
ಕುಮಟಾ: ಮೊದಲ ಮಳೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಮಳೆಯ ಪರಿಣಾಮವಾಗಿ ಕಾರವಾರ ಶಿರಸಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಸಿತವಾಗಿದ್ದು, ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಹೆದ್ದಾರಿ ಕುಸಿತ ಉಂಟಾಗುತ್ತಿರುವುದರಿoದಾಗಿ ಈ ರಸ್ತೆಯಲ್ಲಿ ಸತತವಾಗಿ ವಾಹನಗಳು ಸಂಚಾರ ನಡೆಸುತ್ತಿರುವುದರಿಂದ ಗುಡ್ಡ ಕುಸಿತವಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಇರುವುದರಿಂದ ಕಾರವಾರ ಶಿರಸಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ನಿಧಾನವಾಗಿ ಹೆದ್ದಾರಿ ಬದಿಯಲ್ಲಿ ಕುಸಿತ ಉಂಟಾಗುತ್ತಿದ್ದು, ಇದೀಗ ಸುರಿದ ಭಾರೀ ಮಳೆಗೆ ಇನ್ನಷ್ಟು ಪ್ರಮಾಣದಲ್ಲಿ ಹೆದ್ದಾರಿ ಕುಸಿತವಾಗಿದೆ.
ಕಳೆದ ತಿಂಗಳು ಜಲ ಜೀವನ ಮಷಿನ್ ಕಾಮಗಾರಿ ನಡೆಸಿದ ಗುತ್ತಿಗೆದಾರ ಕಂಪನಿಯವರು ಗುಡ್ಡದ ತುದಿಯಲ್ಲಿ ಮಣ್ಣು ತೆಗೆದು ಅವೈಜ್ಞಾನಿಕವಾಗಿ ಮಣ್ಣನ್ನು ಮುಚ್ಚದೇ ಹೋಗಿದ್ದು ಈ ಬಗ್ಗೆ ಸ್ಥಳೀಯರು ಹೆದ್ದಾರಿ ಕುಸಿಯುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಮರ್ಪಕವಾಗಿ ಕಾಮಗಾರಿ ಮಾಡದೇ ಇರುವುದೇ ಈ ದುರಂತಕ್ಕೆ ಕಾರಣವಾಗಿದ್ದು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈ ರಸ್ತೆಯಲ್ಲಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕತಗಾಲದಿಂದ ಸಂಚಾರ ನಡೆಸುವವರು ಬದಲೀ ರಸ್ತೆಯಾಗಿ ಕತಗಾಲ ದೀವಗಿ ಮಿರ್ಜಾನ್ ಮೂಲಕ ಸಂಚಾರ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಅದೇ ರೀತಿ ಕುಮಟಾ ಶಿರಸಿ ರಾಜ್ಯ ಹೆದ್ದಾರಿಯಲ್ಲಿನ ದೇವಿ ಮನೆ ಭಾಗದಲ್ಲಿ ಗುಡ್ಡಕುಸಿತವಾಗಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಜೂನ್ 30 ರ ವೆರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.
ಬ್ಯೂರೋ ರಿಪೋರ್ಟ ವಿಸ್ಮಯ ನ್ಯೂಸ್