ಅಂಕೋಲಾ ತಾಲೂಕಿನ ದೊಡ್ಡ ದೇವರೆಂದೇ ಖ್ಯಾತಿ ಪಡೆದಿರುವ ಶ್ರೀವೆಂಕಟರಮಣ ದೇವರ ತೇರು ಉತ್ಸವಕ್ಕೆ ಸಿದ್ಧತೆ

- ಏಪ್ರಿಲ್ 11 ರಂದು ಸಣ್ಣ ತೇರು
- ಏಪ್ರಿಲ್ 12 ರ ಹನುಮ ಜಯಂತಿಯಂದು ದೊಡ್ಡ ತೇರು
- ಏಪ್ರಿಲ್ 13ರಂದು ಓಕಳಿ ಆಟದೊಂದಿಗೆ ಸಂಪನ್ನ
- ರಥೋತ್ಸವಕ್ಕೆ ಸರ್ವರಿಗೂ ಸ್ವಾಗತ
ಅಂಕೋಲಾ: ತಾಲೂಕಿನ ದೊಡ್ಡ ದೇವರೆಂದೇ ಖ್ಯಾತಿ ಪಡೆದಿರುವ ಶ್ರೀವೆಂಕಟರಮಣ ದೇವರ ತೇರು ಉತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ಏಪ್ರಿಲ್ 11ರಂದು ಸಣ್ಣ ತೇರು ಮತ್ತು ಏಪ್ರಿಲ್ 12ರ ಹನುಮಾನ ಜಯಂತಿ ದಿನದಂದು ದೊಡ್ಡ ತೇರು ಮಹೋತ್ಸವ ನಡೆಯಲಿದೆ.
ಜಿಲ್ಲೆಯ ಕಡವಾಡದಿಂದ ಚಂದಾವರ ಸೀಮೆ ವರೆಗಿನ ಅಸಂಖ್ಯ ಭಕ್ತರನ್ನು ಹೊಂದಿರುವ,ಅಂಕೋಲಾ ತಾಲೂಕಿನ ದೊಡ್ಡ ದೇವರೇಂದೇ ಖ್ಯಾತವಾದ,ಶ್ರೀ ವೆಂಕಟರಮಣ ದೇವರ ತೇರು ಮಹೋತ್ಸವಕ್ಕೆ ಸಿದ್ಧತೆಗಳು ಏಪ್ರಿಲ್ 6 ರ ರಾಮನವಮಿಯಂದು ಆರಂಭಗೊಂಡಿದ್ದು,ಚೈತ್ರ ವದ್ಯ ಪ್ರತಿಪದಾ ರವಿವಾರ ಏಪ್ರಿಲ್ 13ರಂದು ಒಕುಳಿ ಆಟದೊಂದಿಗೆ ಸಂಪನ್ನಗೊಳ್ಳಲಿದೆ.
ಶ್ರೀದೇವರ ದೊಡ್ಡ ತೇರು
ತೇರು ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಏಪ್ರಿಲ್ 11 ರಂದು ಶುಕ್ರವಾರ ಮದ್ಯಾಹ್ನ ಸಣ್ಣ ತೇರು ಎಂದು ಕರೆಸಿಕೊಳ್ಳುವ ಪುಷ್ಪ ರಥೋತ್ಸವ ಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಏಪ್ರಿಲ್ 12 ರ ವಿಶ್ವವಸುನಾಮ ಸಂವತ್ಸರ ಚೈತ್ರ ಪೌರ್ಣಿಮೆಯ ಶನಿವಾರ ಹನುಮ ಜಯಂತಿಯಂದು ಶ್ರೀದೇವರ ದೊಡ್ಡ ತೇರು ಎಂದು ಜನಜನಿತವಾಗಿರುವ ಬ್ರಹ್ಮರಥೋತ್ಸವ ಮತ್ತು ಸಂಜೆ ಪಲ್ಲಕಿ ಮೆರವಣಿಗೆ ಮೃಗಭೇಟೆ,ಗರುಡಾವರೋಹಣ ಮತ್ತಿತರ ಕಾರ್ಯಕ್ರಮ ನಡೆಯಲಿದೆ.

