ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ: ಸಮಸ್ತ ಜನರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥನೆ

- ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ
- ಹತ್ತು ಸಾವಿರ ಧನ್ವಂತರಿ ಜಪ, ಹೋಮಹವನ
- ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಭಾಗಿ
ಅಂಕೋಲಾ: ಪಾರ್ಶ್ವವಾಯುವಿಗೆ ರಾಮಬಾಣದಂತಿರುವ ನಾಟಿ ಔಷಧಿ ಸೇವೆ ನೀಡುವ ಮೂಲಕ ಜಗದ್ವಿಖ್ಯಾತ ವಾಗಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಿ ವೈದ್ಯ ಬೆಳಂಬಾರದ ಹನುಮಂತಗೌಡರ ಮನೆಯಲ್ಲಿ ಹತ್ತು ಸಾವಿರ ಧನ್ವಂತರಿ ಜಪ ಮತ್ತು ಹೋಮ ಹಾಗೂ ವಿವಿಧ ದೇವತಾ ಕಾರ್ಯ ಕೈಗೊಂಡು ಸಕಲರ ಆರೋಗ್ಯ ಭಾಗ್ಯ ವೃದ್ಧಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಆರ್ ವಿ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ದೈವಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ದೇವ – ದೇವತೆಗಳ ವಿಶೇಷ ಆರಾಧನೆ
ಅಂಕೋಲಾ ತಾಲೂಕಿನ ಬೆಳಂಬಾರದ ಹೆಸರಾಂತ ನಾಟಿ ವೈದ್ಯ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತ ಬೊಮ್ಮ ಗೌಡ ಇವರ ಮನೆಯಲ್ಲಿ,ದಶ ಸಹಸ್ರ ಧನ್ವಂತರಿ ಜಪ ಮತ್ತು ಹೋಮ , ಗಣಹವನ, ಚಂಡಿಕಾ ಹೋಮ, ಸಪ್ತಶತಿ ಪಾರಾಯಣ,ಗ್ರಹ ಶಾಂತಿ ಹೋಮ, ಸರ್ಪ ಶಾಂತಿ ಹೋಮ ಹಾಗೂ ದೇವ – ದೇವತೆಗಳ ವಿಶೇಷ ಆರಾಧನೆ , ಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳು ಮೇ 14 ಮತ್ತು 15 ರಂದು 2 ದಿನಗಳ ಕಾಲ ವಿಜೃಂಭಣೆಯಿoದ ನೆರವೇರಿತು.
ಸ್ವತಃ ನಾಟಿ ವೈದ್ಯರಾಗಿರುವ ಹನುಮಂತ ಗೌಡರು, ತಾವು ಮತ್ತು ತಮ್ಮ ಕುಟುಂಬವಷ್ಟೇ ಆರೋಗ್ಯದಿಂದಿದ್ದರೆ ಸಾಲದು, ತಮ್ಮಲ್ಲಿ ಬರುವ ಪಾರ್ಶ್ವವಾಯು ಪೀಡಿತರು ಸೇರಿದಂತೆ ಇತರೆ ಎಲ್ಲರ ಆರೋಗ್ಯ ಭಾಗ್ಯ ವೃದ್ಧಿಸಲಿ ಎಂದು ಸಂಕಲ್ಪ ಮಾಡಿಕೊಂಡು ಈ ವಿಶೇಷ ಧಾರ್ಮಿಕ ಕಾರ್ಯ ಹಮ್ಮಿಕೊಂಡಿದ್ದರು. ಗೋಕರ್ಣದ ಪ್ರಸಿದ್ಧ ವಿದ್ವಾನ್ ದಿಲೀಪ್ ಷಡಕ್ಷರಿ ಮತ್ತು ಇತರ ವೈದಿಕರು ಹತ್ತು ಸಾವಿರ ಧನ್ವಂತರಿ ಜಪ , ಗಣಪತಿ , ಲಕ್ಷ್ಮೀ, ಸರಸ್ವತಿ, ನಾಗ, ಚಂಡಿಕಾ ಇತರೇ ಶಕ್ತಿ ದೇವ – ದೇವತೆಗಳ ವಿಶೇಷ ಆರಾಧನೆ , ಹೋಮ, ಪೂಜೆ ಸಲ್ಲಿಸಿ , ಹನುಮಂತ ಗೌಡ ಕುಟುಂಬದ ಹಾಗೂ ಲೋಕದ ಸಮಸ್ತರ ಆರೋಗ್ಯ ಸೌಭಾಗ್ಯಕ್ಕೆ ಪ್ರಾರ್ಥಿಸಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಧಾರ್ಮಿಕ ಕಾರ್ಯ ನಡೆಸಿಕೊಟ್ಟರು.
