Important

ಅಂಕೋಲೆ ಶ್ರೀ ಶಾಂತಾದುರ್ಗಾ ದೇವಸ್ಥಾನ ಗೋಪುರದ ಮೇಲ್ಚಾವಣಿಗೆ ತಾಮ್ರದ ಹೊದಿಕೆ: ಕೆಲಸ ಕಾರ್ಯಗಳು ಆರಂಭ

ಜೀರ್ಣೋದ್ಧಾರದ ಮಹತ್ ಕಾರ್ಯದಲ್ಲಿ ಕೈ ಜೋಡಿಸುವಂತೆ ಕರೆ

  • ಮೇಲ್ಚಾವಣಿಗೆ ತಾಮ್ರದ ಹೊದಿಕೆ
  • ಸದ್ಬಕ್ತರಿಂದ ಸಹಾಯ-ಸಹಕಾರದ ನಿರೀಕ್ಷೆ
  • ಸೇವಾ ದೇಣಿಗೆ ನೀಡಿ ನೆರವಾಗಲು ಮನವಿ

ಅಂಕೋಲಾ: ಭೂಮ್ತಾಯಿ ಎಂದೇ ಪ್ರಸಿದ್ಧವಾಗಿರುವ ಅಂಕೋಲೆಯ ಶ್ರೀ ಶಾಂತಾದುರ್ಗಾ ದೇವಿ ದೇವಸ್ಥಾನದ ಗೋಪುರದ ಮೇಲ್ಚಾವಣಿಗೆ ತಾಮ್ರದ ಹೊದಿಕೆ ಹೊದಿಸುವ ಕೆಲಸ ಕಾರ್ಯಗಳು ಶುಭಾರಂಭಗೊoಡಿದೆ. ಎಲ್ಲ ಭಕ್ತ ಜನರು ತಮ್ಮ ತನು-ಮನ ಧನ ಸೇವೆ ಸಲ್ಲಿಸಿ ದೇವಾಸ್ಥನ ಜೀರ್ಣೋದ್ದಾರದ ಮಹತ್ತ್ ಕಾರ್ಯದಲ್ಲಿ ಕೈ ಜೋಡಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.

ಬಂಡಿಹಬ್ಬಕ್ಕೂ ಪೂರ್ವದಲ್ಲಿ ತಾಮ್ರದ ಹೊದಿಕೆ

ಅಂಕೋಲಿಗರು ಸೇರಿದಂತೆ ದೇಶ ವಿದೇಶಗಳಲ್ಲಿ ನೆಲೆಸಿರುವ ಅಸಂಖ್ಯ ಭಕ್ತರ ಆರಾಧ್ಯ ದೇವಿಯಾಗಿರುವ ಅಂಕೋಲೆಯ ಗ್ರಾಮದೇವಿ ಶ್ರೀ ಶಾಂತಾದುರ್ಗಾ ದೇವಿ ಭೂಮ್ತಾಯಿ ಎಂದೇ ಪ್ರಸಿದ್ಧಿ ಪಡೆದು , ತನ್ನ ನಂಬಿ ಬಂದ ಭಕ್ತರನ್ನು ಪೊರೆವಳೆಂಬ ನಂಬಿಕೆ ಹಲವರಲ್ಲಿದೆ. ಶ್ರೀ ಶಾಂತಾದುರ್ಗಾ ದೇವಿಯ ಬಂಡಿಹಬ್ಬ ವಿಶ್ವವಿಖ್ಯಾತವಾಗಿದ್ದು , ಅಂಕೋಲೆ ಬಂಡಿಹಬ್ಬ ಎಂದೇ ಪ್ರಸಿದ್ಧವಾಗಿದ್ದು ಈ ವರ್ಷ ಮೇ 12 ಮತ್ತು ಮೇ 13 ರಂದು ನಡೆಯಲಿದೆ.

