SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ

- ಸಾಧಕರ ಯಾದಿಯಲ್ಲಿ ಹೆಸರು ದಾಖಲು
- ಶಾಲೆಗೆ ಪ್ರಥಮ ಸ್ಥಾನ: ಊರಿಗೂ, ಕುಟುಂಬಕ್ಕೂ ಹೆಮ್ಮೆ
- ರೈತ ಮಗಳ ಸಾಧನೆ ಇತರರಿಗೂ ಮಾದರಿ
ಅಂಕೋಲಾ: ಕೃಷಿಯನ್ನೇ ಜೀವನಾಧಾರವಾಗಿರಿಸಿಕೊಂಡ ರೈತ ಕುಟುಂಬದ ಮಗಳೊಬ್ಬಳು ತನ್ನ ಸತತ ಪರಿಶ್ರಮದಿಂದ ತಾನು ಹುಟ್ಟಿದ ಊರಿನಲ್ಲಿಯೇ ವಿಧ್ಯಾಭ್ಯಾಸ ಮಾಡಿ, ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶೇ 95 ಕ್ಕೂ ಹೆಚ್ಚಿನ ಅಂಕಗಳಿಸಿ ಉತ್ತಮ ಸಾಧನೆ ತೋರುವ ಮೂಲಕ ತನ್ನ ತಂದೆ ತಾಯಿ , ಕುಟುಂಬ ವರ್ಗ ಹಾಗೂ ಊರಿನ ಜನರು ಮತ್ತು ಕಲಿತ ಶಾಲೆಗೆ ಹೆಮ್ಮೆ ಹಾಗೂ ಅಭಿಮಾನ ಮೂಡಿಸಿದ್ದಾಳೆ.
ರೈತನ ಮಗಳ ಸಾಧನೆ
ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶವಾದ ತೆಂಕಣಕೇರಿಯ ಸಿಂಚನಾ ಲಕ್ಷ್ಮಣ ನಾಯ್ಕ ಎನ್ನುವ ಕುವರಿ ಸ್ಥಳೀಯ ಆದರ್ಶ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಪ್ರಸಕ್ತ ಸಾಲಿನ ಎಸ್.ಎಸ್. ಎಲ್. ಸಿ ಪರೀಕ್ಷೆಯಲ್ಲಿ 595 ಅಂಕಗಳನ್ನು ಪಡೆದು 95.20 ಪ್ರತಿಶತ ಸಾಧನೆ ಮಾಡಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ , ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು ತಾಲೂಕಿನಲ್ಲಿ ಉತ್ತಮ ಸಾಧಕರ ಯಾದಿಯಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ.

ಇಂಜೀನಿಯರ್ ಆಗಬೇಕೆಂಬ ಕನಸು
ತನ್ನೂರು ತೆಂಕಣಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ ಹತ್ತಿರವೇ ಇದ್ದ ಆದರ್ಶ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿ ವಿದ್ಯಾರ್ಥಿಗಳ ಭವಿಷ್ಯದ ಮಹತ್ವದ ಮೈಲಿಗಲ್ಲಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಗೊಂಡು ಕಲಿತ ಶಾಲೆಗೆ, ಊರಿಗೆ ಮತ್ತು ಸಂಪೂರ್ಣ ರೈತ ಸಮುದಾಯಕ್ಕೆ ಕೀರ್ತಿ ತಂದಿದ್ದಾಳೆ. ಸಿಂಚನಾಳ ತಂದೆ ಲಕ್ಷ್ಮಣ ಬೊಮ್ಮಯ್ಯ ನಾಯ್ಕ ಮತ್ತು ತಾಯಿ ಸಂಗೀತಾ ನಾಯ್ಕ ಮತ್ತು ಅವರ ಕುಟುಂಬ ರೈತಾಬಿ ಮೂಲಕ ಗುರುತಿಸಿಕೊಂಡಿದ್ದು ಸದಾ ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಲಕ್ಷ್ಮಣ ನಾಯ್ಕ ಪ್ರಗತಿಪರ ರೈತರಾಗಿದ್ದು ಸ್ಥಳೀಯವಾಗಿ ಮಾಣಿ ಎಂದೇ ಗುರುತಿಸಿಕೊಂಡಿರುವ ಅವರು ಮಗಳ ಓದಿಗೆ ಸದಾ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಸಿಂಚನಾ ಅತ್ಯುನ್ನತ ಶಿಕ್ಷಣ ಪಡೆದು ಸಂಪೂರ್ಣ ರೈತ ಸಮುದಾಯಕ್ಕೆ ಹೆಮ್ಮೆಯಾಗಲಿ ಎಂಬುದು ತಂದೆ-ತಾಯಿಗಳ ಆಶಯವಾಗಿದೆ.
