್ಕೆ ಅರ್ಥೈಸುವ ಇಲ್ಲವೇ ನಮ್ಮ ಯೂನಿಯನ್ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಗ್ರಹಿಕೆ ಆಗುವಂತೆ ದಯವಿಟ್ಟು ಯಾರೂ ವರ್ತಿಸಬಾರದು. ಆಡಳಿತ ವರ್ಗ ಮನಸ್ಸು ಮಾಡಿದರೆ ಇದೊಂದು ಚಿಕ್ಕ ಪುಟ್ಟ ಸಮಸ್ಯೆಯಾಗಿದ್ದು ,ಅದನ್ನು ಸ್ಥಳೀಯ ಆಡಳಿತವೇ ಇತ್ಯರ್ಥಪಡಿಸಬಹುದು ಎಂಬುದಷ್ಟೇ ನಮ್ಮ ಅಭಿಪ್ರಾಯ ಹೀಗಾಗಿ ನಾವು ಈ ಕುರಿತು ಎಲ್ಲರ ಸಹಕಾರ ಬಯಸುತ್ತೇವೆ , ಇದರ ಹೊರತಾಗಿ ಜನ ರಲ್ಲಿ ತಪ್ಪು ಸಂದೇಶ ಬೀರುವ ಕೆಲ ಯತ್ನಗಳಿಗೆ ನಾವು ಜವಾಬ್ದಾರರಲ್ಲ ಎಂದು ಸ್ಥಳೀಯ ರಿಕ್ಷಾ ಯೂನಿಯನ್ ಪ್ರಮುಖರು ತಿಳಿಸಿದ್ದಾರೆ.
ಈ ಮೊದಲು ಅಂಕೋಲಾ ಗೂಡಂಗಡಿಗಳ ಮಹಾನಗರ ಎಂದೇ ಬಿಂಬಿತವಾಗುವಷ್ಟರ ಮಟ್ಟಿಗೆ ಸ್ಥಳೀಯರು ಚಿಕ್ಕ ಪುಟ್ಟ ಉದ್ಯೋಗ ವ್ಯಾಪಾರ ವಹಿವಾಟು ನಡೆಸಿಕೊಂಡಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಹಲವು ಗೂಡಂಗಡಿಗಳು ತೆರವುಗೊಂಡು ,ಇನ್ನು ಕೆಲವು ತಾವೇ ಮುಚ್ಚಿಕೊಂಡಿದ್ದು ಇತಿಹಾಸ. ಆ ಬಳಿಕ ತಾಲೂಕಿನ ಹೊರತಾಗಿ ಜಿಲ್ಲೆಯ ಪರ ಜಿಲ್ಲೆಯ ಕೆಲವರು ,ಇಲ್ಲಿ ನಿಧಾನವಾಗಿ ಬೇರೂರುತ್ತಾ , ಸ್ಥಳಿಯರನ್ನು ಬದಿಗೆ ಸರಿಸಿದಂತೆ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ಹಾಗಂತ ಅದು ತಪ್ಪು ಎನ್ನುವಂತಿಲ್ಲ ಎಲ್ಲರಿಗೂ ಜೀವಿಸುವ ಹಕ್ಕಿದೆ . ಆದರೆ ಇಲ್ಲಿ ಬರ ಬರುತ್ತಾ ಹೊಟ್ಟೆಪಾಡಿಗಾಗಿ ಗೂಡಂಗಡಿ ನಡೆಸುವವರ ನಡುವೆ , ಗೂಡಂಗಡಿ ಸ್ಥಳ ಇಲ್ಲವೇ ಗೂಡಂಗಡಿಯನ್ನೇ ಇತರರಿಗೆ ಅರಿವಿಲ್ಲದಂತೆ ಮಾಸಿಕ ,ವಾರ್ಷಿಕ , ಅಜೀವ ಪರ್ಯಂತ ಬಾಡಿಗೆ ರೂಪದಲ್ಲಿ ಮೊತ್ತ ನಿಗದಿಪಡಿಸಿ ಒಳ ಒಪ್ಪಂದ ಮಾಡಿಕೊಂಡು ,ಸಕತ್ತಾಗಿ ತಿಂದು ತೇಗುತ್ತಿರುವವರೂ ಇದ್ದಾರೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲದೇ ಈ ಹಿಂದೆ ಕೆಲ ಹಾಲಿ ಹಾಗೂ ಮಾಜಿ ಜನ ಪ್ರತಿನಿಧಿಗಳು ,ಅಧಿಕಾರಿ ವರ್ಗ ತಮ್ಮ ಆಪ್ತರಿಗೆ ,ಇಲ್ಲವೇ ತಮಗೆ ಬೇಕಾದುದನ್ನು