ಹಿರಿಯ ನಾಗರಿಕ ಗೋವಿಂದ್ರಾಯ ಕಾಮತ ವಿಧಿವಶ : ಯಕ್ಷಗಾನ ಕಲಾವಿದ, ಪಾಕ ಪ್ರವೀಣ , ಗಾಂಧೀ ಟೋಪಿಧಾರಿ ಇನ್ನಿಲ್ಲ

ಅಂಕೋಲಾ :ಬೆಳಂಬಾರದ ಹಿರಿಯ ನಾಗರಿಕರಾಗಿದ್ದ ಗೋವಿಂದ್ರಾಯ ವೈಕುಂಠ ಕಾಮತ ( 92 ) ಮಂಗಳವಾರ ಬೆಳಗಿನ ಜಾವ , ಬಾಸಗೋಡ – ಬೆಳಂಬಾರದ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ 1932 ರಲ್ಲಿ ಜನಿಸಿದ್ದ ಇವರು , ಸುತ್ತ ಮುತ್ತಲ ಹಳ್ಳಿಗಳ ಪರಿಸರ ಮತ್ತು ಸ್ವಾತಂತ್ರ್ಯ ಚಳುವಳಿಯಿಂದ ಪ್ರೇರೇಪಣೆಗೊಂಡು ಜೀವಿತದ ಬಹುಕಾಲ ಗಾಂಧೀ ಟೋಪಿ ಧರಿಸಿ ಗಮನ ಸೆಳೆದಿದ್ದರು.

ಪಾಕ ಪ್ರವೀಣರಾಗಿದ್ದ ಇವರು ,ಊರ ಹಾಗೂ ಸುತ್ತಮುತ್ತಲ ಸಾವಿರಾರು ಕುಟುಂಬಗಳ ಮಂಗಲಕಾರ್ಯ , ಧಾರ್ಮಿಕ ಮತ್ತಿತರ ಕಾರ್ಯಕ್ರಮಗಳಿಗೆ ಲಾಡು ಮತ್ತಿತರ ಸಿಹಿ ತಿನಿಸು ತಯಾರಿಸಿ ಕೊಡುತ್ತಿದ್ದರು. ಹೋಟೆಲ್ ಉದ್ಯಮದ ಮೂಲಕವೂ ಎಲ್ಲರಿಗೂ ಚಿರಪರಿಚಿತರಾಗಿದ್ದ ಇವರು ತನ್ನ ಮಗ ದತ್ತು ಕಾಮತ ಅವರೂ ಸಹ ಇಂದು ಉತ್ತಮ ಬಾಣಸಿಗನಾಗುವಂತೆ ಮಾರ್ಗದರ್ಶನ ಮಾಡಿದ್ದರು.ಯಕ್ಷಗಾನ ಕಲಾವಿದರಾಗಿ , ಯಕ್ಷ ಪ್ರೇಮಿಯೂ ಆಗಿದ್ದ ಗೋವಿಂದ್ರಾಯ ಕಾಮತ್ , ತಮ್ಮ ಸರಳ ನಡೆ ನುಡಿ ಹಾಗೂ ಆದರ್ಶ ಜೀವನ ಶೈಲಿಯಿಂದ ಎಲ್ಲರಿಗೂ ಮಾದರಿಯಾಗಿ , ಸುತ್ತಮುತ್ತಲಿನ ಹತ್ತಾರು ಸಮಾಜಗಳ ಜನರ ಪ್ರೀತಿ ವಿಶ್ವಾಸ ಗಳಿಸಿ ಬಾಳಿ ಬದುಕಿದ್ದರು. ಇವರ ನಿಧನದ ವಾರ್ತೆ ಕೇಳಿ ಹಲವು ಗಣ್ಯರು ,ಕುಟುಂಬದ ಆಪ್ತರು ,ಹಿತೈಷಿಗಳು , ಬಂಧು ಬಾಂಧವರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ,ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಮೃತರ ಅಂತ್ಯಕ್ರಿಯೆಯನ್ನು ಸ್ವಗೃಹದ ಹಿಂಬದಿ ಆವರಣದಲ್ಲಿ ನೆರವೇರಿಸಲಾಯಿತು. ಮೃತರು ಪತ್ನಿ ಗಂಗಾಬಾಯಿ , ಇಬ್ಬರು ಗಂಡು , ಇಬ್ಬರು ಹೆಣ್ಣು ಮಕ್ಕಳು ,ಸೊಸೆಯಂದಿರು ಅಳಿಯಂದಿರು ,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗ ತೊರೆದಿದ್ದಾರೆ. ಬಾಸ ಗೋಡ , ಬೆಳಂಬಾರ ಸೇರಿದಂತೆ ಸುತ್ತಮುತ್ತಲ ಊರಿನ ಹಾಗೂ ತಾಲೂಕು ಜಿಲ್ಲೆಯ ಕೆಲ ಪ್ರಮುಖರು ಗೋವಿಂದ್ರಾಯ ಕಾಮತ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version