
ಅಂಕೋಲಾ: ವಾಣಿಜ್ಯ ಬಂದರು ಎಂಬ ಬಂದರು ಭೂತದ ಭೀತಿ ಮತ್ತೆ ಮತ್ತೆ ಸ್ಥಳೀಯರನ್ನು ಕಾಡಲಾರಂಭಿಸಿದ್ದು , ಹೋದೆಯಾ ಪಿಶಾಚಿ ಎಂದರೆ ಮತ್ತೆ ಬಂದೆ ಗವಾಕ್ಷೀಲಿ ಎಂಬಂತೆ ಆತಂಕ ಸೃಷ್ಟಿಮಾಡಿದಂತಿದೆ. ಹೀಗಾಗಿಯೇ ನಿಷೇದಾಜ್ಮೆಯ ನಡುವೆಯೂ ಮಹಿಳೆಯರು ಸೇರಿ ಹಲವರು ಸಮುದ್ರ ನೀರಿಗೆ ಧುಮಿಕಿ ಬಂದರು ಯೋಜನೆ ವಿರುದ್ಧ ತಮ್ಮ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದರು ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎಂಬ ಮಾತೊಂದಿತ್ತು. ಅದೇ ಅನುಭವ ತಾಲೂಕಿನ ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯವರಿಗೆ ಆದಂತಿದೆ.
4000 ಕೋಟಿ ರೂ ಗಳಿಗೂ ಹೆಚ್ಚಿನ ಬಂಡವಾಳ ಹೂಡಿಕೆಯೊಂದಿಗೆ ಉದ್ದೇಶಿತ ಖಾಸಗಿ ಸಹಭಾಗಿತ್ವದ ಗ್ರೀನ್ ಫೀಲ್ಡ್ ಬೃಹತ್ತ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ತೀವ್ರ ವಾಗಿ ವಿರೋಧಿಸಿದ್ದ ಸ್ಥಳೀಯ ಮೀನುಗಾರರು ಮತ್ತಿತರರು, ವಿವಿಧ ರೀತಿಯ ಪ್ರತಿಭಟನೆ ಹಮ್ಮಿಕೊಂಡು, ಸಮುದ್ರದಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದ ಯಂತ್ರಗಳನ್ನು ಮತ್ತು ಟಗ್ ನ್ನು ಸ್ಥಳದಿಂದ ತೆರವುಗೊಳಿಸಲು ಪಟ್ಟು ಹಿಡಿದು ಕಳೆದ ಕೆಲ ದಿನಗಳ ಹಿಂದೆ ತಮ್ಮ ಸಂಘಟಿತ ಹೋರಾಟದ ಮೂಲಕ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದರು.
ಆದರೆ ಅದಾದ ಕೆಲ ದಿನಗಳಲ್ಲಿಯೇ ಇವರ ಒಗ್ಗಟ್ಟಿಗೆ ಮತ್ತೊಮ್ಮೆ ಪರೀಕ್ಷೆ ಒಡ್ಡಿದಂತಿದ್ದು , ಸ್ಥಳೀಯ ಬಹುತೇಕ ಜನರಿಗೆ ಬೇಡವಾಗಿರುವ ಬಂದರು ಭೂತ ಒಮ್ಮೆ ತೊಲಗಿತು ಅಂದು ಕೊಂಡವರಿಗೆ ಮತ್ತೆ ಅದು ಮರಳಿ ವಕ್ಕರಿಸಿದಂತಿದೆ. ಸಂಬಂಧಿತ ಖಾಸಗಿ ಕಂಪನಿ ಈ ಬಾರಿ ಕಾನೂನು ರಕ್ಷಣೆಯೊಂದಿಗೆ ಸರ್ವೆ ಕಾರ್ಯ ಮುಂದುವರೆಸಲು ಯೋಜಿಸಿದಂತಿದ್ದು , ಸರ್ವೆ ಕಾರ್ಯಕ್ಕೆ ಅಡೆ ತಡೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಮುಂಜಾಗೃತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು ಜಿಲ್ಲಾಡಳಿತದ ವತಿಯಿಂದ ಭಾರತೀಯ ನ್ಯಾಯ ಸಂಹಿತೆ 163 ರ ಅಡಿ ಭಾವಿಕೇರಿ ಕೇಣಿ ಪ್ರದೇಶದಲ್ಲಿ ಜನರು ಗುಂಪು ಗೂಡುವುದಕ್ಕೆ 2 ದಿನಗಳ ಕಾಲ ನಿಷೇದಾಜ್ಞೆ ಹೇರಲಾಗಿತ್ತು.
