ಅಂಕೋಲಾ: ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಮನೆಯ ಮೇಲ್ಛಾವಣಿ, ಹಾಗೂ ಮಲೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿ , ಬಹು ಲಕ್ಷ ರೂಪಾಯಿ ಹಾನಿ ಸಂಭವಿಸಿದೆ. ಪಟ್ಟಣ ವ್ಯಾಪ್ತಿಯ ಕಾಕರಮಠ ಬಿಲಾಲ ಮಸೀದಿ ಹಿಂಬಾಗದ ಮನೆಯಲ್ಲಿ ಈ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ. ನಿವೃತ್ತ ಶಿಕ್ಷಕ ರಫೀಕ್ ಶೇಖ್ ಅವರ ಮನೆಯೇ ಬೆಂಕಿ ಅವಘಡಕ್ಕೆ ಸಿಲುಕಿ ಸುಟ್ಟು ಕರಕಲಾದ ಮನೆಯಾಗಿದೆ. ಪಟ್ಟಣದ ಜೈಹಿಂದ್ ಹೈಸ್ಕೂಲ್ ಪಕ್ಕ ನಡೆದ ಉರೂಸ್ ಕಾರ್ಯಕ್ರಮಕ್ಕೆ ಹೋಗಿದ್ದ ಮನೆಯವರೆಲ್ಲರೂ ತಡರಾತ್ರಿ ಮನೆಗೆ ವಾಪಸ್ಸಾಗಿ ನಂತರ ಮನೆಯಲ್ಲಿ ಮಲಗಿದ್ದರು.
ಈ ವೇಳೆ ಆಕಸ್ಮಿಕವಾಗಿ ಅದಾವುದೋ ಕಾರಣದಿಂದ ಮನೆಯ ಒಂದು ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎನ್ನಲಾಗಿದ್ದು ,ಏನೋ ಶಬ್ದ ಬಂದಂತಾಗಿ ಮನೆಯಲ್ಲಿ ಮಲಗಿದ್ದವರು ಎತ್ತೆಚ್ಚು ಕೊಂಡು ನೋಡುವಷ್ಟರಲ್ಲಿ ಬೆಂಕಿ ಧಗಧಗನೆ ಹೊತ್ತಿ ಉರಿಯಲಾರಂಭಿಸಿತ್ತು. ಧಾರ್ಮಿಕ ಹಬ್ಬದಾಚರಣೆ ನಿಮಿತ್ತ ಅಕ್ಕ ಪಕ್ಕದ ಮನೆಯವರೂ ಮನೆಗೆ ಬೀಗ ಹಾಕಿ ತೆರಳಿದ್ದರಿಂದ , ಆಕಸ್ಮಿಕ ಬೆಂಕಿ ಅವಘಡದ ವೇಳೆ ರಫೀಖ್ ಶೇಖ್ ಮನೆಯವರಿಗೆ ತತಕ್ಷಣಕ್ಕೆ ಏನು ಮಾಡಬೇಕೆಂದು ದಿಕ್ಕು ತೋಚದೆ ಕ್ಷಣ ಕಾಲ ಕಂಗಾಲಾಗಿದ್ದಾರೆ.
ಆದರೂ ಧೈರ್ಯ ಮಾಡಿ ಅಡುಗೆ ಕೋಣೆ ಒಳಗೆ ಪ್ರವೇಶಿಸಿದ ನಿವೃತ್ತ ಶಿಕ್ಷಕ ರಫೀಕ್ ಶೇಖ್ , ಗ್ಯಾಸ್ ಸಿಲೆಂಡರ್ ನ್ನು ಹೊರಗೆ ಎಳೆದು ತಂದು ಸಂಭವನೀಯ ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಮನೆಯಲ್ಲಿದ್ದ ವಸ್ತುಗಳು , ಕಟ್ಟಿಗೆ ಮೇಲ್ಚಾವಣಿ ಸಹಿತ ಮನೆಯ ಬಹುತೇಕ ಭಾಗಕ್ಕೆ ಬೆಂಕಿ ಹೊತ್ತಿ ಉರಿದಿದ್ದರಿಂದ ಬೆಂಕಿಯ ಶಾಖಕ್ಕೆ ಹಂಚು ಸಿಡಿಯಲಾರಂಭಿಸಿದೆ. ಬೆಂಕಿ ಬಿದ್ದ ಸುದ್ದಿ ತಲುಪಿ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಬಂದಿದ್ದಾರೆ. ಇಕ್ಕಟ್ಟಾದ ಸ್ಥಳದಲ್ಲಿ ಅಗ್ನಿಶಮನ ವಾಹನ ಸಾಗಿಸಲು ಸ್ಥಳಾವಕಾಶ ಇಲ್ಲದೇ , ಅಂಬಾರಕೊಡ್ಲ ಮುಖ್ಯ ರಸ್ತೆಯಲ್ಲೆ ವಾಹನ ನಿಲ್ಲಿಸಿ , ನಂತರ ಅಗ್ನಿ ಶಮನಕ್ಕೆ ನೀರಿನ ಪೈಪ್ ಜೋಡಣೆ ಮಾಡಿಕೊಂಡು ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ನಡು ರಾತ್ರಿ ಸಮಯದಲ್ಲಿ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದಾರೆ. ಸರಿ ಸುಮಾರು 25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಮನೆಯವರು ಅಂದಾಜಿಸಿದಂತಿದೆ. ಬೆಂಕಿ ಅವಘಡದ ಸಂದರ್ಭದಲ್ಲಿ ಹೆಚ್ಚಿನ ಹಾನಿ ತಪ್ಪಿಸುವ ಯತ್ನದಲ್ಲಿ ನಿವೃತ್ತ ಶಿಕ್ಷಕ ಹಾಗೂ ಮನೆಯ ಯಜಮಾನನಾಗಿರುವ ರಫೀಕ್ ಶೇಖ್ ಅವರ ಕೈ ಮತ್ತು ಬೆನ್ನಿನ ಭಾಗಗಳಿಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದು ಮನೆ ಮಂದಿ ಹೊರಗೆ ಬಂದಿದ್ದರಿಂದ ಸಂಭವನೀಯ ಹೆಚ್ಚಿನ ಅಪಾಯ ತಪ್ಪಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