
ಭಟ್ಕಳ: ಮುರ್ಡೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿಮಕ್ಕಿಯಲ್ಲಿರುವ ಮೂಕಾಂಬಿಕಾ ವಾಟರ್ ಸರ್ವೀಸ್ ಸಮೀಪ ನಡೆದಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುರ್ಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕಳ್ಳತನಕ್ಕೊಳಗಾದ ಮಾಂಗಲ್ಯ ಸರವನ್ನು ಹಿಂಪಡೆಯಲಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಮಹೇಶ ಪರಸಪ್ಪ ಕುರಿ (26) ಹಾಗೂ ಹುಬ್ಬಳ್ಳಿಯ ಆನಂದ ನಗರ ಕೃಷ್ಣಾ ಕಾಲೋನಿಯ ಹಣಮಂತ ಶಿರಹಟ್ಟಿ (22) ಬಂಧಿತ ಆರೋಲಿಗಳಾಗಿದ್ದು, ಇವರಿಬ್ಬರು ಏಪ್ರಿಲ್ 17ರಂದು ಮಧ್ಯಾಹ್ನ, ಬಸ್ತಿಮಕ್ಕಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗಮ್ಮ ಸುಕ್ರ ಮೊಗೇರ ಎಂಬವರ ಮಾಂಗಲ್ಯ ಸರವನ್ನು ಕಿತ್ತುಪರಾರಿಯಾಗಿದ್ದರು.
ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಸಂತೋಷ ಕಾಯ್ಕಿಣಿ ಹಾಗೂ ಮುರ್ಡೇಶ್ವರ ಠಾಣೆಯ ಪಿಎಸ್‌ಐ ಹಣಮಂತ ಬಿರಾದಾರ್ ಅವರ ನೇತೃತ್ವದ ತಂಡ ಆರೋಪಿಗಳನ್ನು ಶಿರಸಿಯಲ್ಲಿ ಬಂಧಿಸಿ, ಕೃತ್ಯಕ್ಕೆ ಬಳಸಿದ 1.5 ಲಕ್ಷ ಮೌಲ್ಯದ ಬೈಕ್, 2.2 ಲಕ್ಷ ಬೆಲೆ ಬಾಳುವ 26 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ವಶಪಡಿಸಿದ ವಸ್ತುಗಳ ಮೌಲ್ಯ ಸುಮಾರು 3.8 ಲಕ್ಷವಾಗಿದೆ.
ಈ ಕಾರ್ಯಾಚರಣೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ, ಮತ್ತು ಭಟ್ಕಳ ಡಿವೈಎಸ್ಪಿ ಮಹೇಶ್ ಕೆ ಮಾರ್ಗದರ್ಶನ ನೀಡಿದ್ದು, ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾರ್ವಜನಿಕರಿಂದ ಹಾಗೂ ಪೊಲೀಸ್ ಇಲಾಖೆ ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ , ಭಟ್ಕಳ