ಜಿಲ್ಲಾಡಳಿತ ಕೈಗೊಂಡ ಈ ಏಕಾ ಏಕಿ ಕ್ರಮವನ್ನು ವಿರೋಧಿಸಿ ಸ್ಥಳೀಯ ಹಾಗೂ ಜಿಲ್ಲೆಯ ಇತರೆಡೆಯ ಮೀನುಗಾರ ಮತ್ತಿತರ ಪ್ರಮುಖರು ಹಾಗೂ ನಾಗರಿಕರು , ಕೇಣಿ ಸಮುದ್ರ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ವಾಣಿಜ್ಯ ಬಂದರು ಯೋಜನೆ ಬೇಡವೇ ಬೇಡ ಎಂದು ಪ್ರತಿಭಟಿಸಿದರು. ಫೆ 24 ರ ಸೋಮವಾರ ಬೆಳಿಗ್ಗೆ 7 ಘಂಟೆಯ ನಂತರ ಜನರು ಜಮಾಯಿಸ ತೊಡಗಿದಂತೆ ಪೊಲೀಸ್ ಮತ್ತಿತರ ಸಂಬಂಧಿತ ಇಲಾಖೆಗಳು ಬಂದೋಬಸ್ತ ಕಾರ್ಯಕ್ಕೆ ಮುಂದಾದವು. 2-3 ತಾಸು ಕಳೆದರೂ ತಮ್ಮ ಅಳಲು ಆಲಿಸಲು ಜಿಲ್ಲಾಧಿಕಾರಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದರಿಂದ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಒಮ್ಮೆಲೇ ಸಮುದ್ರ ನೀರಿನತ್ತ ಹೆಜ್ಜೆ ಹಾಕಿ ವಿನೂತನ ಪ್ರತಿಭಟನೆಗೆ ಮುಂದಾದರು.
ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ನೀರಿಗೆ ಧುಮುಕಿದ್ದು , ಅವರನ್ನು ನಿಯಂತ್ರಿಸುವುದು ಆಡಳಿತ ವ್ಯವಸ್ಥೆಗೆ ಸವಾಲಿನ ಕೆಲಸವಾಗಿತ್ತು. ಸೋಮವಾರವಷ್ಟೇ ಅಂಕೋಲಾದ ಪ್ರಭಾರ ಹುದ್ದೆ ಗೆ ಹಾಜರಾಗಿದ್ದ ಕಾರವಾರ ತಹಶೀಲ್ದಾರ ನರೋನ ಅವರು ಸಹ ನೀರಿಗಿಳಿದು, ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಸಿಪಿಐ ಚಂದ್ರ ಶೇಖರ ಮಠಪತಿ , ಪಿ. ಎಸ್ ಐ ಜಯಶ್ರೀ ಪ್ರಭಾಕರ ಹಾಗೂ ಮಹಾಂತೇಶ ವಾಲ್ಮೀಕಿ ಸೇರಿದಂತೆ ಅಂಕೋಲಾ ಹಾಗೂ ಇತರೆಡೆಯಿಂದ ಬಂದ ವಿವಿಧ ಠಾಣೆಗಳ ಹಿರಿ-ಕಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ಎನ್ ಡಿ ಆರ್ ಎಫ್ , ಕರಾವಳಿ ಕಾವಲು ಪಡೆ ಬೆಲೆಕೇರಿ ಮತ್ತಿತರರು ಮಹಿಳೆಯರಿಗೆ ಮತ್ತು ನೀರಿಗಿಳಿದು ಪ್ರತಿಭಟಿಸುತ್ತಿದ್ದ ಇತರರಿಗೆ ಜೀವಪಾಯದ ಸಾಧ್ಯತೆ ಬಗ್ಗೆ ತಿಳಿ ಹೇಳಿ, ನೀರಿನಿಂದ ಮೇಲೆ ಸುರಕ್ಷಿತ ಸ್ಥಳಕ್ಕೆ ಬರುವಂತೆ ತಿಳಿಸಿದರು. ಇನ್ನು ಕೆಲವರಿಗೆ ಒತ್ತಾಯ ಪೂರ್ವಕವಾಗಿ ಸುರಕ್ಷಿತ ಸ್ಥಳಕ್ಕೆ ಕರೆತಂದರು.
