ಹ್ಯಾಕರ್ ಗಳ ಪಾಲಾಯಿತೇ ಬ್ಯಾಂಕಿಂಗ್ ವ್ಯವಹಾರ ?ಅಂಕೋಲಾ ಅರ್ಬನ್ ಬ್ಯಾಂಕ್ ಖಾತೆಗೆ ಬಿತ್ತೇ ಕನ್ನ ?

ಆರಂಭದಲ್ಲಿಯೇ ನೂತನ ಆಡಳಿತ ಮಂಡಳಿಗೆ ತಲೆನೋವಾಗಿದ್ದೇನು ?

ಅಂಕೋಲಾ: ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು ದೂರದಲ್ಲೆಲ್ಲೋ ಕುಳಿತು ತಮ್ಮ ಕರಾಮತ್ತು ತೋರುವ ಖದೀಮರು,ಗ್ರಾಹಕರ ಖಾತೆಗೆ ಕನ್ನ ಹಾಕುತ್ತಿದ್ದರು. ಅದರ ಮುಂದುವರಿದ ಭಾಗವೋ ಎಂಬಂತೆ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ವಹಿವಾಟಿಗೆ ಧಕ್ಕೆ ತರುವಂತೆ ಖಾತೆಗಳನ್ನು ಅದೇಗೋ ಹ್ಯಾಕ್ ಮಾಡಿ ,ಲಕ್ಷಾಂತರ ಕೋಟ್ಯಾಂತರ ರೂಪಾಯಿ ಎಗರಿಸಿ ವಂಚನೆ ನಡೆಸುತ್ತಿದ್ದಾರೆ. ತಾಲೂಕಿನ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಖಾತೆಯಿಂದಲೂ ಇದೇ ರೀತಿ ಹ್ಯಾಂಕಿಂಗ್ ಮಾಡಿ ರುವ ಸಾಧ್ಯತೆ ಕೇಳಿ ಬಂದಿದೆ.

ಅಂಕೋಲಾದಲ್ಲಿರುವ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಈ ಆಕಸ್ಮಿಕ ವಂಚನೆ ಘಟಿಸಿದ್ದು , ಖಾತೆ ಹೊಂದಿರುವ ಒರ್ವ ಗ್ರಾಹಕರ 5 ಲಕ್ಷ, ಗ್ಯಾಸ್ ಸೆಂಟರ್ ನ ಒರ್ವ ರ ಖಾತೆಗೆ ಸಂಬಂಧಿಸಿದ 5 ಲಕ್ಷ 46 ಸಾವಿರ ಮತ್ತು 6 ಲಕ್ಷ 60 ಸಾವಿರ , ಬೇರೋಬ್ಬರ ಖಾತೆಗೆ ಸಂಬಂಧಿಸಿದ 16 ಲಕ್ಷ 36 ಸಾವಿರದ 895 ರೂ ಗಳನ್ನು ಆರ್ ಟಿ ಜಿ ಎಸ್ ವ್ಯವಸ್ಥೆ ಮೂಲಕ ಅವರು ಸಂದಾಯ ಮಾಡಬೇಕಾಗಿದ್ದ ಖಾತೆಗಳಿಗೆ ಹಣ ಜಮಾ ಮಾಡಬೇಕಿತ್ತಾದರೂ , ತಾಂತ್ರಿಕ ದೋಷ ಇಲ್ಲವೇ ಹ್ಯಾಂಕಿಂಗ್ ಸಮಸ್ಯೆಯಿಂದ ಆ ಹಣ ಯಾರ ನೈಜ ಖಾತೆಗಳಿಗೆ ಜಮಾ ಆಗಬೇಕಿತ್ತೋ ಅವರಿಗೆ ಜಮಾ ಆಗದೇ , ಸೈಬರ್ ವಂಚಕರ ಪಾಲಾಗಿದೆ ಎನ್ನಲಾಗಿದೆ. ಹೀಗಾಗಿ ಈ ಮೇಲಿನ ಎಲ್ಲ ಖಾತೆಗಳಿಗೆ ಸಂಬಧಿಸಿದ ಒಟ್ಟೂ ಸುಮಾರು33 ಲಕ್ಷ 42 ಸಾವಿರದ 895 ರೂಪಾಯಿ ಹಣ ವಂಚನೆಯಾಗಿದ್ದು , ಸೈಬರ್ ವಂಚಕರು ಜನವರಿ 24 ರಿಂದ 27 ರ ನಡುವೆ ಈ ವಂಚನೆ ಕೃತ್ಯ ನಡೆಸಿರುವ ಸಾಧ್ಯತೆ ಕೇಳಿ ಬಂದಿದ್ದು ,ಈ ಕುರಿತು ಬ್ಯಾಂಕಿನವರು ಕಾರವಾರದ ಸೈಬರ್ ಕ್ರೈಂ ಪೊಲೀಸ್ (ಸಿಇಎನ್ ) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು ಈ ಕುರಿತು ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಳು ತಿಳಿದು ಬರಬೇಕಾಗಿದೆ.

