Join Our

WhatsApp Group
Big News
Trending

ಅಂಕೋಲಾದಲ್ಲಿ ದೊಡ್ಡ ದೇವರ, ದೊಡ್ಡ ತೇರು ಉತ್ಸವ : ಮನಸೆಳೆದ ಮೃಗಬೇಟೆ, ಗರುಡಾವರೋಹಣ

ಅಂಕೋಲಾ : ಜಿಲ್ಲೆಯ ಕಡವಾಡದಿಂದ ಚಂದಾವರ ಸೀಮೆ ವರೆಗೆ ಅಸಂಖ್ಯ ಭಕ್ತರನ್ನು ಹೊಂದಿರುವ ತಾಲೂಕಿನ ದೊಡ್ಡ ದೇವರೆಂದೇ ಪ್ರಸಿದ್ಧವಾಗಿರುವ, ಶ್ರೀವೆಂಕಟರಮಣ ದೇವರ ದೊಡ್ಡ ತೇರು ಉತ್ಸವ ಎ . 12 ರ ಶನಿವಾರ ಹನುಮ ಜಯಂತಿಯಂದು ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. ಸಹಸ್ರಾರು ಭಕ್ತರ ಹರ್ಷೋದ್ಗಾರಗಳೊಂದಿಗೆ,ವಿವಿಧ ವಾದ್ಯ ಘೋಷಗಳೊಂದಿಗೆ ಜಿಲ್ಲೆಯ ದೊಡ್ಡ ತೇರುಗಳಲ್ಲಿ ಒಂದಾಗಿರುವ ಶ್ರೀವೆಂಕಟರಮಣ ದೇವರ ಬ್ರಹ್ಮ ರಥವನ್ನು, ಸ್ವಾಮಿ ರಾಮ ರಾಮ ಗೋವಿಂದ ಗೋವಿಂದ, ಸ್ವಾಮಿ ವೆಂಕಟರಮಣ ಗೋವಿಂದ ಗೋವಿಂದ, ಲಕ್ಷ್ಮೀರಮಣ ಗೋವಿಂದ, ಪವನ ಪುತ್ರ ಹನುಮಾನಕೀ ಜೈ ಮತ್ತಿತರ ಘೋಷಗಳೊಂದಿಗೆ ರಥಬೀದಿಯಿಂದ ಪಟ್ಟಣದ ದುರ್ಗಾದೇವಿ ದೇವಾಲಯದವರೆಗೆ ಎಳೆದು ತಂದು ಅಲ್ಲಿ ಭಕ್ತರ ಆರತಿ ಸೇವೆ , ಹಣ್ಣು ಕಾಯಿ ಸೇವೆ ಸ್ಪೀ ಕರಿಸಿ ಪುನಃ ರಥಬೀದಿಯ ಸ್ವಸ್ಥಾನಕ್ಕೆ ಮರಳಿತು. ಭಕ್ತರು ತೇರಿಗೆ ಬಾಳೆಹಣ್ಣು, ಕಡಲೆ ,ಇತರೆ ಜಾತಿಯ ಹಣ್ಣುಗಳು ಮತ್ತು ನವಧಾನ್ಯ ಎಸೆದು,ಹರಕೆ ಸೇವೆ ಸಲ್ಲಿಸಿದರಲ್ಲದೇ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.