ಈ ನಡುವೆ ಪ್ರತಿಭಟನಾ ನಿರತರಾಗಿದ್ದ ಕೆಲ ಮಹಿಳೆಯರಲ್ಲಿ, ಸಮುದ್ರ ನೀರು ದೇಹದ ಒಳ ಸೇರಿದ್ದು,ಬಿಸಿಲಿನ ತಾಪ ಇಲ್ಲವೇ ಇತರೆ ಕಾರಣಗಳಿಂದ 3 ಮಹಿಳೆಯರು ನಿತ್ರಾಣಗೊಂಡರು. ಸಳೀಯರು ಅವರನ್ನು ಮೇಲೆತ್ತಿ ,ಸಮುದ್ರ ತೀರದ ರಸ್ತೆಯಂಚಿಗೆ ಕರೆದೊಯ್ದರು. ಅವರ ಆರೋಗ್ಯ ತಪಾಸಣೆ ನಡೆಸಿದ ಇಲಾಖೆ ಸಿಬ್ಬಂದಿಗಳು , ಸ್ಥಳೀಯರ ಸಹಕಾರದಲ್ಲಿ ಅಂಬುಲೆನ್ಸ್ ಮೂಲಕ ತಾಲೂಕ ಆಸ್ಪತ್ರೆಗೆ ಕರೆದೊಯ್ದರು. ತಾಲೂಕಾ ಆಸ್ವಿತ್ರೆಯಲ್ಲಿ ಚಿಕಿತ್ಸೆಗೊಳಪಟ್ಟ ಮೂವರಲ್ಲಿ , ಈರ್ವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ನಡುವೆ ಪ್ರತಿಭಟನಾ ಸ್ಥಳದಲ್ಲಿದ್ದ ಸ್ಥಳೀಯ ವ್ಯಕ್ತಿಯೋರ್ವರೂ ಹಸಿವು – ಬಿಸಿಲು ಅಥವಾ ಅದಾವುದೋ ಕಾರಣದಿಂದ ನಿರ್ಜಲ ಸಮಸ್ಯೆಗೆ ಸಿಲುಕಿದಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಅಂಬುಲೆನ್ಸ್ ಸೇವೆ ಸಿಗಲು ವಿಳಂಬವಾಗಬಹುದೆಂಬ ಕಾರಣಕ್ಕೆ ಆಟೋ ರಿಕ್ಷಾ ಮೂಲಕ ಆ ವ್ಯಕ್ತಿಯನ್ನು ತಾಲೂಕಾ ಅಸ್ಪತ್ರೆಗೆ ಸಾಗಿಸಲಾಗಿತ್ತು . ಹೀಗೆ ಒಟ್ಟಾರೆಯಾಗಿ 4 ಜನರು ಅಸ್ವಸ್ಥ ಗೊಂಡಿದ್ದು ಸ್ಥಳೀಯರಲ್ಲಿ ಕೆಲ ಕಾಲ ಆತಂಕಕ್ಕೆ ಕಾರಣವಾದಂತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಮೀನುಗಾರ ಮಹಿಳೆಯರು ಸೇರಿ ಇತರೆ ಪ್ರತಿಭಟನಾಕಾರ ರೆಲ್ಲ ತಮಗೆ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು.
