ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಲೇ ಎಚ್ಚೆತ್ತುಕೊಂಡ ವ್ಯವಸ್ಥೆ : ತಹಶೀಲ್ದಾರ್ ಕಾರ್ಯಾಲಯದಲ್ಲಿ ಮತ್ತೆ ಆರಂಭವಾದ ಆಧಾರ್ ಕಾರ್ಡ್ ನವೀಕರಣ ಮತ್ತು ತಿದ್ದುಪಡಿ ವ್ಯವಸ್ಥೆ
ಜನಸಾಮಾನ್ಯರಿಗೆ ಕೇಂದ್ರ ಸ್ಥಾನದಲ್ಲಿ ಅನುಕೂಲಕರ ಸೇವೆ ಮತ್ತೆ ಲಭ್ಯ
ಅಂಕೋಲಾ: ಆಧಾರ ಕಾರ್ಡ್ ಎಂದರೆ ಇದೊಂದು ಅತ್ಯಮೂಲ್ಯ ದಾಖಲೆಯಾಗಿದ್ದು ,ದಿನನಿತ್ಯದ ನಾನಾ ವ್ಯವಹಾರಕ್ಕೆ, ಆರೋಗ್ಯ , ಶಿಕ್ಷಣ , ನೌಕರಿ ,ಸರ್ಕಾರಿ ಸಹಾಯ ಸೌಲಭ್ಯ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಮೂಲ ಗುರುತಿನ ಚೀಟಿಯನ್ನಾಗಿ ಪರಿಗಣಿಸಲಾಗುತ್ತಿದೆ. ಆದರೆ ತಾಲೂಕಿನ ಕೇಂದ್ರ ಸ್ಥಳವಾದ ತಹಶೀಲ್ಧಾರ್ ಕಚೇರಿ ಆವರಣದಲ್ಲಿ ಕಳೆದ ಕೆಲ ತಿಂಗಳಿಂದ ,ಆಧಾರ್ ನವೀಕರಣ ಮತ್ತು ತಿದ್ದುಪಡಿ ವ್ಯವಸ್ಥೆ ಇಲ್ಲದೇ ,ಪುಟ್ಟ ಪುಟ್ಟ ಮಕ್ಕಳು ,ವೃದ್ಧರು ಮಹಿಳೆಯರು ಸೇರಿದಂತೆ ಹಲವರು ಪರಿತಪಿಸುವಂತಾಗಿತ್ತು. ತುರ್ತು ಸಂದರ್ಭಗಳಲ್ಲಿ ಅತ್ಯವಶ್ಯವಿದ್ದರೆ ಕಾರವಾರ ಜಿಲ್ಲಾ ಕೇಂದ್ರಕ್ಕೆ ಹೋಗಿಯೇ ನವೀಕರಣ ಮತ್ತು ತಿದ್ದುಪಡಿ ಮಾಡಿಸಬೇಕಾದ ಅನಿವಾರ್ಯತೆಯಿಂದ ,ಅಲ್ಲಿ ಹೋಗಿ ಬರುವವರ ಹಣ ಮತ್ತು ಸಮಯ ವ್ಯರ್ಥವಾಗುತ್ತಿತ್ತು.ಆದರೆ ಅದಾವುದನ್ನು ಗಣನೆಗೆ ತೆಗೆದುಕೊಳ್ಳದ ತಾಲೂಕ ಆಡಳಿತದ ಜಿಡ್ಡು ವ್ಯವಸ್ಥೆ ವಿರುದ್ಧ ನಾಗರಿಕರು ಅಸಮಾಧಾನ ಪಡುವಂತಾಗಿತ್ತು.
ಕಳೆದ ಕೆಲವು ತಿಂಗಳುಗಳಿಂದ ಆಧಾರ್ ಕಾರ್ಡ್ ಸಂಬಂದಿತ ಸೇವೆಗಳು ತಾಲೂಕಿನಲ್ಲಿ ಸರಿಯಾಗಿ ಲಭ್ಯವಿಲ್ಲದ ಕಾರಣ ತಾಲೂಕಿನ ಜನತೆ ಕಾರವಾರ ಮತ್ತಿತರ ಕಡೆ ಓಡಾಡುವಂತಾಗಿತ್ತು. ಬೇರೆ ಕಾರ್ಯದ ನಿಮಿತ್ತ ಇತ್ತೀಚೆಗೆ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದ ಶಾಸಕ ಸತೀಶ ಸೈಲ್ ಮತ್ತು ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ ಅವರಿಗೆ ಸಾರ್ವಜನಿಕರು ಈ ಕುರಿತು ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿರುವ ಶಾಸಕರು ಮತ್ತು ಜಿಲ್ಲಾಧಿಕಾರಿಗಳು: ಈ ಕುರಿತಂತೆ ಸಂಬಧಿತ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು. ಇದರಿಂದ ಅಂಕೋಲಾದ ಹೃದಯ ಭಾಗದಲ್ಲಿ ಆಧಾರ್ ಕಾರ್ಡ್ ಸಂಬಂದಿತ ಸೇವೆ ಮತ್ತೆ ಸಿಗುವಂತೆ ವ್ಯವಸ್ಥೆ ಕಲ್ಪಿಸಿದ್ದು ತಹಶೀಲ್ಧಾರರ ಕಾರ್ಯಾಲಯದ ಕೆಸ್ಪಾನ್ ಆವರಣದ ಬಳಿ ಆಧಾರ್ ಸಂಬಂಧಿಸಿದ ಸೇವೆಗಳನ್ನು ಪುನಃ ಆರಂಭಿಸಲಾಗಿದೆ.ಇದರಿಂದ ಗ್ರಾಮೀಣ ಭಾಗದ ಜನತೆ ಸೇರಿದಂತೆ ನೂರಾರು ಜನ ಪ್ರತಿದಿನ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಿದ್ದು, ತಾಲೂಕಿನ ಜನತೆಗೆ ಆಗುತ್ತಿರುವ ಅನಾನುಕೂಲತೆಗೆ ಪರಿಹಾರ ಕಲ್ಪಿಸಿದ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.
ಈ ವ್ಯವಸ್ಥೆ ಕೇಂದ್ರ ಸ್ಥಾನದಲ್ಲಿ ನೆಲೆ ಗೊಳ್ಳುವುದರೊಂದಿಗೆ ,ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ಸ್ಥಳಗಳಲ್ಲಿಯೂ ಆಗಾಗ ವಿಶೇಷ ಕ್ಯಾಂಪ್ ಮಾದರಿಯಲ್ಲಿ ತೆರೆದುಕೊಂಡು ನಿರಂತರ ಸೇವೆ ಸಲ್ಲಿಸುವಂತಾಗಲಿ ಎನ್ನುವುದು ತಾಲೂಕಿನ ಪ್ರಜ್ಞಾವಂತ ಜನತೆಯ ಆಶಯವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