
ಹೊನ್ನಾವರ: ಶರಾವತಿ ಆರತಿ ಸಮಿತಿ ವತಿಯಿಂದ ಶರಾವತಿ ನದಿಗೆ ಕೃತಜ್ಞತೆ ಸಲ್ಲಿಸುವ 4ನೇ ವರ್ಷದ ‘ಶರಾವತಿ ಆರತಿ’ ಕಾರ್ಯಕ್ರಮವು ಪಟ್ಟಣದ ಬಂದರ್ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಮಿರ್ಜಾನ ಶಾಖಾ ಮಠಾಧೀಶ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ, ಶರಾವತಿ ನದಿಯು ಅಂಬುತೀರ್ಥದಲ್ಲಿ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತಿದೆ. ಈ ನದಿ ಲಕ್ಷಾಂತರ ಜನರ ಜೀವನಕ್ಕೆ ಆಧಾರವಾಗಿದ್ದು, ಇಂತಹ ಪವಿತ್ರ ಶರಾವತಿ ನದಿಗೆ ಪೂಜೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುವ ಕಾರ್ಯ ಶ್ರೇಷ್ಠ ಎಂದು ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಶಿ ಮಾತನಾಡಿ, ಶರಾವತಿ ನದಿಯ ನೀರನ್ನು ನಾವೆಲ್ಲ ಕುಡಿದಿದ್ದೇವೆ, ಬೆಳಕನ್ನು ಕಂಡಿದ್ದೇವೆ. ಹಾಗೂ ಜನರು ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ನದಿಯನ್ನು ಕಲುಷಿತಗೊಳಿಸದೇ ಶುದ್ಧವಾಗಿಡಬೇಕು ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯ ಜನರು ಸೌಮ್ಯ ಸ್ವಭಾವದವರು. ಯಾವುದೇ ಸರಕಾರ ಬಂದರೂ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಯೋಜನೆಯ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು. ಸಭಾ ಕಾರ್ಯಕ್ರಮದ ನಂತರ ಗಣ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸಮವಸ್ತ್ರ ಧರಿಸಿದ ಐವರು ವೈದಿಕರು ಗಂಗಾರತಿಯ ಮಾದರಿಯಲ್ಲಿ ಶರಾವತಿ ನದಿಗೆ ಆರತಿ ಬೆಳಗಿಸಿದರು. ಸಾವಿರ ಹಣತೆಗಳನ್ನು ಹಚ್ಚಿ ನದಿಯಲ್ಲಿ ತೇಲಿ ಬಿಡಲಾಯಿತು. ಚಂಡೆವಾದನ ಮೊಳಗಿದವು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಪೂಜೆಯ ನಂತರ ಪ್ರಸಾದ ವಿತರಿಸಲಾಯಿತು.
ವೇದಿಕೆಯಲ್ಲಿ ಶರಾವತಿ ಆರತಿ ಸಮಿತಿಯ ಕಾರ್ಯಾಧ್ಯಕ್ಷ ಜಿ.ಜಿ.ಶಂಕರ, ಕೇಶವ ನಾಯ್ಕ ಬಳಕೂರು, ಶಿವರಾಜ ಮೇಸ್ತ, ಉಮೇಶ ಮೇಸ್ತ, ರಾಜೇಶ ಸಾಳೇಹಿತ್ತಲ, ಲೋಕೇಶ ಮೇಸ್ತ, ಲಕ್ಷ್ಮಣ ಮೇಸ್ತ, ಮೋಹನ ಸಾಳೇಹಿತ್ತಲ, ಎಂ.ಎಸ್.ಹೆಗಡೆ, ಎನ್.ಎಸ್.ಹೆಗಡೆ ಕರ್ಕಿ, ಜಿ.ಪಿ.ಪಾಠಣಕರ, ಚಂದ್ರಕಾoತ ಕೊಚರೇಕರ ಇದ್ದರು. ಅಧ್ಯಕ್ಷರಾದ ವೆಂಕಟರಮಣ ಹೆಗಡೆ ಕವಲಕ್ಕಿ ವಂದಿಸಿದರು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