ಉರಿ ಬಿಸಿಲಿನ್ನು ಲೆಕ್ಕಿಸದೇ ಬಹುಹೊತ್ತು ಧರಣಿ ನಡೆಸಿದ ಪ್ರತಿಭಟನಾ ನಿರತರು ಮತ್ತೆ ಸಮುದ್ರಕ್ಕೆ ಇಳಿದು ಉಗ್ರ ಹೋರಾಟ ಇಲ್ಲವೇ ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವ ಸಂದೇಶ್ ನೀಡಿದರು.ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತ ಗಾಂವ್ಕರ್ ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.ಕೆಲ ಹೊತ್ತಿನಲ್ಲೇ ವಿಧಾಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಾವು ಸಹ ಸಮುದ್ರಕ್ಕೆ ಇಳಿದು ಸಾಂಕೇತಿಕ ಪ್ರತಿಭಟನೆ ನಡೆಸಿ ತಮ್ಮ ಬೆಂಬಲ ಸೂಚಿಸಿದರು.ನಂತರ ಪೊಲೀಸ್ ಮತ್ತಿತರ ಇಲಾಖೆಗಳ ಸೂಚನೆಯಂತೆ ಪ್ರತಿಭಟನಾ ನಿರತರಿಗೆ ನೀರು ಬಿಟ್ಟು ಮೇಲೆ ಬರುವಂತೆ ಸ್ಥಳೀಯ ಮುಖಂಡರು ಮನವೊಲಿಸಿದರು.
ಮದ್ಯಾಹ್ನದ ನಂತರ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ, ಬಂದರು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಯಾವುದೇ ಕಾರಣಕ್ಕೂ ವಾಣಿಜ್ಯ ಬಂದರು ಕೇಣಿಯಲ್ಲಿ ಬೇಡವೇ ಬೇಡ ಎಂದು ತಮ್ಮ ವಿರೋಧ ವ್ಯಕ್ತ ಪಡಿಸಿದರು.ರಕ್ಷಣೆ ಮತ್ತಿತರ ಉದ್ದೇಶದಿಂದ ಜಿಲ್ಲೆಯಲ್ಲಿ ಈಗಾಗಲೇ ಬಹಳಷ್ಟು ಸಮುದ್ರ ತೀರಗಳು ಮೀನುಗಾರಿಕೆಗೆ ಅವಕಾಶ ಇಲ್ಲದಂತಾಗಿದ್ದು
ಮೀನುಗಾರರು ತಮ್ಮ ಜೀವನ ಸಾಗಿಸಲಾಗದೇ ಅತಂತ್ರರಾಗಿದ್ದು ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದಿಂದ ಮತ್ತಷ್ಟು ಮೀನುಗಾರರು ತಮ್ಮ ಮೂಲ ಕಸುಬನ್ನು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ ಎಂದು ತಮ್ಮ ಆತಂಕ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ ವಾಣಿಜ್ಯ ಬಂದರು ಕುರಿತಂತೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದು ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ ಸರ್ವೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ನಿಷೇದಾಜ್ಞೆ ಹಾಕಲಾಗಿದ್ದು