ಅದಕ್ಕೂ ಪೂರ್ವದಲ್ಲಿಯೇ ದೇವಸ್ಥಾನದ ಜೀಣೋದ್ಧಾರದ ಅಂಗವಾಗಿ ದೇಗುಲದ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಅಳವಡಿಸಲು ನಿರ್ಧರಿಸಲಾಗಿದ್ದು ಯಜ್ಞ ಮಂಟಪದ ಮೇಲ್ಛಾವಣಿಗೆ ಮೊದಲ ಹಂತದಲ್ಲಿ ಹಾಗೂ ಪರಿವಾರ ದೇವರುಗಳ ಗುಡಿ- ಗೋಪುರಗಳ ಮೇಲ್ಚಾವಣಿಗೆ ಒಟ್ಟೂ ಅಂದಾಜು ಸುಮಾರು 2 ಕೋಟಿ 50 ಲಕ್ಷ ರೂ. ನ ಯೋಜನೆಗಳೊಂದಿಗೆ ನೀಲನಕ್ಷೆ ಸಿದ್ಧಪಡಿಸಿ, ಕಟ್ಟಿಗೆ ಕೆಲಸಗಳೊಂದಿಗೆ ಉದ್ದೇಶಿತ ಕೆಲಸ ಕಾರ್ಯಗಳು ಶುಭಾರಂಭಗೊoಡಿವೆ.

ಇತ್ತೀಚೆಗೆ ದೇವಸ್ಥಾನದ ಆವಾರದಲ್ಲಿ ಆಡಳಿತ ಮಂಡಳಿ ಮತ್ತು ಭಕ್ತರ ಹಾಗೂ ಸಾರ್ವಜನಿಕರ ಸಭೆ ಕರೆದು ದೇಗುಲ ಅಭಿವೃದ್ಧಿ ಮತ್ತು ಗೋಪುರಕ್ಕೆ ತಾಮ್ರ ಹೊದಿಕೆ ಹಾಸುವ ಕುರಿತಂತೆ ಕೊಟ್ಯಾಂತರ ರೂಪಾಯಿ ವೆಚ್ಚದ ಈ ಮಹತ್ಕಾರ್ಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಿ , ಸಕಲ ಭಕ್ತರ ಸಹಕಾರದಲ್ಲಿ ಬಂಡಿಹಬ್ಬದ ಪೂರ್ವದಲ್ಲಿ ದೇವಸ್ಥಾನದ ಯಜ್ಞ ಮಂಟಪದ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಜೋಡಿಸಲು ಕಾರ್ಯ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು. ಜೀರ್ಣೋದ್ದಾರ ಸಮಿತಿಯ ಪರಿವಾಗಿ ನ್ಯಾಯವಾದಿ ಸುಭಾಸ ನಾರ್ವೇಕರ್ ಮಾತನಾಡಿ ಸಾರ್ವಜನಿಕರಿಗೆ ಯೋಜನೆಯ ಸಂಪೂರ್ಣ ವಿವರ ನೀಡಿದರು.