ತೇರು ರಥಬೀದಿಗೆ ಮರಳಿದ ಬಳಿಕವು,ಸಾವಿರಾರು ಭಕ್ತರು ಬಂದು ತೇರು ಮತ್ತು ಶ್ರೀದೇವರ ದರ್ಶನ ಪಡೆದುಕೊಂಡರು. ತೇರಿಗೆ ಕಟ್ಟಿದ ಫಲಾವಳಿಗಳ ಸವಾಲು ಕಾರ್ಯ ನಡೆಸಲಾಯಿತು. ನಂತರ ಶ್ರೀ ಪಲ್ಲಕಿ ಮೆರವಣಿಗೆಯಲ್ಲಿ ದೇವರ ಉತ್ಸವ ಮೂರ್ತಿಯೊಂದಿಗೆ ವೆಂಕಟರಮಣ ದೇವಾಲಯಕ್ಕೆ ಮರಳಲಾಯಿತು. ದೇವಸ್ಥಾನದ ವಿಶ್ವಸ್ಥ ಮಂಡಳಿ ಪ್ರಮುಖರು , ಸಂಬಂಧಿತ ಇತರರಿದ್ದರು. ಎಸ್ಪಿ ಎಂ ನಾರಾಯಣ ಅಂಕೋಲಾಕ್ಕೆ ಬಂದು, ಶ್ರೀ ದೇವರ ದರ್ಶನ ಪಡೆದು , ಬಳಿಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತೇರು ಉತ್ಸವ ಸೂಸುತ್ರವಾಗಿ ನಡೆಸಲು ಕೆಲ ಅಗತ್ಯ ಸೂಚನೆ ಮತ್ತು ಮಾರ್ಗದರ್ಶನ ಮಾಡಿ, ಬಳಿಕ ಕರ್ತವ್ಯ ನಿಮಿತ್ತ ಬನವಾಸಿ ಕದಂಬೋತ್ಸವಕ್ಕೆ ತೆರಳಿದರು. ಬ್ರಹ್ಮರಥೋತ್ಸವ ಮತ್ತು ಸಂಜೆ ಪಲ್ಲಕಿ ಮೆರವಣಿಗೆ ಮೃಗಭೇಟೆ,ಗರುಡಾವರೋಹಣ ಮತ್ತಿತರ ಕಾರ್ಯಕ್ರಮ ಧಾರ್ಮಿಕ ಮತ್ತು ಸಾಂಪ್ರದಾಯಿಕವಾಗಿ ನಡೆಯಿತು.

ಎಪ್ರಿಲ್ 11ರ ಸಣ್ಣ ತೇರು ಮತ್ತು 12 ರ ದೊಡ್ದ ತೇರು ಉತ್ಸವದ ಉತ್ಸವದ ಸಂದರ್ಭದಲ್ಲಿ ಭಕ್ತರು ಪುಷ್ಪರಥ ಮತ್ತು ಬ್ರಹ್ಮ ರಥಗಳ ಮೇಲೆ ಏರಿ ರಥಾರೂಢ ದೇವರ ದರ್ಶನ ಪಡೆದು ಧನ್ಯತೆ ಮೆರೆದರು.ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥ ಮಂಡಳಿಯವರು ಮತ್ತು ಸ್ವಯಂ ಸೇವಕರು ,ಭಕ್ತ ವೃಂದದವರು ರಥೋತ್ಸವದ ಯಶಸ್ಸಿಗೆ ಸೇವೆ ಸಲ್ಲಿಸಿದರು .ದೊಡ್ಡ ದೇವರ ತೇರು ಉತ್ಸವ ಪುನರಾರಂಭ ಆಗಲು ಅಂದಿನ ಧರ್ಮದರ್ಶಿಗಳಾಗಿದ್ದ ಆರ್ ಎನ್ ನಾಯಕ ಅವರ ಸೇವಾ ಫಲ ಇಂದಿನ ವರೆಗೂ ಮುಂದುವರೆದು ಅವರ ಅಭಿಮಾನಿಗಳು ಹಾಗೂ ಶ್ರೀ ದೇವರ ಭಕ್ತವೃಂದ ಧನ್ಯತೆಯಿಂದ ಸ್ಮರಿಸುವಂತಾಗಿದ್ದು,, ಆರ್ ಎನ್ ನಾಯಕ ಅವರ ಸುಪುತ್ರ ಮಯೂರ ನಾಯಕ , ರಥೋತ್ಸವದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button