ಪ್ರತಿಭಟನೆಯ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಾಸಕ ಸತೀಶ ಸೈಲ್ ಸ್ಥಳೀಯ ಮಹಿಳೆಯರು ಮತ್ತು ಮುಖಂಡರ ಪರವಾಗಿ ಕೆಲವರಾಡಿದ ಮಾತು ಮತ್ತು ಅಹವಾಲು ಆಲಿಸಿ ಮಾತನಾಡಿ , ಸ್ಥಳೀಯರೆಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಳ್ಳ ಬೇಕು. ನಿಮ್ಮ ಜೊತೆ ನಾನೂ ಕೈ ಜೋಡಿಸಲು ಸಿದ್ಧನಿದ್ದೇನೆ. ನೀವಂದು ಕೊಂಡತೆ ನಾವು ಬರಲು ವಿಳಂಬವಾಗಿದ್ದಕ್ಕೆ ವಿಷಾದಿಸುತ್ತೇವೆ. ಆದರೆ ಸಂಬಂಧಿತ ಇಲಾಖೆ ಹಾಗೂ ಕಂಪನಿ ಪ್ರತಿನಿದಿಗಳ ಜೊತೆ ಚರ್ಚಿಸಿ ಅವರನ್ನೂ ಸಹ ಇಲ್ಲಿ ಕರೆತಂದಿದ್ದೇವೆ. ಈ ಯೋಜನೆ ಕುರಿತು ಯಾವ ಕಾಲಘಟ್ಟದಲ್ಲಿ ಆರಂಭವಾಗಿ ಈಗ ಯಾವ ಹಂತ ತಲುಪಿದೆ ಇತ್ಯಾದಿ ಮಾಹಿತಿ ತಿಳಿದುಕೊಳ್ಳಿ. ಅನಗತ್ಯವಾಗಿ ನಂತರ ನಮ್ಮ ಮೇಲೆ ಅಪವಾದ ಬರಬಾರದು ಎಂದರು. ಬಂದರು ಇಲಾಖೆ ನೀಡಿದ ನೀಲನಕ್ಷೆ ಮತ್ತು ವಿವರ ಇದೇ ಆಗಿದೆ ಎಂದು ಅದನ್ನು ತೋರಿಸಿದರು.
ಈ ನಡುವೆ ಕೆಲ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಸ್ಪಿ ನಾರಾಯಣ ಎಂ ಖುದ್ದು ಹಾಜರಿದ್ದು ಮಾರ್ಗದರ್ಶನ ಮಾಡಿದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ. ಎಂ, ಡಿ.ವೈ.ಎಸ್.ಪಿ ಗಿರೀಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು , ಪೊಲೀಸ್, ಕರಾವಳಿ ಕಾವಲು ಪಡೆ, ಎನ್. ಡಿ.ಆರ್. ಎಫ್, ಗೃಹ ರಕ್ಷಕ ದಳ,ಅಗ್ನಿಶಾಮಕ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿಗಳ ಸೂಚನೆಯಂತ ಸಂಜೆ ಅಂಕೋಲಾ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀ ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಶಾಸಕ ಸತೀಶ ಸೈಲ್ ಹಾಗೂ ಎಂಎಲ್ ಸಿ ಗಣಪತಿ ಉಳ್ವೇಕರ , ಬಂದರು , ಮೀನುಗಾರಿಕೆ ಇಲಾಖೆಗಳ ಉಪಸ್ಥಿತಿಯಲ್ಲಿ ಬಂದರು ವಿರೋಧಿ ಹೋರಾಟ ಸಮಿತಿಯ ಮೀನುಗಾರ ಹಾಗೂ ಇತರೆ ಮುಖಂಡರ ಹಾಗೂ ಸಾರ್ವಜನಿಕರ ವಿಶೇಷ ತುರ್ತು ಸಭೆ ನಡೆಸಿ ವಾಣಿಜ್ಯ ಬಂದರು ಯೋಜನೆಯ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಲಾಯಿತು.
