Focus News
Trending

ಕಣ್ಣುಪೊರೆ ಉಚಿತ ಶಸ್ತ್ರಚಿಕಿತ್ಸೆಯಿಂದ 15 ಫಲಾನುಭವಿಗಳಿಗೆ ದೃಷ್ಟಿಯ ಬೆಳಕು

ಕುಮಟಾ: ಮಾನವನ ಎಲ್ಲಾ ಅಂಗಾಂಗಗಳಲ್ಲಿ ಕಣ್ಣುಗಳು ಅತ್ಯಂತ ಪ್ರಾಮುಖ್ಯತೆ ಪಡೆದಿವೆ. ಕಣ್ಣುಗಳ ಸುರಕ್ಷತೆ ನಮ್ಮ ಆದ್ಯತೆಯಾಗಬೇಕು ಮತ್ತು ದೃಷ್ಟಿ ಸಮಸ್ಯೆ ಎದುರಾದಾಗ ತಕ್ಷಣವೇ ನೇತ್ರ ತಜ್ಞರನ್ನು ಸಂಪರ್ಕಿಸುವುದು ಅಗತ್ಯ. ಕಣ್ಣುಪೊರೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಅಭಿಪ್ರಾಯಿಸಿದರೆ, ಅಲಕ್ಷ್ಯ ತೋರದೆ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯ ಟ್ರಸ್ಟ್‌ ಚೇರಮನ್ ಮದನ ನಾಯಕ ಹೇಳಿದರು.

  • 9000 ಕ್ಕೂ ಹೆಚ್ಚು ಜನರಿಗೆ ಯಶಸ್ವಿಯಾಗಿ ಉಚಿತ ಕಣ್ಣುಪೊರೆ ಶಸ್ತ್ರಚಿಕಿತ್ಸೆ
  • 18 ವರ್ಷಗಳಿಂದ ಜಿಲ್ಲೆಯ ಜನತೆಗೆ ಗುಣಮಟ್ಟದ ಸೇವೆ

ಅವರು ಮುಂದುವರೆದು ವಿವರಿಸುತ್ತ,ಈ ನಮ್ಮ ‘ಚೆರಿಟೇಬಲ್’ ಕಣ್ಣಿನ ಆಸ್ಪತ್ರೆಯು ಕಳೆದ 18 ವರ್ಷಗಳಿಂದ ಜಿಲ್ಲೆಯ ಜನತೆಗೆ ಗುಣಮಟ್ಟದ ಸೇವೆ ನೀಡುತ್ತಾ, ಜಿಲ್ಲೆಯ ವಿವಿಧೆಡೆ ಉಚಿತ ಕ್ಯಾಂಪಗಳನ್ನು ನಡೆಸಿ ಈವರೆಗೆ 9000 ಕ್ಕೂ ಹೆಚ್ಚು ಜನರಿಗೆ ಯಶಸ್ವಿಯಾಗಿ ಉಚಿತ ಕಣ್ಣುಪೊರೆ ಶಸ್ತ್ರಚಿಕಿತ್ಸೆ ನಡೆಸಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನತೆ ಈ ಸೇವೆಯಿಂದ ಹೆಚ್ಚಿನ ಪ್ರಯೋಜನ ಪಡೆಯುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳಿಂದ ಆಯ್ಕೆಯಾದ 15 ಮಂದಿ ಫಲಾನುಭವಿಗಳಿಗೆ ಕಣ್ಣುಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿ, ಅವರೆಲ್ಲರನ್ನೂ ಆಸ್ಪತ್ರೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು.ಫಲಾನುಭವಿಗಳು ತಮ್ಮ ಸುಖಾನುಭವಗಳನ್ನು ಹಂಚಿಕೊಂಡರು.

ನಿರಂತರ ಉಚಿತ ಕ್ಯಾಂಪಗಳು

ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಮಾತನಾಡಿ, ಪ್ರತೀ ತಿಂಗಳಿನ ಗುರುವಾರಗಳಂದು ಕ್ರಮವಾಗಿ ಕುಮಟಾ, ಗೋಕರ್ಣ, ಅಂಕೋಲಾ, ಹೊನ್ನಾವರ, ಭಟ್ಕಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳು ನಡೆಯುತ್ತಿವೆ. ಕಣ್ಣುಪೊರೆ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ನಮ್ಮ ನೇತ್ರ ತಜ್ಞರು ಆಯ್ಕೆ ಮಾಡಿ, ಅಂದೇ ಅವರನ್ನು ಕುಮಟಾದಲ್ಲಿನ ನಮ್ಮ ಆಸ್ಪತ್ರೆಗೆ ಕರೆತಂದು, ಊಟೋಪಹಾರ, ವಸತಿ, ಔಷಧಿ ಮತ್ತು ಕನ್ನಡಕಗಳ ನೀಡಿಕೆ ಸಹಿತ ಶುಕ್ರವಾರ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಶನಿವಾರ ಆಸ್ಪತ್ರೆಯ ವಾಹನದಲ್ಲಿ ಫಲಾನುಭವಿಗಳನ್ನು ಸುರಕ್ಷಿತವಾಗಿ ಅವರವರ ನಿವಾಸಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಯ ದೂರವಾಣಿ ಸಂಖ್ಯೆ08386-224480

ಈ ಸಂದರ್ಭದಲ್ಲಿ ನೇತ್ರ ತಜ್ಞರಾದ ಡಾ.ರಾಜಶೇಖರ, ಡಾ.ಮನೋಜ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದು, ಫಲಾನುಭವಿಗಳಿಗೆ ಶುಭ ಕೋರಿದರು.

ವಿಸ್ಮಯ ನ್ಯೂಸ್, ಕುಮಟಾ

Back to top button