Join Our

WhatsApp Group
Important
Trending

ಮಳೆಗಾಲ ಆರಂಭವಾದ್ರೆ ಸಾಕು ಈ ಊರಲ್ಲಿ ನರಕಯಾತನೆ: ಅನಾರೋಗ್ಯ ಪೀಡಿತರಿಗೆ ಜೋಲಿಯೇ ಗತಿ

ಮೂಲಸೌಕರ್ಯಕ್ಕಾಗಿ ಚಾತಕ ಪಕ್ಷಿಯಂತೆಯೇ ಕಾದು ಕುಳಿತಿದ್ದಾರೆ ಗ್ರಾಮಸ್ಥರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಯಿತು ಎಂದರೆ ಸಮಸ್ಯೆಗಳ ಸುರಿಮಳೆಯೇ ಆರಂಭವಾಗುತ್ತದೆ. ಮಳೆಗಾಲದ ದಿನಗಳಲ್ಲಿ ಗುಡ್ಡ ಕುಸಿತ ಗ್ರಾಮಗಳು ಜಲಾವೃತ ರಸ್ತೆ ಸಂಪರ್ಕ ಕಡಿತ ಸಾಮಾನ್ಯವಾಗಿದೆ. ಇದರಿಂದಾಗಿ ಜಿಲ್ಲೆಯ ಜನ ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ಹಲವಾರು ಪ್ರದೇಶಗಳಲ್ಲಿದೆ. ಹೌದು ಮನೆಯಲ್ಲಿ ಕಾಲು ಜಾರಿ ಬಿದ್ದ ವೃದ್ದೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಬಿದಿರ ಗಳದಲ್ಲಿ ಕಟ್ಟಿ ಜೋಲಿ ಮಾಡಿ ಜೀವ ಪಣಕ್ಕಿಟ್ಟು 40 ಕಿಲೋಮೀಟರ್ ಕ್ರಮಿಸಿ ಚಿಕಿತ್ಸೆ ಕೊಡಿಸಿದ ಮನಕಲಕುವ ಘಟನೆಯೊಂದು ಜರುಗಿದೆ.

ಹೌದು ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿರಗುಣಿಯಲ್ಲಿ ಗ್ರಾಮದಲ್ಲಿ. ರಾತ್ರಿ ಶಿರಗುಣಿ ಗ್ರಾಮದ ಮಾದೇವಿ ಸುಬ್ರಾಯ್ ಹೆಗಡೆ ಎಂಬುವವರು ಮನೆಯ ಅಂಗಳದಲ್ಲಿ ಸುರಿದ ಮಳೆಗೆ ಜಾರಿಬಿದ್ದಿದ್ದು, ಕಾಲು ಮುರಿದಿದೆ. ಇವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ಗೆ ಕರೆ ಮಾಡಲು ನೆಟ್ವರ್ಕ ಸಂಪರ್ಕವೇ ಇಲ್ಲ. ಇನ್ನು ಮಳೆಯಿಂದ ವಿದ್ಯುತ್ ಸಂಪರ್ಕವೂ ಇಲ್ಲ. ಇನ್ನು ತಕ್ಷಣ ವಾಹನದಲ್ಲಿ ಕರೆದೊಯ್ಯಲು ರಸ್ತೆಯೇ ಸರಿ ಇಲ್ಲದೇ ಬಿದಿರ ಗಳದಲ್ಲಿ ವೃದ್ಧೆಯನ್ನು ಜೋಲಿಮಾಡಿ ಕಟ್ಟಿ ಬುಜದಲ್ಲಿ ಹೊತ್ತು ಸುಮಾರು ಐದಕ್ಕೂ ಹೆಚ್ಚು ಕಿಲೋಮೀಟರ್ ದೂರ ದುರ್ಗಮ ಹಾದಿಯಲ್ಲಿ ಜೀವ ಪಣಕ್ಕಿಟ್ಟು ಮಳೆಯಲ್ಲೇ ತೆರಳಿದ್ದಾರೆ.