ಪ್ರಾಥಮಿಕ ಹಂತದಲ್ಲಿ ಸಮುದ್ರದಲ್ಲಿ ಸರ್ವೆ ಕಾರ್ಯ ಕೈಗೊಂಡು ಮುಗಿಸಿದ ಬಳಿಕವಷ್ಟೇ ಆ ಯೋಜನೆ ಮಾಡಲು ಈ ಪ್ರದೇಶ ಸೂಕ್ತವೇ ಎಂಬಿತ್ಯಾದಿ ಸ್ಪಷ್ಟ ಚಿತ್ರಣ ದೊರೆಯಬೇಕಿದ್ದು ,ಹಾಗೊಮ್ಮೆ ಸಾಧ್ಯತೆ ಇದ್ದರೂ ಪಬ್ಲಿಕ್ ಹಿಯರಿಂಗ್ ( ನಾಗರಿಕ ಅಹವಾಲು ಸಭೆ ) ನಡೆಸಿಯೇ ಮುಂದಿನ ರೂಪು ರೇಷೆ ಸಿದ್ಧಗೊಳ್ಳಬೇಕಿದೆ ಈ ಹಂತದಲ್ಲಿ ನ್ಯಾಯಾಲಯದ ಮೋರೆ ಹೋಗುವ ಅವಕಾಶ ಇರುವುದು ಮತ್ತಿತರ ಅಂಶಗಳ ಕುರಿತು ಚರ್ಚಿಸಲಾಯಿತು. ಎಸ್ಪಿ ನಾರಾಯಣ ತಮ್ಮದು ಪೊಲೀಸ್ ಇಲಾಖೆಯಾಗಿದ್ದರೂ ಸಹ ಅದರ ಹೊರತಾಗಿ ಈ ಯೋಜನೆ ಮತ್ತಿತರ ಸಮಗ್ರ ಅಂಶಗಳನ್ನು ಜನತೆಗೆ ಮನದಟ್ಟು ಮಾಡುವಂತೆ ವಿವರಿಸಿ ಗಮನ ಸೆಳೆದರಲ್ಲದೇ , ಅನಿವಾರ್ಯವಾದರೆ ಕಾನೂನಿನ ಪರಿಮಿತಿಯಲ್ಲಿ ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಸಭೆಯ ಆರಂಭದಲ್ಲಿ ಅಂಕೋಲಾದ ಸಮಾಜ ಬಾಂಧವರ ಬೆಂಬಲಕ್ಕೆ ಬಂದು ನಿಂತ ಪಕ್ಕದ ತಾಲೂಕಿನ ಒರ್ವ ಪ್ರಮುಖ , ನಮ್ಮ ಜನರಿಗೆ ಬಂದರು ಯೋಜನೆಯಲ್ಲಿ ಎಂಪ್ಲಾಯ ಮೆಂಟ್ ಬೇಕೆಂಬ ಅರ್ಥದಲ್ಲಿ ಮಾತನಾಡಿದ್ದು , ಬಂದರು ಯೋಜನೆ ಬೇಡವೇ ಬೇಡ ಎನ್ನುತ್ತಿದ್ದ ಸ್ಥಳೀಯರಿಗೆ ಇರುಸು ಮುರುಸು ತಂದಂತಾಗಿ , ಆತ ಮಾತು ಮುಂದುವರೆಸದಂತೆ ತಡೆದರು.
ಒಟ್ಟಿನಲ್ಲಿ ಕೆಲವರ ಬೇಕು – ಬೇಡಗಳ ನಡುವೆ ಈ ಯೋಜನೆ ಮುಂದಿನ ದಿನಗಳಲ್ಲಿ ಯಾವೆಲ್ಲ ತಿರುವು ಪಡೆದುಕೊಳ್ಳಲಿದೆ ? ಎಂದು ಕಾದು ನೋಡುವಂತಾಗಿದೆ. ಪ್ರತಿಭಟನಾರ್ಥ ಪಟ್ಟಣದ ಮೀನು ಮಾರುಕಟ್ಟೆಯನ್ನು ಬಹುತೇಕ ಬಂದ್ ಮಾಡಿ ಬಂದರು ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿತ್ತು. ಹೊನ್ನಾವರ ಕಾಸರಗೋಡ ಟೊಂಕಾ ಸೇರಿದಂತೆ ಇತರೆ ಬಂದರು ಯೋಜನೆಗಳಿಗೆ ಸ್ಥಳೀಯರ ವಿರೋಧ , ನ್ಯಾಯಾಲಯದ ಆದೇಶ ಮತ್ತಿತರ ಕಾರಣಗಳಿಂದ ಉದ್ದೇಶಿತ ಯೋಜನೆಗೆ ಈಗಾಗಲೇ ಹತ್ತಾರು ವರ್ಷಗಳೇ ಕಳೆದು ಹೋಗಿದ್ದು ವಿಳಂಬವಾಗಿ ಆರಂಭವಾಗುವ ಲಕ್ಷಣಗಳಿವೆ.
