
ಹೊನ್ನಾವರ: ತಾಲೂಕಿನ ಸಾಲಕೋಡ ಕೊಂಡಾಕುಳಿ ಗರ್ಭದ ಆಕಳ ಹತ್ಯೆ ನಂತರ ತಲೆ ಮರೆಸಿ ಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಸಾರ್ವಜನಿಕವಾಗಿ ಕೇಳಿ ಬಂದಿದೆ. ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಕಳೆದ ಜ. 19 ರಂದು ಸಾಲಕೋಡ ಕೊಂಡಾಕುಳಿ ಕೃಷ್ಣ ಆಚಾರಿ ಮನೆಯ ಮೇಯಲು ಹೋಗಿದ್ದ ಗರ್ಭದ ಆಕಳನ್ನು ಕೊಂದು ಮಾಂಸ ಸಾಗಾಟ ಮಾಡಿರುವ ಬಗ್ಗೆ ವಾಸಿಂ ಭಟ್ಕಳ ಮತ್ತು ಮುಜಾಮಿಲ್ ಭಟ್ಕಳ ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ ಪೊಲೀಸರು ಕಾರ್ಯಾಚರಣೆ ಪ್ರಾರಂಭ ಮಾಡುತ್ತಿದ್ದಂತೆ ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಐ ಜಿ ಪಿ ಯವರ ಸೂಚನೆಯಂತೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ಮಾರ್ಗದರ್ಶನದಲ್ಲಿ ಅನೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಗೋ ಹತ್ಯೆ ನಂತರ ಮಾಂಸ ಸಾಗಾಟ ಮತ್ತು ಆರೋಪಿಗಳು ತಪ್ಪಿಸಿಕೊಳ್ಳಲು ಸಹಕಾರ ನೀಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಪೈಜಾನ್ ಎನ್ನುವ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿ ಕಾಲಿಗೆ ಗುಂಡು ಹಾರಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರಿಗೂ ಪೆಟ್ಟಾಗಿತ್ತು.
ಗರ್ಭದ ಆಕಳ ಹೊಟ್ಟೆ ಬಗೆದು, ಗರ್ಭದ ಒಳಗೆ ಇರುವ ಕರುವನ್ನು ಬಿಸಾಕಿ ಮಾಂಸ ಸಾಗಾಟ ಮಾಡಿದ್ದರು ಎನ್ನಲಾದ ವಾಸಿಂ ಮತ್ತು ಮುಜಾಮಿಲ್ ಎರಡು ತಿಂಗಳು ಸಮೀಪಿಸಿದರೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ವಿಶೇಷ ತಂಡ ರಚಿಸಿ ಅರೋಪಿಗಳ ಹಿಂದೆ ಬಿದ್ದಿರುವ ಪೊಲೀಸರಿಗೆ ಆರೋಪಿಗಳು ಸಿಕ್ಕಿದ್ದಾರೆ ಎನ್ನುವ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇನ್ನಷ್ಟು ನಿಖರವಾದ ಮಾಹಿತಿ ಪೊಲೀಸ್ ಇಲಾಖೆಯಿಂದ ತಿಳಿದು ಬರಬೇಕಿದೆ.
ರಾಜ್ಯ, ದೇಶ ಮಟ್ಟದಲ್ಲಿ ಸಂಚಲನ ಮೂಡಿಸಿದ ಗರ್ಭದ ಆಕಳ ಹತ್ಯೆ ಪ್ರಕರಣ ಕಳೆದ ಎರಡು ತಿಂಗಳಿನಿAದ ಚರ್ಚೆಯಲ್ಲಿತ್ತು. ಇದೀಗ ಆರೋಪಿಗಳನ್ನು ಹಿಡಿದಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ, ಆರೋಪಿಗಳು ಸಿಕ್ಕಿದ್ದಲ್ಲಿ ಸಾಲಕೋಡ ಆಕಳ ಹತ್ಯೆ ಪ್ರಕರಣ ಒಂದು ಹಂತದಲ್ಲಿ ತಾರ್ಕಿಕ ಅಂತ್ಯ ಕಂಡoತೆ ಆಗಲಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