ನಂತರ ಸಂಪರ್ಕದ ರಸ್ತೆಗೆ ಬಂದು ಸಿಕ್ಕ ವಾಹನದಲ್ಲಿ ಹಾಕಿಕೊಂಡು ಶಿರಸಿಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ಮನಕಲಕುವ ಘಟನೆ ಜರುಗಿದೆ. ಇನ್ನು ಈ ಗ್ರಾಮದಲ್ಲಿ ಪ್ರತಿ ವರ್ಷ ಮಳೆ ಬಂತು ಎಂದರೇ ವಾಹನವಿರಲಿ ಹೆಜ್ಜೆ ಹಾಕುವುದೂ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆ ಮಾಡಿಕೊಡುವಂತೆ ಸಮಬಂಧಪಟ್ಟ ಕಚೇರಿಗಳಿಗೆ ತಿರುಗಾಟ ನಡೆಸುವುದರ ಮೂಲಕ ಇಲ್ಲಿನ ಜನ ಚಪ್ಪಲಿ ಸವಿಸಿದ್ದಾರೆ. ಇಲ್ಲಿನ ಶಾಸಕ ಭೀಮಣ್ಣ ನಾಯ್ಕ ರವರಿಗೂ ಮನವಿ ಮಾಡಿದ್ದಾರೆ.

ಆದರೇ ಗ್ರಾಮಕ್ಕೆ ರಸ್ತೆಮಾಡುವ ಔದಾರ್ಯ ಮಾತ್ರ ಯಾವ ಅಧಿಕಾರಿಯೂ ತೋರಿಲ್ಲ. ಮಳೆ ಪ್ರಾರಂಭವಾದಾಗಿನಿoದ ಈ ಗ್ರಾಮದ ಜನರಿಗೆ ನಗರ ಸಂಪರ್ಕ ಕಡಿತವಾಗುತ್ತದೆ. ಈ ಗ್ರಾಮದಲ್ಲಿ 80 ಕ್ಕೂ ಹೆಚ್ಚು ಹವ್ಯಕ ಮನೆಗಳಿವೆ. ಊರಿನಲ್ಲಿ ಅಂಗನವಾಡಿ ಇದೆ. ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಮಳೆ ಹೆಚ್ಚಾದಾಗ ಕೆಸರುನೀರು ತುಂಬಿಕೊoಡು ಮಕ್ಕಳು ಶಾಲೆಗೆ ತೆರಳುವುದೇ ತ್ರಾಸದಾಯಕ ಸಾಹಸ.

ಹೀಗಿರುವ ಈ ಗ್ರಾಮಕ್ಕೆ ಯಾವ ಸೌಕರ್ಯ ಕೊಡದಿದ್ದರೂ ,ಕೊನೆ ಪಕ್ಷ ರಸ್ತೆ ಮಾಡಿಕೊಟ್ಟರೇ ಬಿದಿರಿನ ಗಳವನ್ನ ನಂಬಿ ಬದುಕು ಬಿಗಿಹಿಡಿದು ಕುಳಿತಿರುವ ಈ ಗ್ರಾಮದ ಜನ ನಿಟ್ಟುಸಿರು ಬಿಡಬಹುದಾಗಿದೆ. ಇನ್ನಾದರೂ ಜಡ್ಡು ಹಿಡಿದ ಆಡಳಿತ ,ಬಿಟ್ಟಿ ಭ್ಯಾಗ್ಯ ನೀಡುವ ಸರ್ಕಾರ ಇತ್ತ ಗಮನ ಹರಿಸಿ ರಸ್ತೆ ಭಾಗ್ಯ ಕಲ್ಪಿಸಿ ಜನರ ಬದುಕಿಗೆ ಗ್ಯಾರಂಟಿ ಭಾಗ್ಯ ನೀಡಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್ ಶಿರಸಿ

Back to top button