ಯಾವುದೇ ರೀತಿಯ ಸೈಬರ್ ವಂಚನೆಯಾದಾಗ ತಕ್ಷಣವೇ 1930 ಗೆ ಕರೆ ಮಾಡಿ ದೂರು ದಾಖಲಿಸುವುದು ಇಲ್ಲವೇ 112 ತುರ್ತು ಸಹಾಯವಾಣಿಗೆ ಕರೆ ಮಾಡುವುದು , ಇಲ್ಲವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸಿಇಎನ್ ಠಾಣೆಗೆ ಕರೆಮಾಡಿ ,24 ಘಂಟೆ ಒಳಗೆ ದೂರು ದಾಖಲಿಸಿದಲ್ಲಿ CEN ಪೊಲೀಸ್ ಠಾಣೆಯವರು ವಂಚಕರ ಅಕೌಂಟನ್ನು ತುರ್ತಾಗಿ ಬ್ಯಾಂಕಿನ ಮುಖಾಂತರ ಫ್ರೀಜ್ (ಸ್ಥಗಿತ )ಮಾಡಿ,ಲಭ್ಯವಿರುವ ಹಣವನ್ನು ಪೂರ್ತಿಯಾಗಿ ಇಲ್ಲವೇ ಭಾಗಶಃ ಪುನಃ ಪಿರ್ಯಾದಿಯವರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನಲಾಗಿದೆ.

ಆದರೆ ಈ ಪ್ರಕರಣದಲ್ಲಿ ಅರಿವಿದ್ದೋ ಇಲ್ಲದೆಯೋ ಬ್ಯಾಂಕಿನವರು ವಿಳಂಬ ಮಾಡಿದರೆ? ಎಂಬ ಪ್ರಶ್ನೆಯ ನಡುವೆಯೇ 24 ಜನವರಿಯಂದೇ ಬ್ಯಾಂಕಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು ,ಕಾಕ ತಾಳಿಯವೋ ಏನೋ ಎಂಬಂತೆ ಅದೇ ಸಮಯಕ್ಕೆ ಸೈಬರ್ ವಂಚನೆ ನಡೆದು ,ಹೊಸ ಆಡಳಿತ ಮಂಡಳಿಗೆ ಆರಂಭದಲ್ಲಿಯೇ ತಲೆ ನೋವಾಯಿತೇ ? ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುವಂತಾಗಿದೆ.

ಒಟ್ಟಿನಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದ್ದ ಸೈಬರ್ ವಂಚನೆ ಪ್ರಕರಣಗಳು ಈ ಹಿಂದೆ ಹೆಚ್ಚಾಗಿ ವೈಯಕ್ತಿಕ ಖಾತೆಗೆ ಕನ್ನ ಹಾಕುತ್ತಿದ್ದರೂ , ಈಗ ಅದಕ್ಕಿಂತ ಅಪಾಯಕಾರಿ ಅನ್ನುವಂತೆ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹ್ಯಾಕ್ ಮಾಡಿದರೆ ಮುಂದೇನು ಎನ್ನುವ ಆತಂಕ ಹಲವರನ್ನು ಕಾಡಲಾರಂಬಿಸಿದಂತಿದೆ. ಆದರೂ ಕಾರವಾರದಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸೇರಿದಂತೆ ಸಿಇಎನ್ ಠಾಣಾ ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ,ಒಂದೊಮ್ಮೆ ಯಾರಾದರೂ ವಂಚನೆಗೆ ಒಳಪಟ್ಟರೆ ಕೂಡಲೇ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸುವುದು ಮತ್ತು ಹತ್ತಿರದ CEN ಠಾಣೆಗೆ ಮಾಹಿತಿ ನೀಡಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version