
ಭಟ್ಕಳ: ತಾಲೂಕಿನ ಬಂದರಿನಲ್ಲಿ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜನಪದಿಯ ನೆಲೆಗಟ್ಟಿನಲ್ಲಿ ಇಲ್ಲಿಯ ಕೊಂಕಣಿ ಖಾರ್ವಿ ಸಮಾಜ ಹಬ್ಬಕ್ಕೆ ವಾರದ ಮುನ್ನವೆ ಕೆಲವು ಧಾರ್ಮಿಕ ವಿಧಿವಿಧಾನವನ್ನು ನಡೆಸಿ ಹೋಳಿಗೆ ಕಾಯಿ ಇಡುವ ಮೂಲಕ ಹಬ್ಬಕ್ಕೆ ಮುನ್ನುಡಿಯನ್ನು ಬರೆಯುತ್ತದೆ. ಅಲ್ಲಿಂದ ಕ್ರಮೇಣ ಕಳೆಗಟ್ಟುತ್ತಾ ಹೋಗುವ ಹಬ್ಬ ಹೋಳಿಯ ದಿನದಂದು ಸಂಪೂರ್ಣವಾದ ರಂಗನ್ನು ಪಡೆಯುತ್ತದೆ.
ಇಲ್ಲಿ ಒಟ್ಟು ಎರಡು ದಿನಗಳ ಕಾಲ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ, ಮೊದಲ ದಿನ ಸಂಜೆ ಹೊತ್ತಿಗೆ ಹೋಳಿ ಮರವನ್ನು ತಲಗೋಡು ಕಡಲ ತೀರಕ್ಕೆ ತಂದು ತೆಂಗಿನ ಗರಿಗಳನ್ನು ಗುಡ್ಡೆ ಹಾಕಿ ಸಾಂಕೇತಿಕವಾಗಿ ಕಾಮ ದಹನವನ್ನು ಮಾಡಲಾಗಿತ್ತು. ಹಬ್ಬದ ಎರಡನೇ ದಿನವಾದ ಶುಕ್ರವಾರದಂದು ಹಬ್ಬ ಮತ್ತಷ್ಟು ರಂಗು ಪಡೆಯಿತು. ವಿವಿಧ ವೇಷದಾರಿಗಳು, ಅಬ್ಬರಿಸುವ ಡಿಜೆ ಸದ್ದಿನೊಂದಿಗೆ ರಾವಣನ ಪ್ರತಿಕೃತಿಯೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ತಲಗೋಡು ಕಡಲ ತೀರಕ್ಕೆ ಬಂದು ತೆಂಗಿನಗರಿಯ ಗುಡ್ಡೆಯನ್ನು ತಯಾರಿಸಿ ರಾವಣದ ಪ್ರತಿಕೃತಿಯನ್ನು ಇಟ್ಟು, ಪೂಜೆಯನ್ನು ಪೂರೈಸಿ ನೆರೆದ ಸಹಸ್ರಾರು ಜನರ ಸಮ್ಮುಖದಲ್ಲಿ ಹೋಳಿ ಗುಡ್ಡೆಗೆ ಬೆಂಕಿ ಹಚ್ಚಲಾಯಿತು.
ಕಾಮನ ದಹನದ ನಂತರ ನೆರೆದ ಜನರು ಸಮುದ್ರ ಸ್ನಾನ ಮಾಡಿ ತಲೆಯ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿಕೊಂಡು. ಹೋಳಿ ಹಬ್ಬವನ್ನು ಸಂಪನ್ನಗೋಳಿಸಲಾಯಿತು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