ಸಚಿವ ಆರ್ ವಿ ದೇಶಪಾಂಡೆಗೆ ಭವ್ಯ ಸ್ವಾಗತ
ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ಧಿ ಮತ್ತು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ಅವರು ಈ ಹಿಂದಿನಿoದಲೂ ಗೌಡರ ಕುಟುಂಬದೊoದಿಗೆ ಆತ್ಮೀಯ ಓಡನಾಟ ಹೊಂದಿದ್ದು ,ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಹನುಮಂತ ಗೌಡ ಕುಟುಂಬದ ಪರವಾಗಿ ಮುತೈದೆಯರಿಂದ ಪೂರ್ಣಕುಂಬ ಹಾಗೂ ವೈದಿಕರ ವೇದ ಘೋಷಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.
ಆರ್ ವಿ ದೇಶಪಾಂಡೆ ಅವರು ಹನುಮಂತ ಗೌಡ ಕುಟುಂಬದವರೊoದಿಗೆ ದೇವತಾ ಕಾರ್ಯದಲ್ಲಿ ಕೈ ಜೋಡಿಸಿ ಹೋಮ ಕುಂಡಕ್ಕೆ ಅಷ್ಟದ್ರವ್ಯ ಹಾಗೂ ಪೂರ್ಣಾಹುತಿ ಸಮರ್ಪಿಸಿ, ಪ್ರಸಾದ ಸ್ಪೀಕರಿಸಿದರು. ಹನುಮಂತ ಗೌಡ ಕುಟುಂಬದ ಹಾಗೂ ಇತರರೊಂದಿಗೆ ಬಹುಹೊತ್ತು ಆತ್ಮೀಯತೆಯಿಂದ ಕಳೆದರಲ್ಲದೇ ಎಲ್ಲ ಸದಸ್ಯರೊಂದಿಗೆ ಗ್ರುಪ್ ಫೋಟೋ ತೆಗೆಸಿಕೊಂಡರು.
ಸ್ಥಳೀಯ ಜನಪದ ಹಾಡುಗಾರ್ತಿ ಲಕ್ಷ್ಮೀ ಗೌಡ ಸಂಗಡಿಗರ ಹಾಡು ಆಲಿಸಿದ ದೇಶಪಾಂಡೆ
ಈ ವೇಳೆ ಮಾತನಾಡಿದ ಅವರು ಹನುಮಂತ ಗೌಡರ ಕುಟುಂಬದಲ್ಲಿ ಆರೋಗ್ಯ , ಶಿಕ್ಷಣ , ಸಕಲ ಸೌಭಾಗ್ಯ ವೃದ್ಧಿಸಲಿ , ಮತ್ತು ತನಗೆ ತೋರಿದ ಪ್ರೀತಿ ಹಾಗೂ ಗೌರವಕ್ಕೆ ಚಿರರುಣಿ ಎಂದು ಹೇಳಿ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಸುದೈವ ತಮ್ಮದಾಯಿತು ಎಂದರು. ಸ್ಥಳೀಯ ಜನಪದ ಹಾಡುಗಾರ್ತಿ ಲಕ್ಷ್ಮೀ ಗೌಡ ಸಂಗಡಿಗರ ಹಾಡು ಆಲಿಸಿದ ದೇಶಪಾಂಡೆ ಅವರು , ಕಿರು ನಗದು ಪ್ರೋತ್ಸಾಹ ನೀಡಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಇತರ ಪ್ರಮುಖರೊಂದಿಗೆ ಹನುಮಂತ ಗೌಡರ ತಾಯಿ ಸಣ್ಣಮ್ಮಳನ್ನು ಗೌರವಿಸಿ ನಿಮ್ಮ ಮಗ ನಾಟಿ ವೈದ್ಯಕೀಯ ಹಾಗೂ ಇತರೆ ಸಾಮಾಜಿಕ ಕೆಲಸಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು , ತಮ್ಮ ಕುಟುಂಬದಿAದ ಈ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗಲಿ. ನಿಮ್ಮ ಕುಟುಂಬದ ಕೀರ್ತಿಯೂ ಹೆಚ್ಚಲಿ ಎಂದು ಶುಭ ಹಾರೈಸಿ, ಈ ಕುಟುಂಬ ಬಹುಕಾಲದಿಂದ ತನ್ನ ಮೇಲಿಟ್ಟಿರುವ ಪ್ರೀತಿ – ಅಭಿಮಾನ ಹಾಗೂ ಗೌರವಕ್ಕೆ ಕೃತಜ್ಞತೆ ಸೂಚಿಸಿದರು. ದೇಶಪಾಂಡೆ ಸಹಿತ ಇತರೆ ಅತಿಥಿ ಗಣ್ಯರು, ಸಮಾಜ ಬಾಂಧವರು ಮತ್ತಿತರ ಎಲ್ಲ ವರ್ಗದ ಜನರಿಗೆ ಹನುಮಂತ ಗೌಡ ಕುಟುಂಬದವರು ಪ್ರೀತ್ಯಾಧಾರಗಳಿಂದ ಬರಮಾಡಿಕೊಂಡು , ಪ್ರಸಾದ ನೀಡಿ ಗೌರವ ಸಮರ್ಪಿಸಿದರು.
