
ಹೊನ್ನಾವರ: ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಅಂಗಡಿಯಲ್ಲಿದ್ದ ಮಹಿಳೆಯ ಮಾಂಗಲ್ಯಸರ ದೋಚಿ ಪರಾರಿಯಾದ ಘಟನೆ ತಾಲೂಕಿನ ಗುಣವಂತೆಯ ಹಕ್ಕಲಕೇರಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ದೀಪಿಕಾ ಗೌಡ ಎಂಬ ಮಹಿಳೆ ಅಂಗಡಿ ನಡೆಸುತ್ತಿದ್ದರು. ಸಾಮಾನು ಕೇಳುವ ನೆಪದಲ್ಲಿ ಖದೀಮರು ಅಂಗಡಿ ಬಳಿ ಬಂದಿದ್ದಾರೆ.
ಮಹಿಳೆ ಸಾಮಾನು ಕೊಡಲು ಹಿಂದಿರುಗುವ ವೇಳೆ ಮಾಂಗಲ್ಯ ಸರವನ್ನು ಹರಿದಿದ್ದಾರೆ ಎನ್ನಲಾಗಿದೆ. ಆ ಇಬ್ಬರು ಆಗಂತುಕರು ಬೈಕಿನಲ್ಲಿ ಬಂದಿದ್ದು, ಒಬ್ಬರು ಹೆಲ್ಮೆಟ್ ಧರಿಸಿದ್ದ. ಇನ್ನೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ. ಅವರಿಬ್ಬರು ಹೊನ್ನಾವರ ಕಡೆ ಬೈಕ್ ಓಡಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಅಂದಾಜು 2 ಲಕ್ಷದ 85 ಸಾವಿರ ಮೌಲ್ಯದ ಬಂಗಾರದ ಸರ ಎಗರಿಸಿಕೊಂಡು ಹೋಗಿದ್ದಾರೆ ಎಂದು ದೀಪಿಕಾ ಗೌಡ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಕಳ್ಳತನ ಮಾಡಿದ ಕಳ್ಳರು ಬೈಕ್ ನಲ್ಲಿ ಪರಾರಿಯಾಗುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಗಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