ತನ್ನ ಶೈಕ್ಷಣಿಕ ಸಾಧನೆಯ ಹಿಂದೆ ತಂದೆ ತಾಯಿ, ಗುರು ಹಿರಿಯರ ಪ್ರೋತ್ಸಾಹ ಮತ್ತು ಬೆಂಬಲ ಹಾಗೂ ಮಾರ್ಗದರ್ಶನವಿದೆ ಎನ್ನುವ ಸಿಂಚನಾ,ಮುಂದಿನ ಹಂತದ ಶಿಕ್ಷಣವನ್ನು ಇನ್ನೂ ಹೆಚ್ಚಿನ ಸಾಧನೆಯೊಂದಿಗೆ ಪೂರೈಸಿ , ಇಂಜೀನಿಯರ್ ಆಗಬೇಕೆಂಬ ಕನಸು ಹೊತ್ತಿದ್ದು ಸಿಂಚನಾ ಅದನ್ನು ವ್ಯಕ್ತಪಡಿಸಿದ್ದಾಳೆ.
ತಮ್ಮ ಆಡಳಿತ ಮಂಡಳಿ ಯಡಿ ನಡೆಯುವ ಆದರ್ಶ ಪ್ರೌಢಶಾಲೆಯ ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಹಾಗೂ ಸಿಂಚನಾ ಮತ್ತಿತರ ವಿದ್ಯಾರ್ಥಿಗಳ ಸಾಧನೆ , ಶಿಕ್ಷಕ ವೃಂದದ ಪರಿಶ್ರಮದ ಬಗ್ಗೆ ಮುಖ್ಯಸ್ಥರಾದ ನಿತ್ಯಾನಂದ ನಾಯ್ಕ ಅತೀವ ಹೆಮ್ಮೆ ಹಾಗೂ ಸಂತಸ ವ್ಯಕ್ತ ಪಡಿಸಿ ಸರ್ವರನ್ನು ಅಭಿನಂದಿಸಿದರು.
ಶಿಕ್ಷಕ ವರ್ಗದ ಪರಿಶ್ರಮಕ್ಕೆ ಅಭಿನಂದನೆ
ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ರಾಜೇಶ ಮಿತ್ರಾ ನಾಯ್ಕ ಈ ಕುರಿತು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆಯಲ್ಲಿ ಬಹುತೇಕ ಬಡ – ಹಿಂದುಳಿದ ವರ್ಗದ ಮಕ್ಕಳು ಹಾಗೂ ದೂರದೂರಿಂದ ಬಂದು ಸರ್ಕಾರಿ ಹಾಸ್ಟೆಲ್ ಗಳಲ್ಲಿ ಉಳಿದು ಇಲ್ಲಿ ವಿದ್ಯಾಭ್ಯಾಸ ಮಾಡುವವರೇ ಹೆಚ್ಚಿದ್ದಾರೆ. ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೂ , ಮುಖ್ಯಾಧ್ಯಾಪಕ ಪ್ರದೀಪ ನಾಯಕ ಸೇಂದು ಸೇರಿದಂತೆ ಶಿಕ್ಷಕ ವರ್ಗದ ಪರಿಶ್ರಮಕ್ಕೂ ಅಭಿನಂದಿಸುತ್ತೇವೆ ಎಂದರು.
ಒಟ್ಟಾರೆಯಾಗಿ ಯಕ್ಷಗಾನ , ಸಾಂಸ್ಕೃತಿಕ ಮತ್ತಿತರ ರಂಗಗಳಲ್ಲಿ ಗುರುತಿಸಿಕೊಂಡ ಬಹುಮುಖ ವ್ಯಕ್ತಿತ್ವದ ಪ್ರತಿಭೆ ಸಿಂಚನಾ ನಾಯ್ಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿ, ರೈತನ ಮಗಳ ಸಾಧನೆ ಇತರರಿಗೂ ಮಾದರಿ ಹಾಗೂ ಪ್ರೇರಪಣೆ ಮೂಡಿಸುವಂತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಹಲವು ಸವಾಲುಗಳನ್ನು ಮೆಟ್ಟಿ ನಿಂತು , ಗುಣಮಟ್ಟದ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಗಮನಾರ್ಹ ಸಾಧನೆ ಮಾಡಲು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಹೆಸರಿಗೆ ತಕ್ಕಂತೆ ಆದರ್ಶ ಪ್ರೌಢಶಾಲೆ ಆದರ್ಶವಾಗಿಯೇ ಇರುವುದು ಶಿಕ್ಷಣ ಪ್ರೇಮಿಗಳು ಹೆಮ್ಮೆ ಪಡುವ ವಿಚಾರವಾಗಿದೆ. ಇಂಥ ಶಾಲೆ ಮತ್ತು ಮಕ್ಕಳಿಗೆ ಸರ್ಕಾರ , ಸಂಬಂಧಿತ ಇಲಾಖೆ, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