ಇದೇ ರೀತಿ ಅಂಕೋಲಾದ ಕೇಣಿ ಬಂದರು ಯೋಜನೆಗೆ ಸಂಬಂಧಿಸಿದಂತೆ ರಸ್ತೆ ಮತ್ತಿತರ ಕಾರಣಗಳಿಂದ ಭೂಮಿ ಕಳೆದುಕೊಳ್ಳಲಿರುವವರು ಬಂದರು ಯೋಜನೆಯಿಂದ ಕೆಲವರಿಗೆ ತೊಂದರೆ ಎನಿಸಿದರೂ ಮುಂದಿನ ತಲೆಮಾರಿಗೆ ಉದ್ಯೋಗಾವಕಾಶ ಮತ್ತಿತರ ಅಭಿವೃದ್ಧಿ ಅವಕಾಶ ಇರುವುದನ್ನು ಮನಗಂಡು ಬಂದರು ಯೋಜನೆ ಬರಲಿ ಎನ್ನುತ್ತಿರುವುದು , ಮತ್ತೆ ಕೆಲವರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಂತೆ ಮಾಡಿ ಒಳಗಿಂದೊಳಗೆ ಯೋಜನೆ ಪರವಾಗಿ ತಮ್ಮ ದ್ವಿಮುಖ ನೀತಿ ಅನುಸರಿಸುತ್ತಿರುವುದು ಒಟ್ಟಾರೆಯಾಗಿ ಸಂಘಟಿತ ಹೋರಾಟದ ರೂಪರೇಷೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಈ ನಡುವೆ ಅಂತಿಮವಾಗಿ ಸಂಬಂಧಿತ ಕಂಪನಿ ಸರ್ವೆ ಕಾರ್ಯ ನಡೆಸಲು ತಯಾರಿ ನಡೆಸಿದ್ದು , ಯಂತ್ರಗಳು ಮತ್ತೆ ಸಮುದ್ರದಲ್ಲಿ ಲಂಗರು ಹಾಕಿದ್ದರೆ ಇದಕ್ಕೆ ಪ್ರತಿಯಾಗಿ ಕೆಲ ಹೋರಾಟಗಾರ ಪ್ರಮುಖರು ಮುಂದಿನ ಹಂತದ ಹೋರಾಟಕ್ಕೆ ಮತ್ತೆ ಸಿದ್ಧತೆ ನಡೆಸಿದಂತಿದ್ದು , ಅದರ ಪರಿಣಾಮ ಮತ್ತು ಫಲಿತಾಂಶಕ್ಕೆ ಕೆಲ ದಿನಗಳ ಮಟ್ಟಿಗಾದರೂ ಕಾಯಲೇ ಬೇಕಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸರ್ವೆ ಕಾರ್ಯಕ್ಕೆ ಅಡ್ಡಿ ಪಡಿಸುವುದು ಅಷ್ಟು ಸುಲಭವಲ್ಲ ಮತ್ತು ಕಾನೂನು ರೀತ್ಯ ಸಾಧುವೂ ಅಲ್ಲ ಎನ್ನುವ ಅಭಿಪ್ರಾಯ ಪ್ರಜ್ಞಾವಂತ ವಲಯದಿಂದ ಮತ್ತು ಕಾನೂನು ಪರಿಣಿತರಿಂದ ಕೇಳಿ ಬಂದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