ಸ್ಥಳೀಯ ಜನಪದ ಕಲೆ ಪ್ರದರ್ಶನ
ಮಾತೋಶ್ರೀ ಸಣ್ಣಮ್ಮ ಗೌಡರ ಆಶೀರ್ವಾದದೊಂದಿಗೆ ಹನುಮಂತ ಗೌಡ ಮತ್ತು ಅವರ ಧರ್ಮಪತ್ನಿ ಶಾರದಾ ಗೌಡ ದಂಪತಿಗಳು ವೈದಿಕರ ಸೂಚನೆಯಂತೆ ದೇವತಾ ಕಾರ್ಯ ಕೈಗೊಂಡರು. ಹನುಮಂತ ಗೌಡರ ಸಹೋದರ – ಸಹೋದರಿಯರು , ಮತ್ತು ಕುಟುಂಬ ವರ್ಗ ಹಾಗೂ ಬಂಧು-ಬಾoಧವರು, ಸಮಾಜದ ಪ್ರಮುಖರು ಮಳೆಯ ಆತಂಕದ ನಡುವೆಯೂ ದೇವತಾ ಕಾರ್ಯ ಸಾಂಘವಾಗಿ ನೆರವೇರಿಸಲು ಸೇವೆ – ಸಹಕಾರ ನೀಡಿದರು.
ನಾಟಿ ವೈದ್ಯ ಹನುಮಂತ ಗೌಡ ಅವರು ಮಾತನಾಡಿ ನಮ್ಮ ಕುಟುಂಬದ ಹಿರಿಯರು ಈ ರೀತಿ ದೇವತಾ ಕಾರ್ಯ ನಡೆಸಿಕೊಂಡು ಬರುತ್ತಿದ್ದು, ನಮ್ಮಿಂದ ಕಾಲ ಕಾಲಕ್ಕೆ ಅದು ಸಾಧ್ಯವಾಗದಿದ್ದರೂ ಕುಟುಂಬದವರೆಲ್ಲ ಕೂಡಿ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿಯವುದು ಖುಷಿ ತಂದಿದೆ. ನಮ್ಮ ಹೆಮ್ಮೆಯ ನಾಯಕರಾದ ಆರ್ ವಿ ದೇಶಪಾಂಡೆ ಸಹಿತ ನಮ್ಮ ಪ್ರೀತಿಯ ಆಮಂತ್ರಣ ಮನ್ನಿಸಿ ಬಂದ ಎಲ್ಲ ಹಿರಿ-ಕಿರಿಯರಿಗೆ, ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ ಸರ್ವರಿಗೆ ನಮ್ಮ ಕುಟುಂಬದ ಪರವಾಗಿ ಅನಂತ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಹಾಲಕ್ಕಿಗಳ ಜನಪದ ಸಂಸ್ಕೃತಿಯೊoದಿಗೆ ಹಾಸು ಹೊಕ್ಕಾಗಿರುವ ಗುಮಟೆ ಪದವನ್ನು ಸ್ಥಳೀಯ ಹೆಸರಾಂತ ಜನಪದ ಕಲಾವಿದರು ಪ್ರದರ್ಶಿಸಿ , ಜಿಲ್ಲೆಯ ಶಕ್ತಿ ದೇವ -ದೇವತೆಯರಲ್ಲಿ ಸಕಲರ ಒಳಿತಿಗೆ ಪ್ರಾರ್ಥಿಸಿದರು. ಹನುಮಂತ ಗೌಡ ಹಾಗೂ ಸಹೋದರ ನಾಗೇಂದ್ರ ಮತ್ತಿತರರು ತಾವೂ ಸಹ ಗುಮ್ಮಟೆ ವಾದನಮಾಡಿ ಪದ ಗಾರಿಕೆಗೆ ಧ್ವನಿ ಸೇರಿಸಿ ತಮ್ಮ ಜನಪದ ಕಲೆ ಪ್ರದರ್ಶಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