ಕಟ್ಟಿಗೆ ಕೆಲಸ ಆರಂಭ 2.5 ಕೋಟಿ ರೂಪಾಯಿ ವೆಚ್ಚ

ಅಂಕೋಲೆಯ ಗ್ರಾಮ ದೇವಿಯಾಗಿರುವ ಶ್ರೀ ಶಾಂತಾದುರ್ಗಾ ದೇವಸ್ಥಾನದ ಮೇಲ್ಛಾವಣಿ ಜೀರ್ಣವಾಗಿರುವ ಹಿನ್ನೆಲೆಯಲ್ಲಿ ದೇವಿಯ ಅಪ್ಪಣೆಯಂತೆ ಇದನ್ನು ಸುಸಜ್ಜಿತಗೊಳಿಸಲು ನಿರ್ಧರಿಸಲಾಗಿದೆ. 1928 ರಲ್ಲಿ ದೇಗುಲದ ಪ್ರಧಾನ ಗೋಪುರಕ್ಕೆ ತಾಮ್ರದ ಹೊದಿಕೆ ಹಾಕಲಾಗಿದೆ. ಈಗ ಆರಂಭದಲ್ಲಿ ಯಜ್ಞ ಮಂಟಪಕ್ಕೆ ತಾಮ್ರ ಹೊದಿಸಲು ಯೋಜನೆ ರೂಪಿಸಲಾಗಿದ್ದು, ಕಾರ್ಕಳದ ನರಸಿಂಹಾಚಾರ ನೇತೃತ್ವದಲ್ಲಿ ಈಗಾಗಲೇ ಕಟ್ಟಿಗೆ ಕೆಲಸ ಆರಂಭವಾಗಿದೆ. ಇದಕ್ಕೆ 2.5 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ. ಭಕ್ತರಿಂದ, ದಾನಿಗಳಿಂದ ಬೃಹತ್ತ ಮೊತ್ತ ಸಂಗ್ರಹಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ವಿವಿಧರೂಪದಲ್ಲಿ ದೇಣಿಗೆ ಸಂಗ್ರಹಕ್ಕೆ ಯೋಚಿಸಲಾಗಿದ್ದು, ಭಕ್ತರು ಈ ಯೋಜನೆ ಪೂರ್ಣಗೊಳಿಸಲು ಎಲ್ಲ ರೀತಿಯ ಸಹಾಯ ಸಹಕಾರ ನೀಡಬೇಕು. ತಮ್ಮ ಜೊತೆಗೆ ಕುಟುಂಬಸ್ಥರು, ಪರಿಚಯಸ್ಥರು ಈ ಯೋಜನೆಗೆ ಕೈ ಜೋಡಿಸುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮ ದೇವಿಯ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು ಈಗಾಗಲೇ ಸರ್ಕಾರದಿಂದ 40 ಲಕ್ಷ ರೂ. ಮಂಜೂರಾಗಿದೆ . ದೇವಸ್ಥಾನದಲ್ಲಿ ಸೇವೆಗಳು, ದೇಣಿಗೆ ನೀಡುವ ವ್ಯವಸ್ಥೆಯನ್ನು ಈಗ ಸಂಪೂರ್ಣ ಗಣಕೀಕರಣ ಮಾಡಲಾಗಿದ್ದು, ಭಕ್ತರಿಗೆ ಶೀಘ್ರ ಮತ್ತು ಪಾರದರ್ಶಕ ಸೇವೆಗೆ ಅವಕಾಶವಾಗಿದೆ ಎಂದರು. ಸಭೆಯಲ್ಲಿ ಟ್ರಸ್ಟಿಗಳಾದ ಎನ್.ಬಿ. ಮಹಾಲೆ, ಅಶೋಕ ಮಹಾಲೆ ಇದ್ದರು. ಜೀರ್ಣೋದ್ಧಾರ ಸಮಿತಿ ಪರವಾಗಿ ಭಾಸ್ಕರ ನಾರ್ವೇಕರ್ ಸ್ವಾಗತಿಸಿದರು. ವಿಜಯಕುಮಾರ ನಾಯ್ಕ ವಂದಿಸಿದರು. ತಾಮ್ರದ ಹೊದಿಕೆ ಯೋಜನೆಗೆ ಸಭೆಯಲ್ಲಿದ್ದ ಹಲವರು ಈಗಾಗಲೇ ತಮ್ಮ ದೇಣಿಗೆ ಪ್ರಕಟಿಸಿದ್ದು , ಸದ್ಭಕ್ತ ಜನರಿಂದ ಹೆಚ್ಚಿನ ಸಹಾಯ ಸಹಕಾರ ಸೇವೆ ನಿರೀಕ್ಷಿಸಲಾಗಿದೆ.

ಮಹತ್ ಕಾರ್ಯದಲ್ಲಿ ಕೈ ಜೋಡಿಸುವಂತೆ ಕರೆ

ಸರ್ವ ಭಕ್ತದಿಗಳು ಸೇವಾ ದೇಣಿಗೆಯನ್ನು ನೇರವಾಗಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹೆಸರಿನ ಬ್ಯಾಂಕ್ ಖಾತೆಗೆ , ಇಲ್ಲವೇ 7975659455 ಈ ಮೊಬೈಲ್ ಸಂಖ್ಯೆಗೆ ,ಅಥವಾ ಕ್ಯೂ ಆರ್ ಕೋಡ್ ಬಳಸಿ ಆನ್ ಲೈನ್ ಪೇಮೆಂಟ್ ಮೂಲಕ ಇಲ್ಲವೇ ದೇವಸ್ಥಾನ ಕಾರ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿರುವ ವಿಶೇಷ ಕೌಂಟರ್ನಲ್ಲಿ ತಮ್ಮ ಸೇವೆ ರೂಪದ ದೇಣಿಗೆ ನೀಡಿ ರಶೀದಿ ಪಡೆದುಕೊಳ್ಳುವಂತೆ ಗ್ರಾಮದೇವಿ ಶ್ರೀ ಶಾಂತಾದುರ್ಗಾ ಜೀರ್ಣೋದ್ದಾರ ಹಾಗೂ ಅಭಿವೃದ್ಧಿ ಸಮಿತಿ ಅಂಕೋಲಾ ಇವರು ವಿನಂತಿಸಿಕೊoಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button