ಏಪ್ರಿಲ್ 13 ರಂದು ಬೆಳಿಗ್ಗೆ ದೇವರ ಪಲ್ಲಕಿ ಮೆರವಣಿಗೆ ಬೇಳಾಬಂದರಿಗೆ ತೆರಳಲಿದ್ದು ನೌಕಾವಿಹಾರದೊಂದಿಗೆ ಅಲ್ಲಿ ಓಕುಳಿ ಕಾರ್ಯಕ್ರಮ,ವಿವಿಧ ಸಮಾಜದ ಜನರ ಪೂಜೆ ಸೇವೆ, ಕೇಣಿ ಗಾಬೀತ ಸಮಾಜದ ವಿಶೇಷ ಪೂಜಾ ಸೇವೆ ನಡೆಯಲಿದೆ. ದಾರಿಮಧ್ಯೆ ಪೀರುಕಟ್ಟೆ ಮೇಲೆ ದೇವರ ಅಲ್ಪ ವಿಶ್ರಾಂತಿ,ದಾರಿಯುದ್ಧಕ್ಕೂ ಭಕ್ತ ಮಹಾಜನರಿಂದ ಹಣ್ಣು ಕಾಯಿ ಮಂಗಳಾರತಿ ಸೇವೆ ಸ್ವೀಕರಿಸುತ್ತಾ, ನಂತರ ದೇವ ಮಂದಿರ ಪ್ರವೇಶ ವಸಂತ ಪೂಜ್ಯ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ರಥಾರೂಢ ದೇವರ ದರ್ಶನ ಪಡೆಯುವ ವ್ಯವಸ್ಥೆ
ಏಪ್ರಿಲ್ 11ರ ಸಣ್ಣ ತೇರು ಮತ್ತು 12 ರ ದೊಡ್ದ ತೇರು ಉತ್ಸವದ ಉತ್ಸವದ ಸಂದರ್ಭದಲ್ಲಿ ಭಕ್ತರು ಪುಷ್ಪರಥ ಮತ್ತು ಬ್ರಹ್ಮ ರಥಗಳ ಮೇಲೆ ಏರಿ ರಥಾರೂಢ ದೇವರ ದರ್ಶನ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು,ಭಕ್ತರು ಪ್ರತ್ಯೇಕ ದೇಣಿಗೆ ಕೊಟ್ಟು ಪಾವತಿ ಪಡೆದುಕೊಳ್ಳಲು ಕೋರಿಕೊಳ್ಳಲಾಗಿದೆ. ದೇವಾಲಯದಲ್ಲಿ ತುಲಾಬಾರ ಸೇವೆ ಸಹ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗುವಂತೆ,ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥ ಮಂಡಳಿಯವರು ವಿನಂತಿಸಿದ್ದಾರೆ. ದೊಡ್ಡ ದೇವರ ತೇರು ಉತ್ಸವ ಪುನರಾರಂಭ ಆಗಲು ಅಂದಿನ ಧರ್ಮದರ್ಶಿಗಳಾಗಿದ್ದ ಆರ್ ಎನ್ ನಾಯಕ ಅವರ ಸೇವಾ ಫಲ ಇಂದಿನ ವರೆಗೂ ಮುಂದುವರೆದು ಅವರ ಅಭಿಮಾನಿಗಳು ಹಾಗೂ ಶ್ರೀ ದೇವರ ಭಕ್ತವೃಂದ ಧನ್ಯತೆಯಿಂದ ಸ್ಮರಿಸುವಂತಾಗಿದ್ದು,, ಆರ್ ಎನ್ ನಾಯಕ ಅವರ ಸುಪುತ್ರ ಮಯೂರ ನಾಯಕ , ರಥೋತ್ಸವದ ಯಶಸ್ಸಿಗೆ ಸರ್ವರ ಸಹಕಾರ ಕೋರಿ , ಸರ್ವರಿಗೂ ಸ್ವಾಗತ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