ತಂದು ಕೊಡುವವರಿಗೆ ,ತಮ್ಮ ಪ್ರಭಾವ ಬಳಸಿ , ಅವರು ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಟ್ಟಿರಬಹುದು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಂತಿದೆ. ತಲೆ ಮೇಲೆ ಬುಟ್ಟಿ ಹೊತ್ತು ಒಪ್ಪತ್ತಿನ ಊಟಕ್ಕಾಗಿ ತರಕಾರಿ – ಸೊಪ್ಪು , ಹಣ್ಣು ಮತ್ತಿತರ ವಸ್ತುಗಳನ್ನು ಮಾರುವ ಬಡ ಹಾಲಕ್ಕಿ ಮಹಿಳೆಯರು ಸೇರಿದಂತೆ ಇತರರಿಗೆ ,ಕುಡಿಯುವ ನೀರು ,ಶೌಚಾಲಯ ,ನೆರಳು ಮತ್ತಿತರ ಪೂರಕ ವ್ಯವಸ್ಥೆ ಕಲ್ಪಿಸಿ ಜನಪರ ಕಾಳಜಿ ತೋರಬೇಕಿದ್ದವರು ,ದೊಡ್ಡ ದೊಡ್ಡವರೆನಿಸಿಕೊಂಡ ಕೆಲ ಅಂಗಡಿಯವರು ಫುಟ್ಪಾತ್ ಅತಿಕ್ರಮಿಸಿ ಬೇಕಾಬಿಟ್ಟಿ ವ್ಯಾಪಾರ ವಹಿವಾಟು ನಡೆಸಿದರೂ ,ಒಂದೇ ಗೂಡಂಗಡಿ ಹೆಸರಲ್ಲಿ 10-20 ಪೂಟ ಉದ್ದ ಅಗಲಕ್ಕೆ ಜಾಗ ಅತಿಕ್ರಮಿಸಿದರು ಕಂಡು ಕಾಣದಂತೆ ಸುಮ್ಮನಿರಬಹುದಾದ ಕಾರಣಗಳೇನಿರಬಹುದು? ಹಾಗಾದರೆ ದೊಡ್ಡವರಿಗೊಂದು – ಸಣ್ಣವರಿಗೊಂದು ನ್ಯಾಯವೇ ? ಮಾರ್ಚ್ ಮುಗಿದ ಬಳಿಕ ಬೀದಿ ವ್ಯಾಪಾರಕ್ಕೆ ಲೈಸೆನ್ಸ್ ನೀಡುವ ಪೂರ್ವ ಅಂದರೆ ಬರುವ ಹೊಸ ಆರ್ಥಿಕ ವರ್ಷದಿಂದಲಾದರೂ ಸಂಚಾರ ಮತ್ತು ಸುರಕ್ಷತೆಗೆ ತೊಡಕಾಗದಂತೆ ,ಅಂಕೋಲಾದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ಕೆಲವೆಡೆ ಸರಿಯಾದ ಜಾಗ ಗುರುತಿಸಿ ಅವರ ಜೀವನಕ್ಕೂ ಅನುಕೂಲ ಕಲ್ಪಿಸುವುದರೊಂದಿಗೆ ,ಪಟ್ಟಣದ ಅಂದ ಚಂದ ಕಾಪಾಡಿಕೊಳ್ಳಲು ಪೂರಕ ವ್ಯವಸ್ಥೆ ನಿರ್ಮಿಸಿ , ರಸ್ತೆ ತಿರುವು ಮತ್ತಿತರೆಡೆ ಸಂಚಾರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ ,ಪಾರ್ಕಿಂಗ್ ಗಾಗಿಯೂ ಸ್ಥಳ ಕಾಯ್ದಿರಿಸಿ , ಸ್ಥಳೀಯ ಪುರಸಭೆ ಮತ್ತು ಪೊಲೀಸ್ ಮತ್ತಿತರ ಸಂಬಂಧಿತ ಇಲಾಖೆಗಳು ಕ್ರಮ ಕೈಗೊಳ್ಳುವರೇ ಕಾದುನೋಡಬೇಕಿದೆ. ಅನಿವಾರ್ಯವಾದರೆ ಕೆಲ ಅತಿಕ್ರಮಣಗಳನ್ನು ತೆರವುಗೊಳಿಸಿ ದಿಟ್ಟತನ ಪ್ರದರ್ಶಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